Bigg Boss Kannada: ಈ ಬಿಗ್‌ಬಾಸ್ ಸೀಸನ್ ನಿರೂಪಣೆ ಮಾಡೋದು ಯಾರು? ಕೊನೆಗೂ ಉತ್ತರ ಸಿಕ್ತು
Bigg Boss Kannada: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡಕ್ಕೆ ದೊಡ್ಡ ಸಂಖ್ಯೆಯ ಪ್ರೇಕ್ಷಕರ ಬಳಗವಿದೆ. ಈ ಕಾರಣದಿಂದ ಇಲ್ಲಿವರೆಗೆ 11 ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿದೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಗ್‌ಬಾಸ್ ಸೀಸನ್-12 ಕೂಡ ಶುರುವಾಗಲಿದೆ. ಪ್ರತಿ ಸೀಸನ್‌ನಲ್ಲೂ ಯಾರಪ್ಪಾ ಸ್ಪರ್ಧಿಗಳು ಎನ್ನುವ ಕುತೂಹಲ ಇದ್ದೇ ಇರುತ್ತಿತ್ತು. ಆದರೆ ಈ ಬಾರಿ ಯಾರಪ್ಪಾ ನಿರೂಪಕ? ಎಂಬ ಕುತೂಹಲವೇ ಹೆಚ್ಚಾಗಿದೆ. ಕಿಚ್ಚ ಸುದೀಪ್ ಬದಲು ಯಾರು ಈ ಬಾರಿ ಬಿಗ್‌ಬಾಸ್ ನಡೆಸಿಕೊಡುತ್ತಾರೆ ಎಂಬ ಪ್ರಶ್ನೆಗೆ ಉತ್ತರ ಸಿಗುವ ಕಾಲ ಬಂದಿದೆ.
ಹೌದು, ಇಲ್ಲಿವರೆಗೆ ನಟ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ಅನ್ನು ಅಚ್ಚುಕಟ್ಟಾಗಿ ನಿರೂಪಣೆ ಮಾಡಿಕೊಂಡು ಬಂದಿದ್ದರು. ಕಳೆದ ಸೀಸನ್‌ನಲ್ಲೇ ನಾನು ಮುಂದಿನ ಸೀಸನ್ ನಿರೂಪಣೆ ಮಾಡಲ್ಲ ಎಂದು ಘೋಷಿಸಿದ್ದರು. ಇದರಿಂದ ಬಿಗ್‌ಬಾಸ್ ಪ್ರಿಯರಿಗೆ ಭಾರೀ ನೋವಾಗಿದ್ದೂ ಉಂಟು. ಕಿಚ್ಚನಿಲ್ಲದೆ ಬಿಗ್‌ಬಾಸ್ ನೋಡಲು ಮಜಾ ಇರೋದಿಲ್ಲ ಎನ್ನುವುದು ಪ್ರೇಕ್ಷಕರ ಮಾತು. ಮತ್ತೊಂದೆಡೆ ಸುದೀಪ್ ಬದಲು ಈ ಸೀಸನ್ ನಿರೂಪಣೆ ಮಾಡುವುದು ಯಾರು? ಎಂಬ ದೊಡ್ಡ ಪ್ರಶ್ನೆಯೇ ಸದ್ಯ ಎಲ್ಲರ ತಲೆಯಲ್ಲಿದೆ.

ಹಾಗಾಗಿ ಈ ಬಾರಿ ಬಿಗ್‌ಬಾಸ್ ಮನೆಗೆ ಹೋಗುವ ಸ್ಪರ್ಧಿಗಳಿಗಿಂತಲೂ ಹೆಚ್ಚಾಗಿ ನಿರೂಪಕ ಯಾರು? ಅನ್ನೋದೇ ದೊಡ್ಡ ಕುತೂಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ವಾಹಿನಿ ಕೂಡ ಈವರೆಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ ಸುದೀಪ್ ಬದಲು ಈ ಬಾರಿ ನಿರೂಪಣೆ ಸ್ಯಾಂಡಲ್‌ವುಡ್‌ನ ಹಲವು ಖ್ಯಾತ ನಟರ ಹೆಸರುಗಳು ಕೇಳಿಬಂದಿತ್ತು. ಆದರೆ ಇದೆಲ್ಲವೂ ಗಾಳಿಸುದ್ದಿಯೇ ಆದ ಕಾರಣ ಪ್ರೇಕ್ಷಕರ ತಲೆಯಲ್ಲಿ ನಿರೂಪಕ ಯಾರು ಅನ್ನೋದೇ ಚಿಂತೆಯಾಗಿಬಿಟ್ಟಿದೆ. ಅಂತಿಮವಾಗಿ ಈ ಎಲ್ಲ ಗೊಂದಲಗಳಿಗೂ ಉತ್ತರ ಸಿಗುತ್ತಿದೆ.
ಜೂನ್ 30ರಂದು ಅಂದರೆ ಸೋಮವಾರ ಈ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂಬ ಅಪ್ಡೇಟ್ ಬಂದಿದೆ. ಬಿಗ್‌ಬಾಸ್ ಕನ್ನಡ ಕಾರ್ಯಕ್ರಮದ ಆಯೋಜಕರು ಹಾಗೂ ಕಲರ್ಸ್ ವಾಹಿನಿಯು ಬಿಗ್‌ಬಾಸ್ ಸೀಸನ್-12ರ ಬಗ್ಗೆ ಪ್ರೆಸ್‌ಮೀಟ್ ಕರೆದಿದೆ. ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಈ ಪ್ರೆಸ್‌ಮೀಟ್ ನಡೆಯಲಿದ್ದು, ಬಿಗ್‌ಬಾಸ್ ಕನ್ನಡ ಸೀಸನ್-12 ಅನ್ನು ಯಾರು ನಿರೂಪಣೆ ಮಾಡಲಿದ್ದಾರೆ ಎಂಬುದು ರಿವೀಲ್ ಆಗಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಈ ಬಾರಿಯ ಶೋ ಹೇಗೆ ಇರಲಿದೆ ಎಂಬ ಮಾಹಿತಿಯನ್ನೂ ವಾಹಿನಿ ಹಂಚಿಕೊಳ್ಳಲಿದೆ. ಹಾಗಾಗಿ ಎಲ್ಲರ ಚಿತ್ತ ಈ ಪ್ರೆಸ್‌ಮೀಟ್‌ನತ್ತ ನೆಟ್ಟಿದೆ.

ಈ ಸೀಸನ್‌ನಲ್ಲೂ ಸುದೀಪ್ ನಿರೂಪಣೆ?
ಸುದೀಪ್ ಅವರು ಮತ್ತೆ ನಿರೂಪಣೆ ಮಾಡುವುದಿಲ್ಲ ಎಂದು ಕಳೆದ ಸೀಸನ್ ವೇಳೆಯೇ ಘೋಷಿಸಿದ್ದರು. ಆಗ ಈಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸುದೀಪ್ ಅವರೇ ಈ ಸೀಸನ್ ನಡೆಸಿಕೊಡಲಿದ್ದಾರೆ. ಒಂದಷ್ಟು ಸಣ್ಣ ಬದಲಾವಣೆಗಳಿರಲಿವೆ ಎಂದು ಚರ್ಚೆಯಾಗುತ್ತಿದೆ. ಸುದೀಪ್ ಅವರು ಕೆಲ ಷರತ್ತುಗಳನ್ನು ಹಾಕಿದ್ದರು. ಇದೇ ಕಾರಣಕ್ಕೆ ಅವರ ನಿರೂಪಣೆಯಿಂದ ಹಿಂದೆ ಸರಿದಿದ್ದರು. ಆದರೆ ಸುದೀಪ್ ಷರತ್ತುಗಳನ್ನು ಒಪ್ಪಿ, ಅವರನ್ನು ಮನವೊಲಿಸುವಲ್ಲಿ ಬಿಗ್‌ಬಾಸ್ ಕಾರ್ಯಕ್ರಮದ ಆಯೋಜಕರು ಸಕ್ಸಸ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ಈ ಸೀಸನ್‌ನಲ್ಲಿ ಕಿಚ್ಚ ಸುದೀಪ್ ಅವರೇ ನಿರೂಪಣೆ ಮಾಡ್ತಾರಾ? ಅಥವಾ ಬೇರೆ ಯಾವ ನಟ ನಿರೂಪಣೆ ಮಾಡಲಿದ್ದಾರೆ ಎಂಬ ಪ್ರಶ್ನೆಗಳಿಗೆ ಪ್ರೆಸ್‌ಮೀಟ್‌ನಲ್ಲೇ ಸ್ಪಷ್ಟ ಉತ್ತರ ಸಿಗಲಿದೆ.












Click it and Unblock the Notifications