ಹೊಸವರ್ಷ ಸ್ವಾಗತಕ್ಕೆ ಕೊಡಗು ಸಿದ್ಧ: ಪ್ರವಾಸಿಗರ ಸಂಭ್ರಮಾಚರಣೆಗೆ ಸಾಕ್ಷಿಯಾಗಲಿದೆ ರಾಜಾಸೀಟ್

ಸುತ್ತಲೂ ಹರಡಿ ನಿಂತ ಮಂಜು, ಸಣ್ಣಗೆ ಮೈನಡುಕ ಹುಟ್ಟಿಸುವ ಚಳಿ, ನೀರವ ಮೌನವನ್ನು ಸೀಳುವ ಹಕ್ಕಿಗಳ ಚಿಲಿಪಿಲಿ, ತೇಲಿ ಹೋಗುವ ಕುಳಿರ್ ಗಾಳಿಯ ಸದ್ದು, ಹೀಗೆ ಹತ್ತಾರು ದೃಶ್ಯಗಳು ಕೊಡಗಿನಲ್ಲಿ ವಾಸ್ತವ್ಯ ಹೂಡುವವರಿಗೆ ಅನುಭವವಾಗಿ ಕಾಡುತ್ತದೆ. ಹೀಗಾಗಿಯೇ ಇಂತಹ ಸುಂದರ ಅನುಭವದ ನಡುವೆ ಹೊಸವರ್ಷಾಚರಣೆ ಮಾಡುವ ಸಲುವಾಗಿ ಪ್ರತಿವರ್ಷವೂ ಕೊಡಗಿನತ್ತ ಜನ ಧಾವಿಸುತ್ತಾರೆ.

ಕಳೆದ ಒಂದೆರಡು ದಶಕಗಳಿಂದ ಕೊಡಗಿನಲ್ಲಿ ಹೊಸ ವರ್ಷಾಚರಣೆ ಮಾಡುವ ಸಲುವಾಗಿ ಆಗಮಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಹೀಗಾಗಿ ಮೊದಲೇ ಆನ್ ಲೈನ್ ನಲ್ಲಿ ನೋಂದಣಿ ಮಾಡಿಸುವ ಮೂಲಕ ರೆಸಾರ್ಟ್, ಹೋಟೆಲ್, ಹೋಂ ಸ್ಟೇಗಳು ತುಂಬಿ ತುಳುಕುತ್ತವೆ. ಕಳೆದ ಎರಡು ವರ್ಷಗಳ ಕೊರೊನಾ ಕಾರಣದಿಂದ ವರ್ಷಾಚರಣೆಯನ್ನು ಅದ್ಧೂರಿಯಾಗಿ ಆಚರಣೆ ಮಾಡಿರಲಿಲ್ಲ. ಆದರೆ ಈ ಬಾರಿ ಜನ ಮೈಕೊಡವಿ ನಿಂತಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕೊಡಗಿನತ್ತ ಧಾವಿಸುವ ಸಾಧ್ಯತೆಯಿದೆ.

ಈಗಾಗಲೇ ವಾರಾಂತ್ಯದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿರುತ್ತದೆ. ಹೀಗಿರುವಾಗ ವರ್ಷಾಂತ್ಯದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದಂತು ಖಚಿತ. ಕಳೆದ ಒಂದೆರಡು ದಶಕಗಳ ಹಿಂದೆ ಇಷ್ಟರ ಮಟ್ಟಿಗೆ ಪ್ರವಾಸಿಗರು ಬರುತ್ತಿರಲಿಲ್ಲ. ಜೊತೆಗೆ ಕೊಡಗಿನಲ್ಲಿ ಪ್ರವಾಸೋದ್ಯಮವೂ ಬೆಳೆದಿರಲಿಲ್ಲ. ಆದರೆ ಸುನಾಮಿ ಬಂದ ಬಳಿಕ ಸಮದ್ರ ತೀರಕ್ಕೆ ತೆರಳುವುದಕ್ಕೆ ಹಿಂದೇಟು ಹಾಕಿದ ಪ್ರವಾಸಿಗರು ಮಲೆನಾಡಿನತ್ತ ಮುಖ ಮಾಡಿದರು. ಪರಿಣಾಮ ಪ್ರವಾಸಿಗರು ಕೊಡಗಿಗೆ ಹೆಚ್ಚಿನ ಪ್ರಮಾಣದಲ್ಲಿ ಬರತೊಡಗಿದರು. ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಹೋಂಸ್ಟೇ ಪರಿಕಲ್ಪನೆ ಮೂಡಿತು. ಕೆಲವು ಕಾಫಿ ಬೆಳೆಗಾರರು ತಮ್ಮ ತೋಟದ ಮನೆಯಲ್ಲಿಯೇ ಪ್ರವಾಸಿಗರಿಗೆ ವಾಸ್ತವ್ಯಕ್ಕೆ ಅವಕಾಶ ನೀಡುವುದರೊಂದಿಗೆ ಹೋಂ ಸ್ಟೇ ಆರಂಭಿಸಿದರು.

ಹೋಂಸ್ಟೇಗಳತ್ತ ಜನರ ಪಯಣ

ಹೋಂಸ್ಟೇಗಳತ್ತ ಜನರ ಪಯಣ

ಕ್ರಮೇಣ ಅದು ಉದ್ಯಮವಾಗಿ ಬೆಳೆದ ಪರಿಣಾಮ ಹೋಂಸ್ಟೇಗಳು ಎಲ್ಲೆಂದರಲ್ಲಿ ಹುಟ್ಟಿಕೊಂಡವು. ಸದಾ ನಗರದ ಗೌಜು ಗದ್ದಲದಲ್ಲಿ ಬದುಕು ಕಟ್ಟಿಕೊಂಡಿದ್ದ ಜನ ಒಂದಷ್ಟು ನೆಮ್ಮದಿ ಅರಸಿ ಹೋಂಸ್ಟೇಗಳತ್ತ ಬರತೊಡಗಿದರು. ಕ್ರಮೇಣ ಹೆಚ್ಚಿನವರು ಹೊಸವರ್ಷಾಚರಣೆ ಕೊಡಗಿನಲ್ಲಿ ಆಚರಿಸಲು ಮುಂದಾದರು. ಇದರಿಂದಾಗಿ ಪ್ರತಿವರ್ಷವೂ ಹೊಸವರ್ಷಕ್ಕೆ ಕೊಡಗಿಗೆ ಬಂದು ಯಾವುದಾದರೊಂದು ಸ್ಥಳದಲ್ಲಿ ವಾಸ್ತವ್ಯ ಹೂಡಿ ಸಂಭ್ರಮಿಸುವುದು ಮಾಮೂಲಿಯಾಗಿದೆ.

ಕೊರೊನಾದಿಂದ ನೆಲಕಚ್ಚಿದ ಪ್ರವಾಸೋದ್ಯಮ

ಕೊರೊನಾದಿಂದ ನೆಲಕಚ್ಚಿದ ಪ್ರವಾಸೋದ್ಯಮ

2018ರಲ್ಲಿ ಸುರಿದ ಮಹಾಮಳೆಯಿಂದ ಉಂಟಾದ ಭೂಕುಸಿತ, ನಂತರ ಕಾಡಿದ ಕೊರೊನಾ ಹೊಡೆತ ಕೊಡಗಿನತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸದ ಪರಿಸ್ಥಿತಿಯನ್ನು ಸೃಷ್ಟಿ ಮಾಡಿತ್ತು. ಇದರಿಂದಾಗಿ ಪ್ರವಾಸೋದ್ಯಮ ನಂಬಿದ್ದ ಕೊಡಗಿನ ಜನ ಕಂಗಾಲಾಗಿ ಹೋದರು. ಕೋಟ್ಯಂತರ ಬಂಡವಾಳ ಸುರಿದು ಆರಂಭಿಸಿದ ಉದ್ಯಮ ನೆಲಕಚ್ಚಿತು. ಆದರೆ ಕೊರೊನಾ ಸಂಕಟ ಸ್ವಲ್ಪ ಮಟ್ಟಿಗೆ ದೂರವಾಗಿದ್ದರಿಂದ ನಿಧಾನವಾಗಿ ಚೇತರಿಕೆ ಕಾಣಲು ಆರಂಭಿಸಿದೆ. ಈ ಬಾರಿ ಹೊಸವರ್ಷಾಚರಣೆಯನ್ನು ಅದ್ಧೂರಿಯಾಗಿ ಸಂಭ್ರಮದಿಂದ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹಸಿರಿನಿಂದ ತುಂಬಿ ತುಳುಕುತ್ತಿರುವ ಮಡಿಕೇರಿ

ಹಸಿರಿನಿಂದ ತುಂಬಿ ತುಳುಕುತ್ತಿರುವ ಮಡಿಕೇರಿ

ಇನ್ನು ಕೊಡಗಿನ ಮುಖ್ಯಪಟ್ಟಣ ಮಡಿಕೇರಿ ಈ ಸಮಯದಲ್ಲಿ ವಿಶಿಷ್ಟವಾಗಿ ಆಕರ್ಷಿಸುತ್ತದೆ. ಮುಂಜಾನೆಯ ಮಂಜು ಇಡೀ ನಗರಕ್ಕೆ ಪರದೆ ಎಳೆದು ಅದರೊಳಗೆ ಎಲ್ಲರನ್ನು ಕೂಡಿ ಹಾಕಿಬಿಡುತ್ತದೆ. ಬೀಸಿ ಬರುವ ತಂಗಾಳಿ ಮೈಯೊಳಗೆ ನಡುಕ ಹುಟ್ಟಿಸುತ್ತದೆ. ಇದೀಗ ಮಳೆ ಒಂದಷ್ಟು ದೂರವಾಗಿರುವುದರಿಂದ ಎಲ್ಲೆಲ್ಲೂ ಹಸಿರು ನಾಟ್ಯವಾಡುತ್ತಿದೆ. ಇನ್ನು ಜಿಲ್ಲೆಯೊಳಗೆ ತೆರಳಿದರೆ ಕಾಫಿ ತೋಟಗಳ ಸುಂದರ ದೃಶ್ಯಗಳು ಕಣ್ಮನ ಸೆಳೆಯುತ್ತವೆ. ಅವುಗಳ ನಡುವಿನ ಅತಿಥಿಗೃಹಗಳಲ್ಲಿ ಕಾಲ ಕಳೆಯುವುದು ರೋಮಾಂಚಕ ಅನುಭವ ನೀಡುತ್ತದೆ.

ರಾಜಾಸೀಟ್‌ನಲ್ಲಿ ಹೊಸವರ್ಷಾಚರಣೆಗೆ ಸಿದ್ಧತೆ

ರಾಜಾಸೀಟ್‌ನಲ್ಲಿ ಹೊಸವರ್ಷಾಚರಣೆಗೆ ಸಿದ್ಧತೆ

ಮಡಿಕೇರಿಗೊಂದು ಸುತ್ತು ಹೊಡೆದರೆ ಇತಿಹಾಸದ ಕಥೆ ಹೇಳುವ ಕೋಟೆ, ಅರಮನೆ, ಗದ್ದುಗೆ, ಭಕ್ತರ ಸೆಳೆಯುವ ಓಂಕಾರೇಶ್ವರ ದೇಗುಲ, ನಿಸರ್ಗ ಸೌಂದರ್ಯದ ರಾಜಾಸೀಟ್, ನೆಹರು ಮಂಟಪ, ನಿಶಾನೆ ಬೆಟ್ಟ, ಭೋರ್ಗರೆದು ಧುಮುಕುವ ಅಬ್ಬಿ ಜಲಪಾತ ಅದರಾಚೆಗೆ ಮಂದಾಲಪಟ್ಟಿ ಎಲ್ಲವೂ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಇದೆಲ್ಲದರ ನಡುವೆ ಹಳೆಯ ವರ್ಷದ ವಿದಾಯ ಮತ್ತು ಹೊಸವರ್ಷದ ಸ್ವಾಗತಕ್ಕೆ ಮಡಿಕೇರಿ ನಗರದ ರಾಜಾಸೀಟು ಸಾಕ್ಷಿಯಾಗುತ್ತದೆ. ಡಿಸೆಂಬರ್‌ 31ರ ಸಂಜೆ ರಾಜಾಸೀಟ್‌ನಲ್ಲಿ ನೆರೆಯುವ ಸಾವಿರಾರು ಜನ ಬೆಟ್ಟಗುಡ್ಡಗಳ ನಡುವೆ ಲೀನವಾಗುವ ಸೂರ್ಯಾಸ್ತಮಾನದ ದೃಶ್ಯ ವೀಕ್ಷಿಸುತ್ತಾ ಹಳೆಯ ವರ್ಷಕ್ಕೆ ವಿದಾಯ ಹೇಳುವುದು ಸಂಪ್ರದಾಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+