Rakshit Shetty: ಕನ್ನಡ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯದ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು?
ಬೆಂಗಳೂರು ಸೆಪ್ಟೆಂಬರ್ 6: ಕನ್ನಡ ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ದೌರ್ಜನ್ಯ ಸೇರಿದಂತೆ ಇನ್ನಿತರೆ ಸಮಸ್ಯೆಗಳ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಬೇಕು ಎಂದು ಸ್ಯಾಂಡಲ್‌ವುಡ್‌ನ ಖ್ಯಾತ ನಟ ನಟಿಯರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ಫೈರ್' (ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಆಂಡ್ ಇಕ್ವಾಲಿಟಿ ಸಂಸ್ಥೆ)ಯ ಅಧ್ಯಕ್ಷರು ಮತ್ತು ನಿರ್ದೇಶಕರಾದ ಕವಿತಾ ಲಂಕೇಶ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಈ ಮನವಿ ಪತ್ರಕ್ಕೆ ಸ್ಯಾಂಡಲ್‌ವುಡ್‌ನ ನಟ, ನಟಿಯರುವ, ನಿರ್ದೇಶಕರು, ನಿರ್ಮಾಪಕರು ಕೂಡ ಸಹಿ ಹಾಕಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ರಕ್ಷಿತ್ ಶೆಟ್ಟಿ, ಕನ್ನಡದಲ್ಲೂ ಕೇರಳ ಮಾದರಿಯ ಹೇಮಾ ಸಮಿತಿ ರೀತಿ ಸಮಿತಿ ಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ನಮ್ಮಲ್ಲೂ ಸಮಿತಿ ರಚನೆ ಆಗಬೇಕು ಎನ್ನುವುದು ಒಳ್ಳೆಯ ಉದ್ದೇಶ. ನಾವು ಕೂಡ ಅದಕ್ಕೆ ಸಹಿ ಹಾಕುತ್ತೇವೆ. ಸಹಿ ಹಾಕಿದ ಮೇಲೆ ನಾನು ಮತ್ತೆ ಗುಹೆಯಲ್ಲಿ ಹೋಗಿ ಕುಳಿತುಕೊಂಡು ಸಿನಿಮಾ ಮಾಡಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಒಮ್ಮೆ ಸಹಿ ಮಾಡಿದ ಮೇಲೆ ಅದರ ಹಿಂದಿರುವ ಕೆಲಸವನ್ನು ಕೂಡ ನಾನು ಮಾಡಬೇಕು ಎಂದು ರಕ್ಷಿತ್ ಹೇಳಿದ್ದಾರೆ.
ನಟ ರಮೇಶ್ ಅರವಿಂದ್ ಹೇಳಿದ್ದೇನು?
ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರೆಡೆ ಅಸಮಾನತೆ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ನಟ ರಮೇಶ್ ಅರವಿಂದ್, ಯಾರಿಗೇ ಆಗಲಿ ಅಗತ್ಯ ಗೌರವಗಳನ್ನು ನೀಡಲೇಬೇಕು. ಅದರ ಜೊತೆಗೆ ಒಂದೊಮ್ಮೆ ಚಿತ್ರರಂಗದಲ್ಲಿ ಯಾರಿಂದಾದರೂ ಸಮಸ್ಯೆ ಆಗಿದ್ದರೆ ಪ್ರತಿಭಟಿಸೋಣ ಆದರೆ ಇಡೀ ಚಿತ್ರರಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದರು.
ಜೊತೆಗೆ ಸೆ.5 ರಂದು ನಟ ಚೇತನ್ ನೇತೃತ್ವದಲ್ಲಿ 'ಫೈರ್ ಸಂಸ್ಥೆ' ಮೂಲಕ ಸ್ಯಾಂಡಲ್‌ವುಡ್‌ನಲ್ಲೂ ಹೇಮಾ ಕಮಿಟಿಯಂತೆ ಸಮಿತಿ ರಚಿಸಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಚೇತನ್ ಜೊತೆ ಶೃತಿ ಹರಿಹರನ್, ನೀತು ಶೆಟ್ಟಿ,ಸುದೀಪ್, ಆಶಿಕಾ ರಂಗನಾಥ್, ಮಾನ್ವಿತಾ ಕಾಮತ್ ಸೇರಿದಂತೆ 153 ಮಂದಿ ಸಹಿ ಹಾಕಿದ್ದಾರೆ.
ಸೆ.16ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆ
ಕನ್ನಡ ಚಿತ್ರರಂಗದಲ್ಲಿನ ಮಹಿಳಾ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಅಧ್ಯಯನ ಸಂಬಂಧ ಕೇರಳ ಮಾದರಿಯಲ್ಲೇ ಸಮಿತಿ ರಚನೆಗೆ ಆಗ್ರಹಿಸಿ ಫಿಲ್ಮ್ ಇಂಡಸ್ಟ್ರಿ ಫಾರ್ ರೈಟ್ಸ್ ಅಂಡ್ ಇಕ್ವಾಲಿಟಿ (ಫೈರ್) ನಿಯೋಗ ಸಿಎಂಗೆ ಮನವಿ ಸಲ್ಲಿಸಿದ ಬೆನ್ನಲ್ಲೇ ಈ ಕುರಿತು ಚರ್ಚಿಸಲು ಸೆ.16ಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಕಲಾವಿದೆಯರು ಹಾಗೂ ಚಿತ್ರರಂಗದ ಪ್ರಮುಖರ ಸಭೆ ಕರೆಯಲಾಗಿದೆ.
ಕೂಡಲೇ ಸಭೆ ನಡೆಸುವಂತೆ ರಾಜ್ಯ ಮಹಿಳಾ ಆಯೋಗ ವಾಣಿಜ್ಯ ಮಂಡಳಿಗೆ ಶುಕ್ರವಾರ ಸೂಚನೆ ನೀಡಿದೆ. ಈ ಹಿನ್ನೆಯಲ್ಲಿ ವಾಣಿಜ್ಯ ಮಂಡಳಿ ಆವರಣದಲ್ಲಿ ಸೆಪ್ಟೆಂಬರ್ 16ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ.












Click it and Unblock the Notifications