ಜೀ ವಾಹಿನಿಯಿಂದ ಡಬಲ್ ಧಮಾಕ! ಶೀಘ್ರದಲ್ಲೇ ಎರಡು ಹೊಸ ರಿಯಾಲಿಟಿ ಶೋ ಶುರು
ಕನ್ನಡ ಕಿರುತೆರೆಯಲ್ಲಿ ಜೀ ವಾಹಿನಿ ವಿಭಿನ್ನ ಕಾರ್ಯಕ್ರಮಗಳ ಮೂಲಕ ಗಮನ ಸೆಳೆದಿದೆ. ರಿಯಾಲಿಟಿ ಶೋಗಳ ವಿಚಾರದಲ್ಲೂ ಜೀ ಪ್ರೇಕ್ಷಕರ ಮನೆಮಾತಾಗಿದೆ. ಸದ್ಯ ಸರಿಗಮಪ, ಮಹಾನಟಿ, ಕಾಮಿಡಿ ಕಿಲಾಡಿಗಳು, ಡ್ರಾಮಾ ಜ್ಯೂನಿಯರ್ಸ್, ಭರ್ಜರಿ ಬ್ಯಾಚುಲರ್ಸ್ ಸೇರಿದಂತೆ ವಿವಿಧ ರಿಯಾಲಿಟಿ ಶೋಗಳಿಗೆ ವೀಕ್ಷಕರ ಸಂಖ್ಯೆ ಹೆಚ್ಚೇ ಇದೆ. ಈ ಹಿನ್ನೆಲೆ ಜೀ ವಾಹಿನಿಯು ಡಬಲ್ ಧಮಾಕ ಎನ್ನುವಂತೆ ಮತ್ತೆರಡು ಹೊಸ ರಿಯಾಲಿಟಿ ಶೋಗಳನ್ನು ಆರಂಭಿಸಲು ಸಜ್ಜಾಗಿದೆ. ಈ ಬಗ್ಗೆ ಈಗಾಗಲೇ ಪ್ರೋಮೋಗಳನ್ನು ಹಂಚಿಕೊಂಡು ಸಿಹಿಸುದ್ದಿ ನೀಡಿದೆ.
ಈ ಹಿಂದೆ "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ರಿಯಾಲಿಟಿ ಶೋ ಹೆಚ್ಚು ಜನಪ್ರಿಯತೆ ಪಡೆದಿದ್ದು. ಆಗ ಇದು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗಿತ್ತು. ಈಗ ಜೀ ಕನ್ನಡ ವಾಹಿನಿ ಕೂಡ ಇದೇ ಮಾದರಿಯ ರಿಯಾಲಿಟಿ ಶೋವೊಂದನ್ನು ಆರಂಭಿಸುವ ಸುಳಿವು ನೀಡಿದೆ. ಅಚ್ಚರಿ ಎಂದರೆ ಈ ಹೊಸ ಶೋ ಅನ್ನು ಖ್ಯಾತ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡಲಿದ್ದಾರೆ. ಇದರ ಪ್ರೋಮೋ ಹಂಚಿಕೊಂಡಿದ್ದು, ಇದರಲ್ಲಿ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ ಎಂದು ಹಿಂಟ್ ನೀಡಿದೆ.

ಜುಲೈ 19ರಂದು ಆಡಿಷನ್
ನನ್ನ ಫೇವರೇಟ್ ರಿಯಾಲಿಟಿ ಶೋ ಜೊತೆಗೆ ಅಕುಲ್ ಬಾಲಾಜಿ ಬರ್ತಿದ್ದಾನೆ ಅಂದ್ರೆ, ಸುನಾಮಿ ಸುಂಟರಗಾಳಿ ಎಲ್ಲವೂ ಬರಲೇಬೇಕು. ಗೆಟ್ ರೆಡೀ ಗರ್ಲ್ಸ್ ಎಂದು ಅಕುಲ್ ಪ್ರೋಮೋದಲ್ಲಿ ಹೇಳಿದ್ದಾರೆ. ಬರ್ತಾ ಇದೆ ಹಳ್ಳಿ ಬದುಕನ್ನ ಕಲಿಸೋ ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂದು ಹೇಳಿದೆ. ಇದ ಆಡಿಷನ್ ಇದೇ 19ರಂದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. 18ರಿಂದ 28 ವರ್ಷ ವಯಸ್ಸಿನ ಸಿಟಿ ಮಾಡ್ರನ್ ಯುವತಿಯರು ಭಾಗವಹಿಸಬಹುದು. ಹಳ್ಳಿ ಬದುಕಿನ ಬವಣೆಗಳನ್ನು ತೆರೆ ಮೇಲೆ ತರೋ ಕನ್ನಡ ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಶೀಘ್ರದಲ್ಲಿ ಬರಲಿದೆ ಎಂದು ಮಾಹಿತಿ ಹಂಚಿಕೊಂಡಿದೆ.
ಹಳ್ಳಿ ಬದುಕನ್ನು ಕಲಿಸೋದು ಹಾಗೂ ಸಿಟಿ ಹುಡುಗಿಯರಿಗೆ ಮಾತ್ರ ಎಂದು ಹೇಳುವ ಮೂಲಕ ಜೀ ಸುಳಿವು ನೀಡಿದೆ. ಈ ಹಿಂದೆ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಶೋ ಸಖತ್ ಹಿಟ್ ಆಗಿತ್ತು. ಅದನ್ನು ಕೂಡ ಅಕುಲ್ ಬಾಲಾಜಿ ಅವರೇ ನಿರೂಪಣೆ ಮಾಡಿದ್ದರು. ಈಗ ಅಕುಲ್ ನನ್ನ ನೆಚ್ಚಿನ ರಿಯಾಲಿಟಿ ಶೋ ಎಂದು ಹೇಳಿರುವುದರಿಂದ "ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು" ಹೊಸ ರೂಪದಲ್ಲಿ ಬರಲಿದೆ ಎಂದು ಹೇಳಲಾಗುತ್ತಿದೆ.
"ನಾವು ನಮ್ಮವರು" ಹೊಸ ಶೋ
ಸದಾ ಹೊಸ ಪ್ರಯತ್ನಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಿರುವ ಜೀ ವಿಭಿನ್ನ ವಿಷಯದೊಂದಿಗೆ ಹೊಸ "ನಾವು ನಮ್ಮವರು" ಎನ್ನುವ ರಿಯಾಲಿಟಿ ಶೋ ಮುಂದಿಡುತ್ತಿದೆ. ಇದರ ಪ್ರೋಮೋ ಕೂಡ ವಾಹಿನಿ ಹಂಚಿಕೊಂಡಿದ್ದು, ಬದುಕು ಕಟ್ಕೊಂಡ ಊರಿನಲ್ಲಿ ಅಪರಿಚಿತರ ಹಾಗೆ ಇರೋ ಬದಲು ಹುಟ್ಟೂರಲ್ಲಿ ನಮ್ಮವರ ನಡುವೆ ಒಂದಾಗೋ ಕ್ಷಣವೇ ಸುಂದರ! ಬರುತ್ತಿದೆ ಬಾಂಧವ್ಯಗಳ ಮಹತ್ವ ಸಾರೋ ರಿಯಾಲಿಟಿ ಶೋ "ನಾವು ನಮ್ಮವರು" ಶೀಘ್ರದಲ್ಲಿ ಎಂದು ಹೇಳಿದೆ. ಇದು ಹುಟ್ಟಿದ ಊರನ್ನ ತೊರೆದು ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳುವವರನ್ನು ತಮ್ಮ ಹುಟ್ಟೂರಿನೊಂದಿಗೆ, ಕುಟುಂಬದವರೊಂದಿಗೆ ಬೆಸೆಯುವ ಕಾರ್ಯಕ್ರಮ ಎನ್ನಲಾಗಿದೆ.












Click it and Unblock the Notifications