Toxic postponed: "ಟಾಕ್ಸಿಕ್" ಸಿನಿಮಾ ರಿಲೀಸ್ ಮತ್ತೆ ಮುಂದೂಡಿಕೆ: ಕಾರಣ ತಿಳಿಸಿ ಪೋಸ್ಟ್ ಹಂಚಿಕೊಂಡ ನಟ ಯಶ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾ ಬಿಡುಗಡೆಯ ದಿನಾಂಕದಲ್ಲಿ ಮತ್ತೆ ಮಹತ್ವದ ಬದಲಾವಣೆಯಾಗಿದೆ. ಈ ಮೊದಲು ಘೋಷಿಸಿದಂತೆ ಜೂನ್ 4ರಂದು ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಾಣುವುದಿಲ್ಲ ಎಂದು ಸ್ವತಃ ನಟ ಯಶ್ ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟಪಡಿಸಿದ್ದಾರೆ.
ಈ ನಿರ್ಧಾರಕ್ಕೆ ಕಾರಣವೇನು?
ಇತ್ತೀಚೆಗೆ ಸಿನಿಮಾಕಾನ್‌ನಲ್ಲಿ (CinemaCon) ನಮ್ಮ ಚಿತ್ರವನ್ನು ಪ್ರದರ್ಶಿಸಿದಾಗ ಸಿಕ್ಕ ಜಾಗತಿಕ ಮಟ್ಟದ ಅದ್ಭುತ ಪ್ರತಿಕ್ರಿಯೆಯೇ ಈ ನಿರ್ಧಾರಕ್ಕೆ ಪ್ರಮುಖ ಕಾರಣ ಎಂದು ಯಶ್ ತಿಳಿಸಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಅಂತರಾಷ್ಟ್ರೀಯ ವಿತರಕರಿಂದ ಚಿತ್ರಕ್ಕೆ ಭಾರೀ ಬೇಡಿಕೆ ಬಂದಿರುವುದರಿಂದ, 'ಟಾಕ್ಸಿಕ್' ಸಿನಿಮಾವನ್ನು ಕೇವಲ ಭಾರತಕ್ಕೆ ಸೀಮಿತಗೊಳಿಸದೆ ವಿಶ್ವದಾದ್ಯಂತ ಅತ್ಯಂತ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಯೋಜಿಸಿದೆ.

ಇದಕ್ಕಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಜಾಗತಿಕ ವಿತರಣೆ ಮತ್ತು ಪಾಲುದಾರಿಕೆಗಳನ್ನು ಸಮರ್ಪಕವಾಗಿ ಅಂತಿಮಗೊಳಿಸಲು ತಂಡಕ್ಕೆ ಹೆಚ್ಚಿನ ಸಮಯದ ಅಗತ್ಯವಿದೆ. ಈ ಕಾರಣದಿಂದಾಗಿ ಬಿಡುಗಡೆಯ ದಿನಾಂಕವನ್ನು ಸದ್ಯಕ್ಕೆ ಮುಂದೂಡಲಾಗಿದ್ದು, ಶೀಘ್ರದಲ್ಲೇ ಜಾಗತಿಕವಾಗಿ ಏಕಕಾಲಕ್ಕೆ ಅನ್ವಯವಾಗುವ ಹೊಸ ದಿನಾಂಕವನ್ನು ಘೋಷಿಸುವುದಾಗಿ ಯಶ್ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಈ ಬಗ್ಗೆ ಭಾವನಾತ್ಮಕ ಪತ್ರ ಹಂಚಿಕೊಂಡಿರುವ ಯಶ್, ಭಾರತೀಯ ಸಿನಿಮಾ ಇಂದು ವಿಶ್ವಮಟ್ಟದಲ್ಲಿ ತನ್ನ ಶಕ್ತಿಯನ್ನು ಪ್ರದರ್ಶಿಸುತ್ತಿರುವಾಗ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಒಂದು ಹೆಮ್ಮೆಯ ಚಿತ್ರವನ್ನು ನೀಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ. ಕೆಲವು ಕಥೆಗಳು ಮತ್ತು ಪ್ರಯಾಣಗಳು ಹೆಚ್ಚಿನ ತಾಳ್ಮೆಯನ್ನು ಬಯಸುತ್ತವೆ. ಆದ್ದರಿಂದ ಅಭಿಮಾನಿಗಳು ಸದ್ಯಕ್ಕೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರವು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಚಿತ್ರೀಕರಣಗೊಂಡಿದ್ದು, ಬಹುಭಾಷೆಗಳಲ್ಲಿ ಅಂತರಾಷ್ಟ್ರೀಯ ಮಟ್ಟದ ಸಿನಿಮಾ ಆಗಿ ಪ್ರೇಕ್ಷಕರ ಮುಂದೆ ಬರಲಿದೆ.
— Yash (@TheNameIsYash) April 29, 2026
ಜಾಗತಿಕ ವಿತರಣೆ ಮತ್ತು ಪಾಲುದಾರಿಕೆಗಳನ್ನು ಸಮರ್ಪಕವಾಗಿ ಹೊಂದಿಸುವ ಸಲುವಾಗಿ, ಮೊದಲು ನಿಗದಿಪಡಿಸಿದ್ದ ಜೂನ್ 4ರ ಬಿಡುಗಡೆಯ ದಿನಾಂಕವನ್ನು ರದ್ದುಗೊಳಿಸಲಾಗಿದೆ. ಶೀಘ್ರದಲ್ಲೇ ಹೊಸ ಮತ್ತು ಜಾಗತಿಕವಾಗಿ ಏಕಕಾಲಕ್ಕೆ ಅನ್ವಯವಾಗುವ ದಿನಾಂಕವನ್ನು ಘೋಷಿಸಲಾಗುತ್ತದೆ. 'ಟಾಕ್ಸಿಕ್' ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದ್ದು, ಪ್ರಸ್ತುತ ಜಾಗತಿಕ ಮಟ್ಟದ ಬಿಡುಗಡೆಯ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.
ಮಾರ್ಚ್ 19ಕ್ಕೆ ರಿಲೀಸ್ ಆಗಬೇಕಿದ್ದ ಸಿನಿಮಾ
ಟಾಕ್ಸಿಕ್ ಸಿನಿಮಾವನ್ನು ಜಾಗತಿಕ ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಅತ್ಯಂತ ದೊಡ್ಡ ಮಟ್ಟದ ದೂರದೃಷ್ಟಿಯೊಂದಿಗೆ ನಿರ್ಮಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾವನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾಗಿದ್ದು, ಸ್ಥಳೀಯ ಮತ್ತು ಅಂತರಾಷ್ಟ್ರೀಯ ವೀಕ್ಷಕರನ್ನು ಒಂದೇ ರೀತಿ ತಲುಪುವ ಉದ್ದೇಶವನ್ನು ತಂಡ ಹೊಂದಿದೆ. ವರ್ಷಗಳ ಶ್ರಮದ ನಂತರ ಈ ಚಿತ್ರವನ್ನು ಕಳೆದ ಮಾರ್ಚ್ 19ರಂದೇ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿತ್ತು.
ಆದರೆ ಇರಾನ್-ಇಸ್ರೇಲ್ ಅಮೇರಿಕಾ ನಡುವಿನ ಯುದ್ಧದ ಪರಿಸ್ಥಿತಿಯು ಚಿತ್ರದ ಜಾಗತಿಕ ವಿತರಣೆಯ ಮೇಲೆ ಪರಿಣಾಮ ಬೀರಿತ್ತು. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ತಲುಪುವ ಗುರಿ ಇಟ್ಟುಕೊಂಡಿರುವ ಕಾರಣ, ಪ್ರೇಕ್ಷಕರ ಹಿತದೃಷ್ಟಿಯಿಂದ ಚಿತ್ರದ ಬಿಡುಗಡೆಯನ್ನು ಮುಂದೂಡುವ ನಿರ್ಧಾರವನ್ನು ಚಿತ್ರತಂಡ ತೆಗೆದುಕೊಂಡಿತ್ತು. ಬಳಿಕ 'ಟಾಕ್ಸಿಕ್' ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ಏಕಕಾಲಕ್ಕೆ ತೆರೆಕಾಣಲಿದೆ ಎಂದು ಘೋಷಿಸಿತ್ತು. ಈಗ ಮತ್ತೆ ಈ ಸಿನಿಮಾ ಬಿಡುಗಡೆ ದಿನಾಂಕವನ್ನು ಮುಂದೂಡಲಾಗಿದೆ.












Click it and Unblock the Notifications