ಮದುವೆ ವದಂತಿ ನಡುವೆ ಒಂದೇ ಸಿನಿಮಾದಲ್ಲಿ ವಿಜಯ್–ರಶ್ಮಿಕಾ ಮಂದಣ್ಣ; ಬಿಡುಗಡೆ ದಿನಾಂಕ ಘೋಷಣೆ
ಟಾಲಿವುಡ್ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರ ಮದುವೆ ವದಂತಿಗಳು ಜೋರಾಗಿರುವ ನಡುವೆಯೇ, ಈ ಜನಪ್ರಿಯ ಜೋಡಿ ಮತ್ತೊಮ್ಮೆ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿರುವುದು ಅಭಿಮಾನಿಗಳಿಗೆ ಭಾರೀ ಖುಷಿ ತಂದಿದೆ. ವಿಜಯ್-ರಶ್ಮಿಕಾ ಅಭಿನಯದ ಹೊಸ ಸಿನಿಮಾ 'ರಣಬಾಲಿ' (Ranabaali) ಫಸ್ಟ್ ಲುಕ್ ಅನ್ನು ಗಣರಾಜ್ಯೋತ್ಸವದ ಅಂಗವಾಗಿ ಮೈತ್ರಿ ಮೂವಿ ಮೇಕರ್ಸ್ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಿದೆ. ಈ ಚಿತ್ರ ಇದೇ ವರ್ಷವೇ ಚಿತ್ರಮಂದಿರಗಳಲ್ಲಿ ತೆರೆಗೆ ಬರಲಿದೆ ಎಂದು ಅಧಿಕೃತವಾಗಿ ದಿನಾಂಕವನ್ನೂ ಘೋಷಿಸಲಾಗಿದೆ.
ಈಗಾಗಲೇ ಇಲ್ಲಿವರೆಗೆ ಈ ಸಿನಿಮಾಗೆ ಹೆಸರು ಇಟ್ಟಿರಲಿಲ್ಲ. ವರ್ಕಿಂಗ್ ಟೈಟಲ್‌ನಿಂದಲೇ ಪರಿಚಿತವಾಗಿದ್ದ ಈ ಚಿತ್ರವನ್ನು ರಾಹುಲ್ ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಬಿಡುಗಡೆಯಾಗಿರುವ ಫಸ್ಟ್ ಲುಕ್ ವಿಡಿಯೋದಲ್ಲಿ, ಭಾರತದಲ್ಲಿನ ಬ್ರಿಟಿಷ್ ಆಳ್ವಿಕೆಯ ಭೀಕರತೆ, ಆರ್ಥಿಕ ಶೋಷಣೆ ಹಾಗೂ ಜನರು ಅನುಭವಿಸಿದ ಸಂಕಷ್ಟಗಳನ್ನು ಗಾಢವಾಗಿ ಚಿತ್ರಿಸಲಾಗಿದೆ. ವಿಶೇಷವಾಗಿ ಬ್ರಿಟಿಷ್ ಅಧಿಕಾರಿ ರಿಚರ್ಡ್ ಟೆಂಪಲ್ ಅವರಂತಹ ಆಡಳಿತಗಾರರು ಉದ್ದೇಶಪೂರ್ವಕವಾಗಿ ಕೆಲವು ಪ್ರದೇಶಗಳನ್ನು ಬರದ ಭೂಮಿಗಳನ್ನಾಗಿಸಿದ ಪರಿಣಾಮ ಜನರು ಅನುಭವಿಸಿದ ನರಕಯಾತನೆಯನ್ನು ತೋರಿಸಲಾಗಿದೆ.

ಜಯಮ್ಮನ ಪಾತ್ರದಲ್ಲಿ ರಶ್ಮಿಕಾ
'ರಣಬಾಲಿ' ಸಿನಿಮಾದಲ್ಲಿ ವಿಜಯ್ ದೇವರಕೊಂಡ ರಣಬಾಲಿ ಎಂಬ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ರಶ್ಮಿಕಾ ಮಂದಣ್ಣ ಜಯಮ್ಮ ಪಾತ್ರದಲ್ಲಿ ನಟಿಸಿದ್ದಾರೆ. ಹಾಲಿವುಡ್ ನಟ ಆರ್ನೋಲ್ಡ್ ವೋಸ್ಲೂ ಈ ಚಿತ್ರದಲ್ಲಿ ಪ್ರತಿನಾಯಕ ಸರ್ ಥಿಯಡೋರ್ ಹೆಕ್ಟರ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೊದಲ ನೋಟದ ದೃಶ್ಯಗಳಲ್ಲಿ ವಿಜಯ್ ದೇವರಕೊಂಡ ಆಕ್ರೋಶಭರಿತರಾಗಿ ಕುದುರೆಯ ಮೇಲೆ ಸವಾರಿ ಮಾಡುತ್ತಾ, ಬ್ರಿಟಿಷ್ ಅಧಿಕಾರಿಯನ್ನು ರೈಲು ಹಳಿಗಳ ಮೇಲೆ ಎಳೆದುಕೊಂಡು ಹೋಗುವ ದೃಶ್ಯ ಭಾರೀ ಗಮನ ಸೆಳೆದಿದೆ. ಇದೇ ವೇಳೆ ರಶ್ಮಿಕಾ ಮಂದಣ್ಣ ಅವರ ಪಾತ್ರದ ಸಣ್ಣ ಝಲಕ್ ಕೂಡ ಬಿಡುಗಡೆಯಾಗಿದೆ.
ರಿಲೀಸ್ ಯಾವಾಗ?
ಇತಿಹಾಸ, ವಿದೇಶಿ ಆಳ್ವಿಕೆ ವಿರುದ್ಧದ ಹೋರಾಟ, ಜನರ ಅಸಹಾಯತೆ ಮತ್ತು ಆಕ್ರೋಶವನ್ನು ಒಳಗೊಂಡಿರುವ ಈ ಸಿನಿಮಾ, ವಿಜಯ್ ದೇವರಕೊಂಡ ಅವರ ಕರಿಯರ್‌ನಲ್ಲಿ ಮತ್ತೊಂದು ವಿಭಿನ್ನ ಪ್ರಯತ್ನವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ. ಜೊತೆಗೆ, ಪರದೆಯ ಮೇಲೆ ಮತ್ತೆ ವಿಜಯ್-ರಶ್ಮಿಕಾ ಜೋಡಿಯನ್ನು ನೋಡಲು ಕಾತರದಿಂದ ಕಾಯುತ್ತಿರುವ ಅಭಿಮಾನಿಗಳಿಗೆ 'ರಣಬಾಲಿ' ವಿಶೇಷ ಆಕರ್ಷಣೆಯಾಗಲಿದೆ. ಈ ಸಿನಿಮಾ ಇದೇ ವರ್ಷ ಸೆಪ್ಟೆಂಬರ್ 11ರಂದು ತೆರೆ ಕಾಣಲಿದೆ.
ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರ ಮದುವೆ ಕುರಿತ ವದಂತಿಗಳು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿವೆ. ಹಲವು ದಿನಗಳಿಂದ ಇಬ್ಬರೂ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು, ಒಂದೇ ಸ್ಥಳಗಳಲ್ಲಿ ರಜೆ ಕಳೆಯುತ್ತಿರುವ ಫೋಟೋಗಳು ಹಾಗೂ ಇತ್ತೀಚೆಗೆ ಒಂದೇ ಸಿನಿಮಾದಲ್ಲಿ ಮತ್ತೆ ಜೋಡಿಯಾಗಿ ನಟಿಸುತ್ತಿರುವ ಹಿನ್ನೆಲೆ ಈ ವದಂತಿಗಳಿಗೆ ಮತ್ತಷ್ಟು ಬಲ ನೀಡಿದೆ. ಫೆಬ್ರವರಿಯಲ್ಲಿ ಇಬ್ಬರೂ ಸಪ್ತಪದಿ ತುಳಿಯಲಿದ್ದಾರೆ ಎಂಬ ಗಾಸಿಪ್ ಕೂಡ ಇದೆ.
'ಗೀತ ಗೋವಿಂದಂ' ಮತ್ತು 'ಡಿಯರ್ ಕಾಮ್ರೇಡ್' ಸಿನಿಮಾಗಳ ನಂತರ ಈ ಜೋಡಿ ಅಭಿಮಾನಿಗಳ ಮನಸ್ಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ. ಈ ನಡುವೆ ಇಬ್ಬರೂ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾರ್ವಜನಿಕವಾಗಿ ಹೆಚ್ಚು ಮಾತನಾಡದೆ ಮೌನ ವಹಿಸಿರುವುದು ಕೂಡ ಮದುವೆ ವದಂತಿಗಳಿಗೆ ಕಾರಣವಾಗಿದೆ. ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಯಾರೂ ಕೂಡ ತಮ್ಮ ಮದುವೆ ಬಗ್ಗೆ ಅಧಿಕೃತವಾಗಿ ಯಾವುದೇ ಘೋಷಣೆ ಮಾಡಿಲ್ಲ. ಅವರ ಕುಟುಂಬಗಳ ಕಡೆಯಿಂದಲೂ ಯಾವುದೇ ಸ್ಪಷ್ಟನೆ ಬಂದಿಲ್ಲ. ಇತ್ತೀಚೆಗಷ್ಟೆ ಮದುವೆ ಬಗ್ಗೆ ಕೇಳಿದಾಗ ಸಮಯ ಬಂದಾಗ ಮಾತನಾಡುತ್ತೇನೆ ಎಂದಿದ್ದರು ರಶ್ಮಿಕಾ.












Click it and Unblock the Notifications