ದೂರು ಬೆನ್ನಲ್ಲೇ ನಟಿ ರಚಿತಾ ರಾಮ್‌ಗೆ ಸಂಕಷ್ಟ, ಫಿಲ್ಮ್ ಚೇಂಬರ್ ಹೇಳಿದ್ದೇನು?
ಸ್ಯಾಂಡಲ್‌ವುಡ್ ನಟಿ ರಚಿತಾ ರಾಮ್ ಮೇಲೆ ಫಿಲ್ಮ್ ಚೇಂಬರ್‌ಗೆ ಎರಡೆರಡು ದೂರುಗಳು ಹೋಗಿವೆ. ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಮೋಷನ್‌ಗೆ ಬರಲಿಲ್ಲ ಎಂದು ನಿರ್ದೇಶಕ ನಾಗಶೇಖರ್ ರಚಿತಾ ರಾಮ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದೂರು ನೀಡಿದ್ದಾರೆ. ಮತ್ತೊಂದೆಡೆ ಸಿನಿಮಾದಲ್ಲಿ ನಟಿಸುವುದಾಗಿ ಪಡೆದಿದ್ದ ಅಡ್ವಾನ್ಸ್ ಹಣ ವಾಪಸ್ ನೀಡಿಲ್ಲ ಎಂದು ನಿರ್ಮಾಪಕಿಯೊಬ್ಬರು ಡಿಂಪಲ್ ಕ್ವೀನ್ ವಿರುದ್ಧ ಆರೋಪ ಮಾಡಿದ್ದಾರೆ. ಇವರೂ ಕೂಡ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ರಚಿತಾ ರಾಮ್‌ಗೆ ಸಂಕಷ್ಟ ಎದುರಾಗಿದೆ. ನಟಿಯ ವಿರುದ್ಧ ಫಿಲ್ಮ್ ಚೇಂಬರ್ ಏನು ಕ್ರಮ ಕೈಗೊಳ್ಳಲಿದೆ ಎಂದು ಸಾರಾ ಗೋವಿಂದು ಹೇಳಿದ್ದಾರೆ.
ರಚಿತಾ ರಾಮ್ ಮೇಲೆ ಸಿನಿಮಾ ನಿರ್ಮಾಪಕರೊಬ್ಬರು ನೀಡಿರುವ ದೂರು ನನ್ನ ಅಂಗಳಕ್ಕೆ ಬಂದಿದೆ. ನಿರ್ಮಾಪಕಿ ವಿಜಯಲಕ್ಷ್ಮಿ ಅವರು ಬಂದು ತಮಗಾದ ಅನ್ಯಾಯ ಹೇಳಿಕೊಂಡರು. ಅವರ ಸಿನಿಮಾ ಪ್ರಾರಂಭವಾಗಿ ಅರ್ಧದಲ್ಲೇ ನಿಂತು ಹೋಗಿದೆ. ಹಾಗಾಗಿ ನಿರ್ಮಾಪಕಿ ಅವರಿಗೆ ನಮ್ಮಿಂದ ಏನು ಸಹಕಾರ ಬೇಕೋ ಕೊಡುತ್ತೇವೆ. ಇದಕ್ಕೆ ನಟಿ ರಚಿತಾ ರಾಮ್ ಅವರು ಕೂಡ ಒಪ್ಪಿಕೊಂಡಿದ್ದಾರೆ. ನೀವು ಏನು ಹೇಳ್ತೀರೋ ಹಾಗೆ ಕೇಳ್ತೀನಿ ಎಂದಿದ್ದಾರೆ. ಆ ಸಮಸ್ಯೆ ಇತ್ಯರ್ಥ ಆಗಿದೆ, ಈ ವಿವಾದ ಸುಖಾಂತ್ಯ ಕಂಡಿದೆ ಎಂದು ಸಾರಾ ಗೋವಿಂದು ಸ್ಪಷ್ಟಪಡಿಸಿದ್ದಾರೆ.

ಏನಿದು ಆರೋಪ?
ನಟಿ ರಚಿತಾ ರಾಮ್ ಅವರು ಸಿನಿಮಾಗಾಗಿ ಪಡೆದಿದ್ದ ಅಡ್ವಾನ್ಸ್ ಹಣ ವಾಪಸ್ ಕೊಡದೆ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಸಿನಿಮಾವೊಂದರಲ್ಲಿ ನಟಿಸುವುದಾಗಿ ರಚಿತಾ ಅವರು ಅಡ್ವಾನ್ಸ್ ಪಡೆದು, ಸಿನಿಮಾದಲ್ಲೂ ನಟಿಸದೆ ಅಡ್ವಾನ್ಸ್ ವಾಪಸ್ ಕೊಡದೇ ಮೋಸ ಮಾಡಿದ್ದಾರೆ ಎಂದು ಹಿರಿಯ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಆರೋಪಿಸಿದ್ದರು. ಈ ಸಂಬಂಧ ಫಿಲ್ಮ್ ಚೇಂಬರ್‌ಗೂ ದೂರು ನೀಡಿದ್ದರು.
ಸುಮಾರು 8 ವರ್ಷಗಳ ಹಿಂದೆ ನಟ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಚಿತಾ ರಾಮ್ ಅವರ "ಉಪ್ಪಿ ರುಪ್ಪಿ" ಸಿನಿಮಾ ಸೆಟ್ಟೇರಿತ್ತು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ಅವರ ನಿರ್ಮಾಣ ಮಾಡಲು ಮುಂದಾಗಿದ್ದರು. ಈ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ರಚಿತಾ ರಾಮ್ ಕೂಡ ಒಪ್ಪಿ ಅಡ್ವಾನ್ಸ್ ಆಗಿ 13 ಲಕ್ಷ ರೂಪಾಯಿ ಪಡೆದಿದ್ದರು. ಬಳಿಕ ಚಿತ್ರತಂಡ ಬ್ಯಾಂಕಾಕ್‌ನಲ್ಲಿ ಶೂಟಿಂಗ್ ಪ್ಲ್ಯಾನ್ ಮಾಡಿ ಟಿಕೆಟ್ ಬುಕ್ ಮಾಡಿದ್ರೂ ರಚಿತಾ ರಾಮ್ ಬಂದಿರಲಿಲ್ಲ. ಕೊನೆಗೆ ಬರ್ತೀನಿ, ಬರ್ತೀನಿ ಎಂದು ಸತಾಯಿಸಿದ್ದರು ಎಂದು ನಿರ್ಮಾಪಕಿ ದೂರಿದ್ದರು.
ರಚಿತಾ ರಾಮ್ ಗೈರಾಗಿದ್ದಕ್ಕೆ ನಟನ ಭಾಗದ ಶೂಟಿಂಗ್ ಮುಗಿಸಿ ಚಿತ್ರತಂಡ ವಾಪಸ್ ಆಗಿತ್ತು. ರಚಿತಾ ರಾಮ್ ಮಾಡಿದ ಎಡವಟ್ಟಿನಿಂದಾಗಿ ಸುಮಾರು 1.5 ಕೋಟಿ ರೂಪಾಯಿ ನಷ್ಟವಾಗಿದೆ. ಅಂದಿನಿಂದಲೂ ನಟಿ ಸಂಪರ್ಕಕ್ಕೂ ಸಿಗುತ್ತಿಲ್ಲ, ಅಡ್ವಾನ್ಸ್ ಹಣ ವಾಪಸ್ ಕೊಡಲಿಲ್ಲ ಎಂಬ ಆರೋಪದ ಮೇರೆಗೆ ರಚಿತಾ ವಿರುದ್ಧ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು. ನಟಿಯ ವಿರುದ್ಧ ಎರಡೆರಡು ದೂರು ಫಿಲ್ಮ್ ಚೇಂಬರ್‌ಗೆ ಹೋಗಿತ್ತು.












Click it and Unblock the Notifications