Darshan Ban: ಕೊಲೆ ಆರೋಪ ಸಾಬೀತಾದರೆ ಚಿತ್ರರಂಗದಿಂದ ನಟ ದರ್ಶನ್ ಬ್ಯಾನ್?
ಬೆಂಗಳೂರು, ಜೂನ್. 12: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗೆಳತಿ ಪತ್ನಿ ಪವಿತ್ರಾ ಗೌಡ ಸೇರಿ ಒಟ್ಟು 13 ಮಂದಿಯನ್ನು ಬಂಧಿಸಲಾಗಿದೆ. ಎಲ್ಲರನ್ನು ನ್ಯಾಯಾಲಯ 6 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಇದೆ ವೇಳೆ ದರ್ಶನ್‌ರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಕೂಗು ಕೂಡ ಕೇಳಿಬರುತ್ತಿದೆ.
33 ವರ್ಷದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅವರು ಎ1 ಆರೋಪಿ, ದರ್ಶನ್ ಎ2 ಆರೋಪಿ ಆಗಿದ್ದಾರೆ. ಆರೋಪ ಸಾಬೀತಾದರೆ ಅವರನ್ನು ಸ್ಯಾಂಡಲ್‌ವುಡ್‌ನಿಂದ ಬ್ಯಾನ್ ಮಾಡಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿದ್ದು, ಸಾಮಾಜಿಕ ಜಾಲತಾಣ ಸೇರಿದಂತೆ ಹಲವು ಕಡೆಗಳಲ್ಲಿ ಈ ಚರ್ಚೆ ನಡೆಯುತ್ತಿದೆ.

ಚಿತ್ರರಂಗದಿಂದ ದರ್ಶನ್ ಬ್ಯಾನ್ ಆಗಬೇಕೆ..?
ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಬಂಧನಕ್ಕೆ ಒಳಗಾಗಿದ್ದು ಚಂದನವನ ಸ್ತಬ್ಧವಾಗಿದೆ. ನಟನಾಗಿ ಸಮಾಜಕ್ಕೆ ಮಾದರಿಯಾಗಿರಬೇಕಿದ್ದ ದರ್ಶನ್ ವಿರುದ್ಧ ಸಾಲು ಸಾಲು ಪ್ರಕರಣಗಳು ದಾಖಲಾಗುತ್ತಿದ್ದರೂ ಅವರನ್ನು ಚಿತ್ರರಂಗ ಏನೂ ಮಾಡಿಲ್ಲ. ಅವರ ವಿರುದ್ಧ ಗಟ್ಟಿಯಾದ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೊಲೆ ಪ್ರಕರಣ ಸಾಬೀತಾದರೇ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಒತ್ತಾಯ ಕೇಳಿಬಂದಿದೆ.
2011 ರಲ್ಲಿ ಪತ್ನಿ ವಿಜಯಲಕ್ಷ್ಮಿ ಮೇಲೆ ಹಲ್ಲೆ ಮಾಡಿ 28 ದಿನ ಜೈಲಿನಲ್ಲಿದ್ದ ನಟ ದರ್ಶನ್ ವಿರುದ್ಧ ಚಿತ್ರರಂಗ, ಕಲಾವಿದರ ಸಂಘ ಯಾವುದೇ ಕ್ರಮ ಕೈಗೊಂಡಿಲ್ಲ. ಆದಾದ ಬಳಿಕವೂ ವಿವಾದಗಳ ಸರಮಾಲೆಯೇ ಅವರ ವಿರುದ್ಧವಿದ್ದರೂ ಅವರನ್ನು ಇಲ್ಲಿಯವರೆಗೂ ಒಮ್ಮೆಯೂ ಬ್ಯಾನ್ ಮಾಡಿಲ್ಲ. ಈಗ ಗಂಭೀರವಾದ ಕೊಲೆ ಪ್ರಕರಣವೇ ಅವರ ಮೇಲಿದೆ. ಆದರೂ ಕೂಡ ಚಿತ್ರರಂಗ ಒಂದು ಹೇಳಿಕೆಯನ್ನೇ ನೀಡಿಲ್ಲ.

ಕೆಲವೇ ಕೆಲವು ಮಂದಿ ಮಾತ್ರ ದರ್ಶನ್ ಬಂಧನದ ಬಗ್ಗೆ ಮಾತನಾಡಿದ್ದಾರೆ. ಅದರಲ್ಲೂ ಕೂಡ ತಪ್ಪಾಗಿದ್ದರೇ ಮಾತ್ರ ಎಂಬ ರೀತಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಮತ್ತಷ್ಟು ಮಂದಿ ಈ ವಿಷಯವೇ ಗೊತ್ತಿಲ್ಲ ಎನ್ನುವ ರೀತಿಯಲ್ಲಿ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಕರ್ನಾಟಕ ಚಲನಚಿತ್ರ ಮಂಡಳಿ ಕೂಡ ಇಲ್ಲಿಯವರೆಗೂ ಏನು ಮಾತನಾಡಿಲ್ಲ.
ಚಿತ್ರರಂಗದಲ್ಲಿ ನಟ ದರ್ಶನ್‌ಗೆ ಬಹು ಬೇಡಿಕೆಯಿದೆ. ಬೇರೆ ನಟರಂತೆ ಎರಡು ಮೂರು ವರ್ಷಕ್ಕೆ ಒಂದು ಸಿನಿಮಾ ಬದಲು ವರ್ಷಕ್ಕೊಂದರಂತೆ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಹಲವು ಮಂದಿಗೆ ಕೆಲಸ ಸಿಕ್ಕಿದೆ. ಹೀಗಾಗಿ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗುತ್ತಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂದು ಕೂಗು ಕೇಳಿ ಬರುತ್ತಿದೆ.












Click it and Unblock the Notifications