Fact Check:ಗಣೇಶನ ವಿಗ್ರಹವನ್ನು ತಿರಸ್ಕರಿಸಿದ್ರಾ ಪ್ರಧಾನಿ ಮೋದಿ?
ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಯಕ್ರಮವೊಂದರಲ್ಲಿ ತಮಗೆ ನೀಡಿದ ಗಣೇಶನ ವಿಗ್ರಹವನ್ನು ತಿರಸ್ಕರಿಸುವುದನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಹಳೆಯದಾಗಿದ್ದರೂ ಸದ್ಯ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಮತ್ತೆ ವೈರಲ್ ಮಾಡಲಾಗಿದೆ. ಅಷ್ಟಕ್ಕೂ ಮೋದಿ ಅವರು ನಿಜವಾಗಿಯೂ ಗಣೇಶನ ವಿಗ್ರಹವನ್ನು ತಿರಸ್ಕರಿಸಿದರಾ? ಈ ವಿಡಿಯೋ ಹಿಂದಿರುವ ಸತ್ಯವೇನು ಎಂದು ತಿಳಿಯೋಣ.
ಬೂಮ್ ಸಂಸ್ಥೆಯು ಈ ವೀಡಿಯೋದ ಸತ್ಯಾಸತ್ಯತೆಯ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ವೈರಲ್ ಆದ ವಿಡಿಯೊ ಮೇ 3, 2023ರ ವೀಡಿಯೊ ಎಂದು ಬೂಮ್ ಪರಿಶೀಲನೆ ವೇಳೆ ತಿಳಿದು ಬಂದಿದೆ. ಇದರಲ್ಲಿ ಪಿಎಂ ಮೋದಿ ಅವರಿಗೆ ನೀಡಲಾದ ಇತರ ಉಡುಗೊರೆಗಳೊಂದಿಗೆ ವಿಗ್ರಹವನ್ನು ಸ್ವೀಕರಿಸುತ್ತಿರುವುದನ್ನು ತೋರಿಸಲಾಗಿದೆ. 11 ಸೆಕೆಂಡ್‌ಗಳ ವೈರಲ್ ಆದ ಈ ಕ್ಲಿಪ್‌ನಲ್ಲಿ ಪ್ರಧಾನಿ ಮೋದಿ ಅವರಿಗೆ ವೇದಿಕೆಯಲ್ಲಿದ್ದ ವ್ಯಕ್ತಿಯೊಬ್ಬರು ಗಣೇಶ ಮೂರ್ತಿಯನ್ನು ನೀಡುತ್ತಿರುವುದನ್ನು ತೋರಿಸಲಾಗಿದೆ. ಈ ವೇಳೆ ವಿಗ್ರಹವನ್ನು ಮೋದಿ ಅವರು ತಿರಸ್ಕರಿಸಿದರು ಎಂದು ವಿಡಿಯೋದ ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಫೇಸ್‌ಬುಕ್‌ನಲ್ಲಿ ಈ ವಿಡಿಯೋಕ್ಕೆ ನೀಡದ ಶೀರ್ಷಿಕೆಯೊಂದರ ಪ್ರಕಾರ, "ಒಂದು ವೇಳೆ ರಾಹುಲ್ ಗಾಂಧಿ ಮೋದಿ ಬದಲಿಗೆ ಗಣೇಶನ ವಿಗ್ರಹವನ್ನು ತೆಗೆದುಕೊಳ್ಳಲು ನಿರಾಕರಿಸಿದ್ದರೆ, ಇಂದು ಇಡೀ ಮಾಧ್ಯಮಗಳು ಹಾಗೂ ಬಿಜೆಪಿ ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದರು" ಎಂದು ಬರೆಯಲಾಗಿದೆ.
ಜೊತೆಗೆ 'X' ನಲ್ಲಿ ಮತ್ತೊಬ್ಬ ಬಳಕೆದಾರ ಈ ವೀಡಿಯೋಕ್ಕೆ ಪ್ರತಿಕ್ರಿಯಿಸಿ- "ಗಣೇಶನಿಗಿಂತ ಹೆಚ್ಚೆಂದು ತನ್ನನ್ನು ತಾನು ಭಾವಿಸುವ ಪ್ರಧಾನಿಯನ್ನು ನೀವು ಮರು ಆಯ್ಕೆ ಮಾಡುತ್ತೀರಾ?" ಎಂದು ಪ್ರಶ್ನೆ ಮಾಡಿದ್ದಾರೆ.
ಸತ್ಯ ಪರಿಶೀಲನೆ
ಈ ದೃಶ್ಯವನ್ನು 2023ರ ಮೇ ತಿಂಗಳು ಕರ್ನಾಟಕದ ಅಂಕೋಲಾದಲ್ಲಿ ಪ್ರಧಾನಿ ಮೋದಿ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡುವ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದೆ. ಈ ವೇಳೆ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ ಅವರನ್ನು ಅತ್ಯಂತ ಗೌರವದಿಂದ ಸ್ವಾಗತಿಸಲಾಯಿತು. ಅವರಿಗೆ ಶಾಲು, ಪೇಟ ಮತ್ತು ಹಾರವನ್ನು ಹಾಕಿ ಗಣೇಶ ವಿಗ್ರಹವನ್ನು ನೀಡುವ ಮೂಲಕ ಗೌರವಿಸಲಾಯಿತು.
ಆದರೆ ಈ ವೇಳೆ ಪ್ರಧಾನಿ ಮೋದಿ ಅವರು ಗಣೇಶನ ವಿಗ್ರಹ ಸೇರಿದಂತೆ ಎಲ್ಲವನ್ನೂ ತುಂಬು ಹೃದಯದಿಂದ ಸ್ವೀಕರಿಸುತ್ತಾರೆಂದು ಬೂಮ್ ಸತ್ಯ ಪರಿಶೀಲನೆ ವೇಳೆ ತಿಳಿದು ಬಂದಿದೆ. ಆದರೆ ವೈರಲ್ ಆದ ವಿಡಿಯೋ ದಾರಿ ತಪ್ಪಿಸುವಂತಿದೆ. ವೈರಲ್ ಮಾಡಲಾದ ಈ ವೀಡಿಯೋದಲ್ಲಿ ಮೋದಿ ಅವರು ಗಣೇಶನ ವಿಗ್ರಹವನ್ನು ತಿರಸ್ಕರಿಸಿ ಸನ್ನಿ ಮಾಡುವಂತೆ ತೋರಿಸಲಾಗಿದೆ.

ಇದೇ ವೀಡಿಯೊವನ್ನು ಸಂಪೂರ್ಣವಾಗಿ ಮೇ 3, 2023 ರಂದು ಭಾರತೀಯ ಜನತಾ ಪಕ್ಷದ ದೃಢೀಕೃತ YouTube ಹ್ಯಾಂಡಲ್‌ನಿಂದ ಹಂಚಿಕೊಳ್ಳಲಾಗಿದೆ. ಬಿಜೆಪಿ ಅಧಿಕೃತ ವೆಬ್‌ಸೈಟ್‌ನಲ್ಲಿನ ಬ್ಲಾಗ್ ಪ್ರಕಾರ, ರಾಜ್ಯದಲ್ಲಿನ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಪ್ರಧಾನಿಯವರು ಮೇ 3, 2023 ರಂದು ಕರ್ನಾಟಕದಲ್ಲಿ ಮೂರು ರ್‍ಯಾಲಿಗಳನ್ನು ಉದ್ದೇಶಿಸಿ ಮಾತನಾಡಿದರು. ಅಂಕೋಲಾದಲ್ಲಿ ವೈರಲ್ ಆಗಿರುವ ವಿಡಿಯೋವನ್ನು ಹೊರತುಪಡಿಸಿ, ಮೂಡಬಿದಿರೆ ಮತ್ತು ಬೈಲಹೊಂಗಲದಲ್ಲಿ ನಡೆದ ಎರಡು ರ್‍ಯಾಲಿಗಳಲ್ಲಿ ಅವರು ಮಾತನಾಡಿದರು.
ಅಂಕೋಲಾದಲ್ಲಿ ಭಾಷಣ ಮಾಡಿದ ಅವರು, ಮೂಲಸೌಕರ್ಯ ಅಭಿವೃದ್ಧಿ ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯ ಮೂಲಕ ಬಿಜೆಪಿ ಕರ್ನಾಟಕವನ್ನು ದೇಶದಲ್ಲೇ ನಂಬರ್ 1 ರಾಜ್ಯವನ್ನಾಗಿ ಮಾಡುವುದು ಹೇಗೆ ಎಂಬುದರ ಕುರಿತು ಮಾತನಾಡಿದರು. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಮತ್ತು ಸಿಎಂ ಸಿದ್ದರಾಮಯ್ಯ ಅವರು ಸಾರ್ವಜನಿಕರಿಗೆ ದ್ರೋಹ ಎಸಗಿದ್ದಾರೆ. ಜೊತೆಗೆ ಅವರು ಜನರಿಗೆ ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ ಎಂದು ಪ್ರಧಾನಿ ಮೋದಿ ಟೀಕಿಸಿದ್ದಾರೆ ಎಂದು ಬ್ಲಾಗ್ ನಲ್ಲಿ ಹೇಳಲಾಗಿದೆ.
ವೀಡಿಯೋ ಹಿಂದಿನ ಸತ್ಯ
ಕರ್ನಾಟಕದ ಅಂಕೋಲಾದಲ್ಲಿ ವೇದಿಕೆಗೆ ಆಗಮಿಸಿದ ಮೋದಿ ಅವರಿಗೆ ಶಾಲು, ಪೇಟ ಮತ್ತು ಹಾರವನ್ನು ಹಾಕಿ ಗೌರವಿಸಲು ವೇದಿಕೆ ಮೇಲಿದ್ದ ಗಣ್ಯರು ಮುಂದಾಗುತ್ತಾರೆ. ಇದೇ ವೇಳೆ ವ್ಯಕ್ತಿಯೊಬ್ಬರು ಮೋದಿ ಅವರಿಗೆ ಗಣೇಶ ವಿಗ್ರಹವನ್ನು ನೀಡಲು ಮುಂದಾಗುತ್ತಾರೆ. ಆಗ ಮೋದಿ ಅವರು ಸರದಿ ಸಾಲಿನಲ್ಲಿ ಬರುವಂತೆ ಆ ವ್ಯಕ್ತಿಗೆ ಸೂಚಿಸುತ್ತಾರೆ. ಬಳಿಕ ಮೋದಿ ಅವರು ಗಣೇಶನ ವಿಗ್ರಹವನ್ನು ಸ್ವೀಕಾರ ಮಾಡುತ್ತಾರೆ. ಈ ಸಂಪೂರ್ಣ ವಿಡಿಯೋ ವೈರಲ್ ವಿಡಿಯೋದಲ್ಲಿ ಕಾಣಿಸುವುದಿಲ್ಲ. ಹೀಗಾಗಿ ವಿಡಿಯೋವನ್ನು ತಪ್ಪಾಗಿ ಬಿಂಬಿಸಲಾಗಿದೆ. ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ತಪ್ಪು ಸಂದೇಶದೊಂದಿಗೆ ಹಂಚಿಕೊಳ್ಲಲಾಗಿದೆ ಎನ್ನುವುದು ದೃಢವಾಗಿ ನಂಬಬಹುದು.

Fact Check
ಕ್ಲೇಮು
ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿ ತಿರಸ್ಕರಿಸಿದರೆಂದು ವಿಡಿಯೋ ವೈರಲ್ ಮಾಡಲಾಗಿದೆ.
ಪರಿಸಮಾಪ್ತಿ
ಗಣೇಶನ ವಿಗ್ರಹವನ್ನು ಪ್ರಧಾನಿ ಮೋದಿ ತಿರಸ್ಕರಿಸಿದಂತೆ ಹಳೆಯ ವಿಡಿಯೋ ತಪ್ಪಾಗಿ ವೈರಲ್ ಆಗಿದೆ












Click it and Unblock the Notifications