ನಟ ದರ್ಶನ್ ಜೈಲಿನಲ್ಲಿನ ರಾಜಾತಿಥ್ಯದ ಪೋಟೋ ವೈರಲ್ ಮಾಡಿಸಿದ್ಯಾರು.?: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ, ಸೆಪ್ಟೆಂಬರ್, 06: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್‌ನ ಪರಪ್ಪನ ಅಗ್ರಹಾರದಲ್ಲಿನ ರಾಜಾತಿಥ್ಯದ ಫೋಟೋ ವೈರಲ್ ಆಗಿದ್ದೇಗೆ ಹಾಗೂ ಇದಕ್ಕೆ ಪ್ರಮುಖ ಸೂತ್ರದಾರರು ಯಾರು ಎಂದು ಪ್ರಹ್ಲಾದ್ ಜೋಶಿ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಾಹಿತಿ ಇಲ್ಲಿದೆ ಗಮನಿಸಿ.
ಮುಡಾ ಹಗರಣ ಹಾಗೂ ವಾಲ್ಮೀಕಿ ಹಗರಣ ಆರೋಪದಿಂದ ತಪ್ಪಿಸಿಕೊಳ್ಳುವ ದುರಾಲೋಚನೆಯಿಂದ ನಟ ದರ್ಶನ್ ಪೋಟೋ ವೈರಲ್ ಮಾಡುವ ನಾಟಕವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಇಂದು (ಆಗಸ್ಟ್ 06) ಆರೋಪ ಮಾಡಿದರು.

ನಗರದಲ್ಲಿ ಇಂದು (ಸೆಪ್ಟೆಂಬರ್ 06) ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಪರಪ್ಪನ ಅಗ್ರಹಾರದ ದರ್ಶನ್ ಪೋಟೋ ಹೊರಗಡೆ ಬಿಟ್ಟಿರುವುದು ಕೂಡ ರಾಜ್ಯ ಸರ್ಕಾರವೇ. ದರ್ಶನ್ ಪ್ರಕರಣ ಸಾಕಷ್ಟು ಚರ್ಚೆಗೆ ಬಂದಿದ್ದ ವಿಷಯವಾಗಿತ್ತು. ಆದರೆ, ಮುಡಾ ವಾಲ್ಮೀಕಿ ಪ್ರಕರಣ ಮುನ್ನೆಲೆಗೆ ಬಂದಾಗ ಎಲ್ಲ ಮಾಧ್ಯಮದಲ್ಲಿಯೂ ಸಾಕಷ್ಟು ಚರ್ಚೆಗೆ ಬಂದಿತ್ತು. ಇದನ್ನು ಡೈವರ್ಟ್ ಮಾಡಲು ಇಂತಹದೊಂದು ಪೋಟೋ ವೈರಲ್ ಮಾಡುವ ಕೆಲಸವನ್ನು ಸರ್ಕಾರ ಮಾಡಿದೆ ಎಂದು ಆರೋಪ ಮಾಡಿದರು.
ದರ್ಶನ ಪ್ರಕರಣದಲ್ಲಿ ನ್ಯಾಯಾಲಯ ಕೊಟ್ಟಿರುವ ದಾಖಲೆಯನ್ನು ಬಹಿರಂಗ ಪಡಿಸುವ ಕಾರ್ಯವನ್ನು ಸರ್ಕಾರ ಮಾಡಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
1 ಕೋಟಿಗೂ ಅಧಿಕ ಸದಸ್ಯತ್ವ: ಮಿಸ್ಡ್ ಕಾಲ್ ಮೂಲಕ ಬಿಜೆಪಿ ಸದಸ್ಯತ್ವ ಅಭಿಯಾನ 72 ಗಂಟೆಗಳ ಅವಧಿಯಲ್ಲಿಯೇ 1 ಕೋಟಿ 5 ಲಕ್ಷ ಸದಸ್ಯತ್ವ ಮಾಡಿರುವುದು ನಿಜಕ್ಕೂ ಬಿಜೆಪಿ ಜನಪ್ರಿಯತೆಯನ್ನು ಪ್ರಸ್ತುತ ಪಡಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಅಭಿಯಾನಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಅಭಿಯಾನವನ್ನು ಕಾಂಗ್ರೆಸ್‌ನವರು ಲೇವಡಿ ಮಾಡಿದ್ದರು. ಆದರೆ ಈಗ ಅವರು ಕೂಡ ಇದನ್ನೇ ಅನುಸರಿಸುತ್ತಿದ್ದಾರೆ. ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಪಕ್ಷ ಎಂಬುವುದನ್ನು ಈ ಸದಸ್ಯತ್ವ ಅಭಿಯಾನದ ಮೂಲಕ ವಿರೋಧ ಪಕ್ಷಗಳಿಗೆ ಪ್ರತ್ಯುತ್ತರ ರೀತಿಯಲ್ಲಿ ತೋರಿರುವುದು ವಿಶೇಷವಾಗಿದೆ ಎಂದರು.
ದೇಶದಲ್ಲಿ ರಾಷ್ಟ್ರೀಯ ಅಧ್ಯಕ್ಷರು ಕೂಡ ಪ್ರಧಾನಮಂತ್ರಿ ಅವರಿಗೆ ಮಿಸ್ಡ್ ಕಾಲ್ ಸದಸ್ಯತ್ವದ ಮೂಲಕ ಚಾಲನೆ ನೀಡಿದ್ದು, ಎಲ್ಲಾ ಕಾರ್ಯಕರ್ತರು ಮುತುವರ್ಜಿಯಿಂದ ಸದಸ್ಯತ್ವ ಅಭಿಯಾನ ನಡೆಸಬೇಕಿದೆ ಎಂದು ಅವರು ಹೇಳಿದರು.
ಪ್ರಹ್ಲಾದ್ ಜೋಶಿ ಆಕ್ರೋಶ: ನಾವು ಕಾಂಗ್ರೆಸ್‌ನವರ ಕಳ್ಳತನ ಪ್ರಕರಣ ಬಯಲಿಗೆ ತಂದಿದ್ದೇವೆ. ಆದರೆ ಕಾಂಗ್ರೆಸಿಗರು, ತಮ್ಮ ಕಳ್ಳತನ ಮುಚ್ಚಿ ಹಾಕಲು ಬೇರೆಯವರನ್ನು ಕಳ್ಳರು ಎಂದು ಬಿಂಬಿಸಲು ಕೋವಿಡ್ ಸ್ಕ್ಯಾಮ್ ಅಂತಾ ಬಿಂಬಿಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಟೀಕೆ ಮಾಡಿದರು.
ಕೋವಿಡ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಒಂದೂವರೆ ವರ್ಷ ಬಿಟ್ಟು ಈಗ ಯಾಕೆ ಕೋವಿಡ್ ಹಗರಣದ ತನಿಖೆ? ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರಶ್ನೆ ಮಾಡಿದರು.
ಇನ್ನು ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಆಗಿದೆ. ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ವರದಿಯನ್ನು ಹೊರಗೆ ಬಿಟ್ಟಿದ್ದಾರೆ. 2021-22ರ ವರದಿ ಇದಾಗಿದೆ. ಇಲ್ಲಿವರೆಗೂ ಯಾಕೆ ಬಿಡುಗಡೆ ಮಾಡಿರಲಿಲ್ಲ? ನೀವು ಕಳ್ಳತನ ಮಾಡಿದಾಗ ನಿಮ್ಮನ್ನು ಹಿಡಿದಾಗ ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯತ್ನ ಅವರೂ ಕಳ್ಳತನ ಮಾಡಿದ್ದಾರೆ ಅಂತಾ ಬಿಂಬಿಸಿ ಬಚಾವಾಗೋ ಯತ್ನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೆಲ್ಲವೂ ನಡೆಯುವುದಿಲ್ಲ. ಅವರು ಏನು ತನಿಖೆ ಮಾಡುತ್ತಾರೋ ಮಾಡಲಿ, ಹಿಂದೆ ಆರೋಗ್ಯ ಸಚಿವರಾಗಿದ್ದ ಸುಧಾಕರ್ ಅವರೇ ಹೇಳಿದ್ದಾರೆ. ಏನು ಬೇಕಾದರೂ ತನಿಖೆ ಮಾಡಿ, ನನಗೇನು ಭಯ ಇಲ್ಲ ಅಂತಾ ಹೇಳಿದ್ದಾರೆ. ವಿಜಯೇಂದ್ರ, ಆರ್.ಅಶೋಕ್ ಅವರೂ ತನಿಖೆ ಮಾಡಲಿ ಎಂದಿದ್ದಾರೆ. ಜನಾರ್ದನ್ ರೆಡ್ಡಿ ಪ್ರಕರಣದಿಂದ ಹಿಡಿದು ಎಲ್ಲವೂ ಮುಡಾ ಹಗರಣ ಆದ ನಂತರ ಶುರುವಾಗಿವೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಹೇಳಿದರು.












Click it and Unblock the Notifications