Darshan News: ರೇಣುಕಾಸ್ವಾಮಿ ಕೊಲೆ ಮಾಡುವವರು ಫೋಟೋ ಯಾಕೆ ತೆಗೆದುಕೊಂಡರು? ಈ ಬಂಡು ಧೈರ್ಯಕ್ಕೆ ನೀವೇನಂತೀರಿ... ?
ಬೆಂಗಳೂರು ಸೆಪ್ಟೆಂಬರ್ 5: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಲವಾದ ಸಾಕ್ಷಿಗಳು ಲಭ್ಯವಾಗಿವೆ. ರೇಣುಕಾಸ್ವಾಮಿ ಕೊನೆ ಕ್ಷಣದಲ್ಲಿ ದರ್ಶನ್ ಹಾಗೂ ಗ್ಯಾಂಗ್‌ಗೆ ತನ್ನನ್ನು ಬಿಟ್ಟುಬಿಡಿ ಎಂದು ಗೋಗರಿಯುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟಕ್ಕೂ ದರ್ಶನ್ ಹಾಗೂ ಗ್ಯಾಂಗ್ ರೇಣುಕಾಸ್ವಾಮಿ ಕೊಲೆ ಪ್ಲ್ಯಾನ್ ಮಾಡಿ ಕೊನೆ ಕ್ಷಣದಲ್ಲಿ ಗೋಗರಿಯುವ ಫೋಟೋ ತೆಗೆದಿದ್ದು ಯಾಕೆ ಎನ್ನುವ ಪ್ರಶ್ನೆ ಈಗ ಉದ್ಭವಿಸಿದೆ.
ಹೌದು... ರೇಣುಕಾಸ್ವಾಮಿ ಕೊಲೆ ಮಾಡುವವರು ಫೋಟೋ ಯಾಕೆ ತೆಗೆದುಕೊಂಡರು ಎನ್ನುವ ಪ್ರಶ್ನೆ ಈಗ ಹುಟ್ಟುಕೊಂಡಿದೆ. ಈ ಫೋಟೋ ತಮಗೆ ಮುಳುವಾಗುತ್ತದೆ ಎನ್ನುವ ಅರಿವು ಅವರಿಗೆ ಇರಲಿಲ್ವಾ? ಅಥವಾ ಇದು ಗೊತ್ತಿದ್ದರೂ ಬಂಡು ಧೈರ್ಯ ಮಾಡಿ ಫೋಟೋ ಕ್ಲಿಕ್ಕಿಸಿಕೊಂಡ್ರಾ ದರ್ಶನ್ ಗ್ಯಾಂಗ್ ಎನ್ನುವ ಪ್ರಶ್ನೆ ಹುಟ್ಟಿದೆ. ಹಾಗಾದರೆ ಈ ಬಗ್ಗೆ ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್ ಹೇಳಿದ್ದೇನು?

ರೇಣುಕಾಸ್ವಾಮಿ ಕೊಲೆ ಫೋಟೋ ವೈರಲ್ ಆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಿವೃತ್ತ ಪೊಲೀಸ್ ಅಧಿಕಾರಿ ನಾಗರಾಜ್, 'ಫೋಟೋಗಳನ್ನು ತೆಗೆದುಕೊಂಡು ಅವರೆಲ್ಲಾ ಒಂದು ರೀತಿ ಹೀರೋಯಿಕ್ ಆಕ್ಷನ್ ಮಾಡ್ಲಿಕ್ ಹೋಗಿದಾರೆ. ಜೊತೆಗೆ ಇವರಿಗೆ ಗೊತ್ತಿದೆ. ಈ ಹೊಡೆತದಿಂದ ರೇಣುಕಾಸ್ವಾಮಿ ಸಾವು ಆಗಬಹುದು ಎನ್ನುವ ವಿಚಾರ ಅವರಿಗೂ ತಿಳಿದಿದೆ. ನೋವಾಗಿದೆ ಹೊಡಿಬೇಡಿ ಅಂತ ರೇಣುಕಾಸ್ವಾಮಿ ಬೇಡಿಕೊಂಡಿದ್ದಾರೆ. ಆ ಸಮಯದಲ್ಲಿ ಅವರು ಆತನನ್ನು ಬಿಟ್ಟುಬಿಡಬಹುದಿತ್ತು. ಆದರೆ ಬಿಟ್ಟಿಲ್ಲ. ಮತ್ತೆ ಮತ್ತೆ ಹೊಡೆದಿದ್ದಾರೆ ಅಂದರೆ ಅವರ ಉದ್ದೇಶ ರೇಣುಕಾಸ್ವಾಮಿಯನ್ನ ಕೊಲೆ ಮಾಡುವುದಾಗಿತ್ತು ಎನ್ನುವುದು ಇಲ್ಲಿ ಸ್ಪಷ್ಟವಾಗುತ್ತದೆ' ಎಂದು ಹೇಳಿದರು.
ಹೀಗಾಗಿ ಈ ಫೋಟೋ ಬಲವಾದ ಸಾಕ್ಷಿಯಾಗಲಿದೆ. ಸಂದೇಶ ಕಳುಹಿಸಲು ಬಳಸಿದ ಫೋನ್ ರೇಣುಕಾಸ್ವಾಮಿಯದ್ದು, ದರ್ಶನ್ ಬೇರೆ ಫೋನ್‌ನಿಂದ ಮಾತನಾಡಿರುವುದು ಸಾಕ್ಷಿಗಳಿವೆ, ಪವಿತ್ರಾ ಮಾತನಾಡಿರುವುದು ಎಲ್ಲಾ ಸಾಕ್ಷಿಗಳು ಸಿಕ್ಕಿವೆ. ಹೀಗಾಗಿ ಇದೊಂದು ಬಲವಾದ ಸಾಕ್ಷಿಯಾಗಲಿದೆ ಎಂದು ನಾಗರಾಜ್ ಅವರು ಹೇಳಿದರು.
ಅಲ್ಲದೆ ಇಷ್ಟೊಂದು ಪ್ಲ್ಯಾನ್ ಆಗಿ ರೇಣುಕಾಸ್ವಾಮಿ ಅನ್ನು ಕಿಡ್ನ್ಯಾಪ್ ಮಾಡಿರುವುದು ನೋಡಿದರೆ ಇದು ಮೊದಲ ಪ್ರಕರಣ ಅಂತ ಅನಿಸೋದಿಲ್ಲ. ಯಾಕೆಂದರೆ, ಪ್ರಮುಖ ಆರೋಪಿ ದರ್ಶನ್ ಈ ಹಿಂದೆ ಹೆಂಡತಿ ಮೇಲೆ ಹಲ್ಲೆ ಮಾಡಿದ್ದರು. ಇದು ಅದೇ ಮೌಂಡ್ ಸೆಟ್ ಅನ್ನು ತೋರಿಸುತ್ತದೆ. ಮೊದಲ ಬಾರಿ ಯಾರಿಗಾದರೂ ಹಲ್ಲೆ ಮಾಡಿದ್ದೇ ಆಗಿದ್ದರೆ, ಈ ಶೆಡ್ಡು, ಅಪಹರಣ, ಇದಕ್ಕೆ ಒಂದಿಷ್ಟು ಜನ ಸೇರಿಸಿರುವುದನ್ನು ನೋಡಿದರೆ ಈ ಹಿಂದೆ ಕೂಡ ಇಂತಹ ಘಟನೆಗಳು ನಡೆದಿರಬಹುದು ಅಂತ ಅನಿಸುತ್ತದೆ ಎಂದು ನಾಗರಾಜ್ ತಮ್ಮ ಅಭಿಪ್ರಾಯ ತಿಳಿಸಿದರು.

ದರ್ಶನ್ ಬೇರೆಯವರಿಗೂ ಹಲ್ಲೆ ಮಾಡಿದ್ದಾನೆ ಎಂದು ಖಚಿತವಾಗಿ ಹೇಳಲು ಆಗಿರುವುದಿಲ್ಲ. ಹಲ್ಲೆ ಮಾಡಿಸಿಕೊಂಡವರು ಮುಂದೆ ಬಂದು ಹೇಳಲು ಅವರಿಗೆ ಸಾಕ್ಷಿ ಇಲ್ಲದೇ ಇರಬಹುದು. ಇವರೇ ಮಾಡಿದ್ದಾರೆ ಎನ್ನುವುದಕ್ಕೆ ಯಾವುದೇ ಆಧಾರ ಇಲ್ಲದೇ ಇರಬಹುದು. ಹೀಗಾಗಿ ಅವರು ಸುಮ್ಮನಾಗಿರಬಹುದು. ಈ ಗ್ಯಾಂಗ್ ನೋಡಿದರೆ ಇದು ಮೊದಲ ಹಲ್ಲೆ ಎಂದು ನಿರ್ಧಾರ ಮಾಡುವುದು ಸ್ವಲ್ಪ ಕಷ್ಟ ಎಂದರು.












Click it and Unblock the Notifications