ದರ್ಶನ್ ಫಾರ್ಮ್‌ಹೌಸ್‌ಗೆ ಕಿಚ್ಚ ಸುದೀಪ್ ಹೋದಾಗ ನಡೆದಿದ್ದೇನು?
ಕಿಚ್ಚ ಸುದೀಪ್ ಅವರು ನಟ ದರ್ಶನ್ ತೂಗುದೀಪ ಅವರೊಂದಿಗಿನ ಒಡನಾಟವನ್ನು ನೆನೆದಿದ್ದಾರೆ. ಒಂದು ಕಾಲದಲ್ಲಿ ಕುಚಿಕುಗಳಂತಿದ್ದ ದರ್ಶನ್ ಜೊತೆಗಿನ ಮುನಿಸು, ದೂರಾಗಿದ್ದು ಏಕೆ? ಎಂಬ ಬಗ್ಗೆಯೂ ಸುದೀಪ್ ಕೆಲ ಮಹತ್ವದ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಕೊಲೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿರುವ ಬಗ್ಗೆಯೂ ಪ್ರತಿಕ್ರಿಯಿಸಿದ್ದಾರೆ. ಈ ಹಿಂದೆ ಸುದೀಪ್ ದರ್ಶನ್ ಅವರ ಫಾರ್ಮ್‌ಹೌಸ್‌ಗೆ ಭೇಟಿ ನೀಡಿದಾಗ ಆದ ಘಟನೆಯೊಂದರ ಬಗ್ಗೆ ಸುದೀಪ್ ಮಾತನಾಡಿದ್ದಾರೆ.
'ಪೌರಾಣಿಕ ಸಿನಿಮಾ ಮಾಡಿದ್ರೆ ಕುದುರೆ ಮೇಲೆ ಬರಬೇಕು. ನನಗೆ ಕುದುರೆ ಓಡಿಸೋದು ಅಂದ್ರೆ ಆಗಲ್ಲ. ಇಂತಹ ಒಂದು ಪಾತ್ರಕ್ಕಾಗಿ ತಯಾರಿ ಮಾಡಲು ಹೋದಾಗ ಇದರ ಅನುಭವ ಆಗಿದ್ದುಂಟು. ಒಂದು ವಾರ ಟ್ರೈನಿಂಗ್ ತಗೊಂಡೆ. ಆದ್ರೆ ಒಂದು ದಿನ ಸುಮ್ಮನೆ ನಿಂತಿದ್ದ ಕುದುರೆ ಯಾಕೆ ಎಗರಿತ್ತು ಅನ್ನೋದು ಗೊತ್ತಿಲ್ಲ. ಅದಕ್ಕೆ ನನ್ನ ಕಾಲು ಸಿಕ್ಕಾಕಿಕೊಂಡು ಒಂದು 20 ಮೀಟರ್‌ವರೆಗೆ ಎಳೆದುಕೊಂಡು ಹೋಗಿತ್ತು. ಆಗ ನನಗೆ ಆದ ಭಯ ಇಡೀ ಪ್ರಪಂಚವನ್ನೇ ನೋಡ್ಬಿಟ್ಟೆ' ಎಂದು ತಮ್ಮ ಕುದುರೆ ಸವಾರಿ ಅನುಭವ ಬಿಚ್ಚಿಟ್ಟಿದ್ದಾರೆ ಸುದೀಪ್.

'ದರ್ಶನ್ ತೋಟಕ್ಕೆ ಹೋದಾಗ..'
'ಇದಾದ ಮೇಲೆ ಮತ್ತೊಂದು ಸಲ ದರ್ಶನ್ ಅವರ ತೋಟಕ್ಕೆ ಹೋಗಿದ್ದೆ. ದರ್ಶನ್ ನನಗೆ ಕುದುರೆ ಹತ್ತು ಅಂತ ತುಂಬಾ ಒತ್ತಾಯ ಮಾಡಿದ. ನೀನೂ ಬೇಡ, ನಿನ್ ಕುದುರೆ ಸಹವಾಸವೂ ಬೇಡ ಅಂದೆ. ಆದ್ರೂ ಆವತ್ತು ನನ್ನ ಕುದುರೆ ಹತ್ತಿಸಿದ್ರು. ಆಗ ನನ್ನ ಹುಷಾರಾಗಿ ಹಿಡಿದುಕೊಳ್ರಪ್ಪ ಅಂದೆ. ಒಂದು ಕುದುರೆ ಮೇಲೆ ಅವನು ಹೋಗಿ ಸರಿಯಾಗಿ ಬಿದ್ದ. ಅದನ್ನ ನೋಡಿದ ತಕ್ಷಣವೇ ಕೆಳಗಿಳಿಸಪ್ಪಾ ಅಂದೆ. ಅಂದಿನಿಂದ ಇವತ್ತಿನವರೆಗೂ ಕುದುರೆ ಹತ್ತಲೇ ಇಲ್ಲ' ಎಂದು ಸುದೀಪ್ ತಮ್ಮ ಒಡನಾಟದ ದಿನಗಳನ್ನು ಮೆಲುಕು ಹಾಕಿದ್ದಾರೆ.
'ಬೇರೆಯವರನ್ನ ಕೇಳಿ ನಾನು-ದರ್ಶನ್ ಒಂದಾಗಲ್ಲ'
'ದರ್ಶನ್ ಹಾಗೂ ಸುದೀಪ್ ಮತ್ತೆ ಒಂದಾಗ್ತಾರಾ? ಎಂಬ ಪ್ರಶ್ನೆಗೂ ಕಿಚ್ಚ ಸುದೀಪ್ ನೇರ ಉತ್ತರ ನೀಡಿದ್ದಾರೆ. ನಾವೇನು ಚಿಕ್ಕ ಹುಡುಗರಾ? ನಮಗೆ ನಮ್ಮ ಸ್ವಂತ ಬುದ್ಧಿ ಇಲ್ವಾ? ಯಾರನ್ನಾದರೂ ಕೇಳಿಕೊಂಡು ದೂರ ಆಗ್ತಾರಾ ಅಥವಾ ಒಂದಾಗ್ತಾರಾ? ಎಂದು ಖಡಕ್ ಉತ್ತರ ನೀಡಿದ್ದಾರೆ. ನಾವಿಬ್ಬರೂ ಬೇರೆ ಆಗಿರೋದು ಬೇರೆಯವರಿಗೆ ಖುಷಿ ಕೊಡುತ್ತೆ ಅಂದ್ರೆ ಆಗಲಿ ಬಿಡಿ. ನಾನು ಬೇರೆಯವರ ಮಾತು ಕೇಳಿ ರಿಯಾಕ್ಟ್ ಮಾಡೋ ವ್ಯಕ್ತಿ ಅಲ್ಲ. ಕಣ್ಣುಮುಂದೆ ನಡೆಯುವುದನ್ನೇ ನಂಬೋದು. ನಮ್ಮ ಸತ್ಯಗಳೇನು ಅನ್ನೋದು ನಮಗೆ ಗೊತ್ತಿದೆ' ಎಂದಿದ್ದಾರೆ.
'ದರ್ಶನ್ ಪ್ರಕರಣದ ಬಗ್ಗೆ ಮಾತನಾಡಿ, ಅವರದ್ದೇ ಆದ ನೋವುಗಳು ಇರುತ್ತೆ. ಅದರ ಬಗ್ಗೆ ನಾವು ಮಾತನಾಡೋದು ತಪ್ಪಾಗುತ್ತೆ. ಸರ್ಕಾರ, ಕಾನೂನು ಅಂತ ಬಂದಾಗ ಅವರೇನು ಮಾಡಬೇಕೋ ಮಾಡ್ತಾರೆ. ಅದಕ್ಕೆ ನಾವು ಅಡ್ಡಬರಬಾರದು. ತಪ್ಪು ಸರಿ ಅನ್ನೋದು ಅಲ್ಲೇ ನಿರ್ಧಾರ ಆಗುತ್ತೆ. ವೈಯಕ್ತಿಕವಾಗಿ ಯಾರ ವಿಚಾರಕ್ಕೂ ತಲೆ ಹಾಕೋದು ಇಷ್ಟವಿಲ್ಲ. ಅಲ್ಲದೆ ನಾವು ಮಾತನಾಡೋದು ತಪ್ಪಾಗುತ್ತೆ, ವಿಚಾರಗಳನ್ನ ಕೆಡಿಸುತ್ತೆ. ಸೂರ್ಯ ಹಾಗೂ ಚಂದ್ರ ಎರಡೂ ಕೂಡ ಚೆಂದಾನೆ, ಆದರೆ ಅದರದ್ದೇ ಜಾಗದಲ್ಲಿ ಮಾತ್ರ' ಎಂದು ಮಾರ್ಮಿಕವಾಗಿ ದರ್ಶನ್ ಹಾಗೂ ತಮ್ಮ ನಡುವಿನ ಅಂತರದ ಬಗ್ಗೆ ಸುದೀಪ್ ಹೇಳಿದ್ದಾರೆ.












Click it and Unblock the Notifications