Kantara: ಕಾಂತಾರ-ಅಧ್ಯಾಯ 1 ಸಿನಿಮಾಗೆ ಸಂಕಷ್ಟ; ದೈವಾರಾಧನೆ ಇರಲ್ವಾ ರಿಷಬ್ ಶೆಟ್ಟಿ ಸಿನಿಮಾದಲ್ಲಿ?
ಬೆಂಗಳೂರು, ಫೆಬ್ರವರಿ.18: ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಟ ರಿಷಬ್ ಶೆಟ್ಟಿಗೆ ಹೆಸರು ತಂದುಕೊಟ್ಟ ಸಿನಿಮಾ 'ಕಾಂತಾರ'. ಹೆಚ್ಚು ಪ್ರಚಾರವಿಲ್ಲದೆಯೇ ತೆರೆಕಂಡಿದ್ದ ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡಿತ್ತು. ಈಗ ಈ ಸಿನಿಮಾದ ಹಿಂದಿನ ಅಧ್ಯಾಯವನ್ನು 'ಕಾಂತಾರ-ಅಧ್ಯಾಯ 1'ರ ಮೂಲಕ ಹೇಳಲು ಹೊರಟಿದ್ದಾರೆ ರಿಷಬ್.
ಹೊಂಬಾಳೆ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಕಾಂತಾರ ಪ್ರೀಕ್ವೆಲ್, ಕಾಂತಾರ: ಅಧ್ಯಾಯ 1 ಚಿತ್ರದ ಮಹೂರ್ತ ನಡೆದು ಚಿತ್ರೀಕರಣ ಕೂಡ ಆರಂಭವಾಗಿದೆ. ಈ ಸಿನಿಮಾ ಪ್ರೀಕ್ವೆಲ್‌ನಲ್ಲಿ ಪಂಜುರ್ಲಿ ಮತ್ತು ಗುಳಿಗ ದೇವರುಗಳ ಮೂಲವನ್ನು ವಿವರಿಸಲಾಗುತ್ತದೆ ಎಂದು ಹೇಳಲಾಗಿದೆ. ಆದರೆ, ಈಗ ಸಿನಿಮಾಕ್ಕೆ ಸಂಕಷ್ಟ ಎದುರಾಗಿದೆ.

ಕಾಂತಾರ ಪ್ರಿಕ್ವೆಲ್‌ನಲ್ಲಿ ಪಂಜುರ್ಲಿ ದೈವ ಮತ್ತು ಗುಳಿಗ ದೈವ
ನಟ ರಿಷಬ್ ಶೆಟ್ಟಿ ನಿರ್ದೇಶನದ ಮತ್ತು ನೇತೃತ್ವದ, ಕಾಂತಾರ ಪ್ರಿಕ್ವೆಲ್ ಘೋಷಣೆಯ ಟೀಸರ್ ಬಿಡುಗಡೆಯಾದಾಗಿನಿಂದ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ವರದಿ ಮತ್ತು ಚಿತ್ರದ ಫಸ್ಟ್ ಲುಕ್ ಫೋಸ್ಟರ್, ಟೀಸರ್‌ಗಳ ಪ್ರಕಾರ, ಸಿನಿಮಾಕ್ಕೆ ಬೆನ್ನೆಲುಬಾಗಿರುವುದು ಪಂಜುರ್ಲಿ ಮತ್ತು ಗುಳಿಗ ದೇವರುಗಳ ಮೂಲ ಎಂಬ ಊಹಾಪೋಹಗಳು ಹರಡಿವೆ.
ಒಂದು ಮೂಲದ ಪ್ರಕಾರ, ಚಿತ್ರವು ಪುರಾತನ ಕಾಲದಿಂದ ಸ್ಫೂರ್ತಿ ಪಡೆದಿದ್ದು, ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಮೂಲವನ್ನು ವಿವರಿಸುತ್ತದೆ. "ಚಿತ್ರದ ಕಥಾಹಂದರವು ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಪ್ರಾಚೀನ ಬೇರುಗಳನ್ನು ಹುಡುಕುತ್ತದೆ. ಅವುಗಳ ಮೂಲದ ಮೇಲೆ ಬೆಳಕು ಚೆಲ್ಲುತ್ತದೆ. ಕಾಂತಾರ ಸಿನಿಮಾ ಪಂಜುರ್ಲಿ ದೈವದ ಒಳನೋಟಗಳನ್ನು ಒದಗಿಸಿದರೆ, ಕಾಂತಾರ ಪ್ರೀಕ್ವೆಲ್ ಪಂಜುರ್ಲಿ ದೈವ ಮತ್ತು ಗುಳಿಗ ದೈವಗಳೆರಡನ್ನೂ ಪ್ರೇಕ್ಷಕರಿಗೆ ಪರಿಚಯಿಸುವ ಮೂಲಕ ವಿಶಿಷ್ಟವಾದ ಸಿನಿಮೀಯ ಅನುಭವವನ್ನು ನೀಡುತ್ತದೆ" ಎಂದು ಮೂಲವೊಂದು ತಿಳಿಸಿದೆ.

ಕಾಂತಾರ: ಅಧ್ಯಾಯ 1ಕ್ಕೆ ಸಂಕಷ್ಟ
ಸದ್ಯ ತುಳುನಾಡಿನ ದೈವಾರಾದನೆ ಎಷ್ಟು ಪ್ರಸಿದ್ಧಿ ಪಡೆಯಿತ್ತೋ ಅಷ್ಟೇ ಅವಹೇಳನಕ್ಕೆ ಒಳಗಾಯಿತು ಎನ್ನುವ ಅಪವಾದ ಇದೆ. ಸಿನಿಮಾ ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ದೈವಾರಾದನೆಗೆ ಅಪಮಾನ ಆಗುತ್ತಿದೆ ಅಂತ ದೈವಾರಾಧಕರು ಖಂಡಿಸಿದ್ದಾರೆ. ಇನ್ನು, ದೈವಾರಾಕರಿಗೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ಬೆಂಬಲ ನೀಡಿದ್ದು, ದೈವಾರಾದನೆ ಅಪಮಾನ ಆದ್ರೆ ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದೆ.
"ಮುಂದೆ ಕಂಡ ಕಂಡಲ್ಲಿ ದೈವಾರಾಧನೆ ಪ್ರದರ್ಶನವಾದ್ರೆ ಮುತ್ತಿಗೆ ಹಾಕುತ್ತೇವೆ. ರಿಷಬ್ ಶೆಟ್ಟಿಗೂ ಎಚ್ಚರಿಕೆ ನೀಡುತ್ತಿದ್ದೇವೆ. ಮುಂದೆ ಸಿನೆಮಾದಲ್ಲಿ ದೈವರಾಧನೆಯ ಪ್ರದರ್ಶನವಾಗಬಾರದು. ಪ್ರದರ್ಶನವಾದರೆ ನಮ್ಮ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ. ಯಾವುದೇ ಕಾರಣಕ್ಕೂ ದೈವಾರಾಧನೆ ದೃಶ್ಯಗಳನ್ನೊಳಗೊಂಡ ಧಾರವಾಹಿ ತೆರೆ ಮೇಲೆ ಬರಬಾರದು. ಪ್ರದರ್ಶನವಾದರೆ ಬೆಂಗಳೂರಿನಲ್ಲಿ ಮುತ್ತಿಗೆ ಹಾಕುತ್ತೇವೆ" ಅಂತ ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್‌ವೆಲ್ ಎಚ್ಚರಿಕೆ ನೀಡಿದ್ದಾರೆ.
ಹೀಗಾಗಿ ಮುಂಬರುವ ಹೊಂಬಾಳೆ ಫಿಲ್ಮ್ಸ್ ಅವರ ಕಾಂತಾರ: ಅಧ್ಯಾಯ 1 ಸಿನಿಮಾದಲ್ಲಿ ದೈವಾರಾಧನೆಯ ದೃಶ್ಯಗಳು ಇರುವುದಿಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ದೈವಾರಾಧನೆಯ ದೃಶ್ಯಗಳು ಇಲ್ಲದೆ ಸಿನಿಮಾದಲ್ಲಿ ಇನ್ನೇನು ಇರಲಿದೆ. ಸಿನಿಮಾ ಇರುವುದೇ ಪಂಜುರ್ಲಿ ದೈವ ಮತ್ತು ಗುಳಿಗ ದೈವದ ಮೂಲದ ಮೇಲೆ. ಹೀಗಾಗಿ ರಿಷಬ್ ಶೆಟ್ಟಿ ಮುಂದೆ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.












Click it and Unblock the Notifications