ಸುಮಲತಾ ಮೊಮ್ಮಗನ ನಾಮಕರಣಕ್ಕೆ ಗೈರು: ವಿಜಯಲಕ್ಷ್ಮಿ ದರ್ಶನ್ ಹೋಗಿದ್ದೆಲ್ಲಿಗೆ??
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಿಡುಗಡೆಯಾಗಿ ಜೈಲಿನಿಂದ ಹೊರಬಂದ ಬಳಿಕ ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಈ ಹಿಂದೆ ಸೋಶಿಯಲ್ ಮೀಡಿಯಾದಿಂದ ಹಿಂದೆ ಸರಿದಿದ್ದ ವಿಜಯಲಕ್ಷ್ಮಿ ದರ್ಶನ್, ಇದೀಗ ಮತ್ತೆ ಸಕ್ರಿಯರಾಗಿದ್ದು, ತಮಗೆ ಖುಷಿ ಕೊಡುವ ವಿಚಾರಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. ಇದೀಗ ವಿಜಯಲಕ್ಷ್ಮಿ ಬೆಂಗಳೂರಿನ ಐಷಾರಾಮಿ ರೆಸ್ಟೋರೆಂಟ್‌ಗೆ ಭೇಟಿ ನೀಡಿದ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿರುವ ಶಿಲ್ಪಾ ಶೆಟ್ಟಿ ಒಡೆತನದ ರೆಸ್ಟೋರೆಂಟ್‌ಗೆ ನಟ ದರ್ಶನ್ ಪತ್ನಿ ಭೇಟಿ ಕೊಟ್ಟಿದ್ದಾರೆ. ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಬೆಂಗಳೂರಿನಲ್ಲಿ ಐಷಾರಾಮಿ ರೆಸ್ಟೋರೆಂಟ್ ಆರಂಭಿಸಿದ್ದಾರೆ. ಬಾಸ್ಟಿಯನ್ ಗಾರ್ಡನ್ ಸಿಟಿ (Bastian Garden City) ಎಂಬ ವೆಜ್ ಹಾಗೂ ನಾನ್ ವೆಜ್ ರೆಸ್ಟೋರೆಂಟ್ ಅನ್ನು ಶಿಲ್ಪಾ ಶೆಟ್ಟಿ ಪಾಲುದಾರಿಕೆಯಲ್ಲಿ ಆರಂಭಿಸಿದ್ದಾರೆ. ಸದ್ಯ ಈ ರೆಸ್ಟೋರೆಂಟ್ ಬೆಂಗಳೂರಿನ ಅತ್ಯಂತ ದುಬಾರಿ ಸ್ಥಳಗಳಲ್ಲಿ ಒಂದಾಗಿದೆ.

ಅರವತ್ತು ವರ್ಷದ ಹಿಂದಿನ ಬೃಹತ್ ಕಟ್ಟಡದಲ್ಲಿರುವ ಈ ರೆಸ್ಟೋರೆಂಟ್, ಏಕಕಾಲಕ್ಕೆ 400 ಜನ ಕುಳಿತುಕೊಳ್ಳುವಷ್ಟು ವಿಶಾಲವಾಗಿದೆ. ಸದ್ಯ ಕೆಲ ಸೆಲೆಬ್ರೆಟಿಗಳ ಇಷ್ಟದ ಸ್ಥಳವಾಗಿರುವ ಬೆಂಗಳೂರಿನ ಬಾಸ್ಟಿಯನ್ ಗಾರ್ಡನ್ ಸಿಟಿ ರೆಸ್ಟೋರೆಂಟ್‌ಗೆ ನಿನ್ನೆ ವಿಜಯಲಕ್ಷ್ಮಿ ದರ್ಶನ್ ಭೇಟಿ ನೀಡಿದ್ದಾರೆ. ಭಾನುವಾರದ ದಿನವನ್ನು ಬಾಸ್ಟಿಯನ್ ಗಾರ್ಡನ್ ಸಿಟಿಯಲ್ಲಿ ಕಳೆದಿರುವ ವಿಜಯಲಕ್ಷ್ಮಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಪ್ಪು ಬಣ್ಣದ ಬಟ್ಟೆಯಲ್ಲಿ ವಿಜಯಲಕ್ಷ್ಮಿ ದರ್ಶನ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅತ್ತಿಗೆ, ದೇವತೆ ಎಂದು ಕಮೆಂಟ್ ಮಾಡಿದ್ದಾರೆ.
ಸುಮಲತಾ ಅಂಬರೀಶ್ ಮೊಮ್ಮಗನ ನಾಮಕರಣಕ್ಕೆ ದರ್ಶನ್ ದಂಪತಿ ಗೈರು
ಮಾಜಿ ಸಂಸದೆ ಸುಮಲತಾ ಅಂಬರೀಶ್ ಮೊಮ್ಮಗ, ನಟ ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿದ್ದಪ್ಪ ಅವರ ಪುತ್ರನ ನಾಮಕರಣ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಅದ್ಧೂರಿಯಾಗಿ ನಡೆದಿದೆ. ಜೂನಿಯರ್ ಅಂಬಿ ತೊಟ್ಟಿಲು ಶಾಸ್ತ್ರದಲ್ಲಿ ನಟ ಕಿಚ್ಚ ಸುದೀಪ್ ಮತ್ತು ಪತ್ನಿ ಪ್ರಿಯಾ ಸುದೀಪ್ ಸೇರಿದಂತೆ ಕನ್ನಡ ಚಿತ್ರರಂಗದ ನಟ, ನಟಿಯರು, ಗಣ್ಯರು ಮತ್ತು ರಾಜಕೀಯದ ಗಣ್ಯರು ಭಾಗಿಯಾಗಿದ್ದರು. ಆದರೆ ಅಭಿಮಾನಿಗಳು ಬಹುನಿರೀಕ್ಷೆಯಿಂದ ಕಾಯುತ್ತಿದ್ದ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಈ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ.

ಇತ್ತೀಚಿಗೆ ತಮ್ಮ ಆತ್ಮೀಯರಾದ ನಟಿ ರಕ್ಷಿತಾ ಪ್ರೇಮ್ ತಮ್ಮನ ಮದುವೆಗೆ ದರ್ಶನ್ ಮತ್ತು ವಿಜಯಲಕ್ಷ್ಮಿ ಇಬ್ಬರೂ ಕೂಡ ತೆರಳಿದ್ದರು. ಹೀಗಾಗಿ ಅಭಿಷೇಕ್ ಅಂಬರೀಶ್ ಪುತ್ರನ ನಾಮಕರಣಕ್ಕೂ ಬರುವ ನಿರೀಕ್ಷೆ ಇತ್ತು. ಆದರೆ ದರ್ಶನ್ ತಾವು ಮದರ್ ಇಂಡಿಯಾ ಎಂದು ಕರೆಯುತ್ತಿದ್ದ ಸುಮಲತಾ ಅಂಬರೀಶ್ ಅವರ ಮನೆಯ ಕಾರ್ಯಕ್ರಮಕ್ಕೆ ಗೈರಾಗಿದ್ದು, ಇಬ್ಬರ ಮಧ್ಯೆ ಅಸಮಾಧಾನ ಇದೆಯೇ ಎನ್ನುವ ಹೊಸ ಅನುಮಾನವನ್ನು ಹುಟ್ಟುಹಾಕಿದೆ. ಜೈಲಿನಿಂದ ಹೊರ ಬಂದ ಬಳಿಕ ನಟ ದರ್ಶನ್ ತಮ್ಮ ಮೈಸೂರಿನ ಫಾರ್ಮ್ ಹೌಸ್‌ನಲ್ಲೇ ಇದ್ದು, ಡೆವಿಲ್ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ.












Click it and Unblock the Notifications