Sridevi Byrappa: ಯುವ ರಾಜ್‌ಕುಮಾರ್ ಪತ್ನಿ ಶ್ರೀದೇವಿ ಭೈರಪ್ಪ ಯಾರು..? ಆಕೆಯ ಹಿನ್ನೆಲೆ ಏನು ಗೊತ್ತೆ?
ಬೆಂಗಳೂರು, ಜೂನ್. 10: ಇಂದು ದೊಡ್ಮನೆ ಅಭಿಮಾನಿಗಳ ಪಾಲಿಗೆ ಒಂಥರಾ ಕರಾಳ ದಿನ ಅಂದರೆ ತಪ್ಪಿಲ್ಲ. ಇಷ್ಟು ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ದೊಡ್ಮನೆ ಕುಟುಂಬದಲ್ಲಿ ವಿಚ್ಛೇದನದ ಬಿರುಗಾಳಿ ಎದ್ದಿದೆ. ಪ್ರೀತಿಸಿ, ಮನೆಯವರನ್ನು ಒಪ್ಪಿಸಿ ಮದುವೆಯಾಗಿದ್ದ ಯುವ ರಾಜ್‌ಕುಮಾರ್ ತಮ್ಮ ಪತ್ನಿಗೆ ಡೈವೋರ್ಸ್ ನೀಡುತ್ತಿದ್ದಾರೆ.
ಹೌದು.. ಬೇಸರದ ಸುದ್ದಿಯೇ ಇದು. ಇತ್ತೀಚೆಗೆ ಯುವ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟು ಭರವಸೆಯ ನಟ ಎಂಬ ಖ್ಯಾತಿ ಗಳಿಸಿರುವ ನಟ ಯುವ ರಾಜ್‌ಕುಮಾರ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ. ಯುವ ರಾಜ್‌ಕುಮಾರ್ ಮತ್ತು ಶ್ರೀದೇವಿ ಭೈರಪ್ಪ ಬೇರೆಯಾಗುವ ನಿರ್ಧಾರ ಮಾಡಿದ್ದು, ಏಳು ವರ್ಷಗಳ ಪ್ರೀತಿ ಮತ್ತು ನಾಲ್ಕು ವರ್ಷಗಳ ದಾಂಪತ್ಯಕ್ಕೆ ಫುಲ್ ಸ್ಟಾಪ್ ಇಡಲಿದ್ದಾರೆ. ಇದೇ ವೇಳೆ ಯುವ ಮದುವೆಯಾಗಿರುವ ಶ್ರೀದೇವಿ ಭೈರಪ್ಪ ಯಾರು..? ಇಬ್ಬರು ಎಲ್ಲಿ ಭೇಟಿಯಾದರು ಎಂಬ ಕುತೂಹಲ ಜನರಲ್ಲಿ ಇದ್ದು, ಅದಕ್ಕೆ ಉತ್ತರ ಇಲ್ಲಿದೆ.

ಯಾರು ಈ ಶ್ರೀದೇವಿ ಭೈರಪ್ಪ..?
ಯುವ ರಾಜ್‌ಕುಮಾರ್ 7 ವರ್ಷಗಳ ಕಾಲ ಪ್ರೀತಿಸಿ ಮದುವೆಯಾಗಿದ್ದ ಯುವತಿ ಶ್ರೀದೇವಿ ಭೈರಪ್ಪ. ಮದುವೆಯಾಗಿ ಈಗ 4 ವರ್ಷಕ್ಕೆ ದೂರವಾಗುವ ನಿರ್ಧಾರ ಮಾಡಿದ್ದಾರೆ. ಶ್ರೀದೇವಿ ಭೈರಪ್ಪ ಮೈಸೂರು ಮೂಲದವರು. ಸಾಂಸ್ಕೃತಿಕ ನಗರದಲ್ಲಿಯೇ ಹುಟ್ಟಿ ಬೆಳೆದು, ಉನ್ನತ ಶಿಕ್ಷಣ ಮುಗಿಸಿದ್ದಾರೆ.
ಮದುವೆಗೂ ಮುನ್ನ ಏಳು ವರ್ಷಗಳಿಂದ ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಸ್ನೇಹಿತರಾಗಿದ್ದರು. ಪರಿಚಯ ಸ್ನೇಹವಾಗಿ, ಸ್ನೇಹ ಪ್ರೀತಿಗೆ ತಿರುಗಿ ನಿಶ್ಚಿತಾರ್ಥ ಸಮಾರಂಭ ಮೈಸೂರಿನಲ್ಲಿ ನಡೆದಿತ್ತು, ಬಳಿಕ ಅದ್ಧೂರಿಯಾಗಿ ಮದುವೆ ನಡೆದಿತ್ತು.

ವಿನಯ್ ರಾಜ್ ಕುಮಾರ್ ಅಭಿನಯದ 'ರನ್ ಆಂಟನಿ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಪರೋಕ್ಷವಾಗಿ ಶ್ರೀದೇವಿ ಭೈರಪ್ಪ ತೊಡಗಿಸಿಕೊಂಡಿದ್ದರು. ಇದಾದ ನಂತರ ಶ್ರೀದೇವಿ ಭೈರಪ್ಪ ಅವರು ಡಾ. ರಾಜ್ ಕುಮಾರ್ ಅವರ ಕುಟುಂಬ ನಡೆಸುತ್ತಿರುವ 'ಡಾ.ರಾಜ್ ಕುಮಾರ್ ಸಿವಿಲ್ ಸರ್ವೀಸ್ ಅಕಾಡೆಮಿ'ಯ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಯುವರಾಜ್‌ಕುಮಾರ್ ಜೊತೆಗೆ ದೊಡ್ಮನೆಯವರ ಪ್ರೀತಿ ವಿಶ್ವಾಸ ಗಳಿಸಿದ್ದ ಇವರು ಕಳೆದ ಆರು ತಿಂಗಳಿನಿಂದ ಅಮೆರಿಕಾದಲ್ಲಿದ್ದಾರೆ. ಅಲ್ಲಿಯೇ ಉನ್ನತ ವ್ಯಾಸಂಗ ನಡೆಸುತ್ತಿದ್ದಾರೆ. ಇನ್ನು ಪತ್ನಿ ಶ್ರೀದೇವಿಗೆ ಡಿವೋರ್ಸ್ ನೀಡಲು ಜೂನ್ 6ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಯುವ ರಾಜ್‌ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಶ್ರೀದೇವಿಗೆ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದೆ.
ಇನ್ನು, ಶ್ರೀದೇವಿ ಭೈರಪ್ಪ ಅವರ ಬಗ್ಗೆ ಯುವರಾಜ್‌ಕುಮಾರ್ ಲಾಯರ್ ಆರೋಪಗಳಿಗೆ ತಣ್ಣಗೆ ಉತ್ತರ ನೀಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, "ವೃತ್ತಿಪರ ಸೌಹಾರ್ದತೆಯನ್ನು ಕಾಯ್ದುಕೊಳ್ಳಬೇಕಾದ ವ್ಯಕ್ತಿಯೇ ಸಾರ್ವಜನಿಕವಾಗಿ ಒಬ್ಬ ಹೆಣ್ಣಿನ ಚಾರಿತ್ರ್ಯದ ಬಗ್ಗೆ ಕೀಳು ಮಟ್ಟದ ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಅತ್ಯಂತ ದುರದೃಷ್ಟಕರ ಹಾಗೂ ಬಹಳ ನೋವುಂಟು ಮಾಡಿದೆ" ಎಂದಿದ್ದಾರೆ.
"ಕಳೆದ ಕೆಲವು ತಿಂಗಳಿಂದ ಆದ ಅನೇಕ ನೋವುಗಳ ಹೊರತಾಗಿಯೂ, ನಾನು ಕುಟುಂಬದ ಗೌರವ ಕಾಪಾಡಿಕೊಳ್ಳಲು, ಮೌನವಾಗಿದ್ದೆ. ಆದರೆ ನನ್ನ ಸಭ್ಯತೆ ಹಾಗೂ ಮಾನವೀಯತೆಯನ್ನು ಗೌರವಿಸದೆ, ಕೀಳು ಮಟ್ಟದ ಆರೋಪಗಳನ್ನು ಮಾಡುತ್ತಿರುವುದು ದುರದೃಷ್ಟಕರ. ಸತ್ಯ ಮತ್ತು ನ್ಯಾಯವು ಖಂಡಿತ ಮೇಲುಗೈ ಸಾಧಿಸುತ್ತದೆ ಎಂದು ನಾನು ನಂಬಿದ್ದೇನೆ" ಎಂದು ಪೋಸ್ಟ್ ಹಾಕಿದ್ದಾರೆ.












Click it and Unblock the Notifications