ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಏನಾಗಿತ್ತು? ಕುಟುಂಬಸ್ಥರು ಹೇಳಿದ್ದೇನು?
ಕನ್ನಡ ಚಿತ್ರರಂಗದ ಹಿರಿಯ ನಟ ಬ್ಯಾಂಕ್ ಜನಾರ್ಧನ್ ಇಂದು( ಏಪ್ರಿಲ್ 14) ಸೋಮವಾರ ವಿಧಿವಶರಾಗಿದ್ದಾರೆ. 76 ವರ್ಷದ ಅವರು ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಇಂದು ಬೆಳಗ್ಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅವರ ಪಾರ್ಥೀವ ಶರೀರವನ್ನು ಆಸ್ಪತ್ರೆಯಿಂದ ಸುಲ್ತಾನ್ ಪಾಳ್ಯದ ನಿವಾಸಕ್ಕೆ ರವಾನಿಸಲಾಗಿದ್ದು, ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಕನ್ನಡದಲ್ಲಿ 860 ಸಿನಿಮಾ ಮಾಡಿರುವ ಬ್ಯಾಂಕ್ ಜನಾರ್ಧನ್ ಅವರ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದ್ದು, ಚಿತ್ರರಂಗದ ನಟ- ನಟಿಯರು, ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ. ನಟ ಬ್ಯಾಂಕ್ ಜನಾರ್ಧನ್ ಅವರಿಗೆ ಏನಾಗಿತ್ತು ಎನ್ನುವುದರ ಬಗ್ಗೆ ಅವರ ಪುತ್ರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.

'ನಮ್ಮ ತಂದೆ ಬ್ಯಾಂಕ್ ಜನಾರ್ಧನ್ ಅವರಿಗೆ ಇತ್ತೀಚಿಗೆ ಅನ್ಯಾರೋಗ್ಯ ಹೆಚ್ಚಾಗಿತ್ತು. ಕಳೆದ 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಮೊದಲಿನಿಂದಲೂ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತಿದ್ದೇವು. ಕಳೆದ ವಾರ ಸ್ವಲ್ಪ ಗುಣಮುಖರಾಗಿದ್ದಾರೆ ಎಂದು ಆಸ್ಪತ್ರೆಯಿಂದ ಡಿಶ್ಚಾರ್ಜ್ ಮಾಡಿಕೊಂಡು ಮನೆಗೆ ಕರೆದುಕೊಂಡು ಹೋದೆವು'.
'ಮನೆಗೆ ಹೋದ ಮೂರು ದಿನಗಳ ಬಳಿಕ ಮತ್ತೆ ಆರೋಗ್ಯದಲ್ಲಿ ಏರುಪೇರು ಆಗಿದೆ. ನಂತರ ಇದೇ ಮಣಿಪಾಲ್ ಆಸ್ಪತ್ರೆಗೆ ದಾಖಲು ಮಾಡಿದೆವು. ನಿನ್ನೆ ತುಂಬಾ ಉಸಿರಾಟದ ಸಮಸ್ಯೆಯಾಗಿತ್ತು. ವೈದ್ಯರು ಕೂಡ ನಮ್ಮ ತಂದೆಯನ್ನು ಉಳಿಸಲು ತುಂಬಾ ಪ್ರಯತ್ನ ಪಟ್ಟರು. ಆದರೆ ಇಂದು ಬೆಳಗಿನ ಜಾವ 2.30ರ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ. ತಂದೆಯನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನ ಮಾಡಿದೆವು. ಆದರೂ ಅವರನ್ನು ಉಳಿಸಿಕೊಳ್ಳಲು ಆಗಲಿಲ್ಲ' ಎಂದು ಬ್ಯಾಂಕ್ ಜನಾರ್ಧನ್ ಅವರ ಪುತ್ರ ಪ್ರಸಾದ್ ಕಣ್ಣೀರು ಹಾಕಿದ್ದಾರೆ.
ಇನ್ನು ಬ್ಯಾಂಕ್ ಜನಾರ್ಧನ್ ಅವರ ಪುತ್ರಿಯರು ಕೂಡ ಮಾಧ್ಯಮಗಳೊಂದಿಗೆ ಮಾತನಾಡಿದ್ದು, 'ನಮ್ಮ ತಂದೆ ಅವರ ಎಲ್ಲಾ ಕರ್ತವ್ಯಗಳನ್ನು ಮಾಡಿ ಮುಗಿಸಿದ್ದಾರೆ. ನಾವು ಕೂಡಾ ಅವರು ವಿಶ್ರಾಂತಿ ಪಡೆಯಲಿ ಎಂದು ಬಯಸಿದ್ದೇವು. ಅವರು ಆರಾಮಾಗಿದ್ದರು. ಏಕಾಏಕಿ ಹೀಗಾಗಿದೆ. ನಮ್ಮ ತಂದೆ ಇಲ್ಲ ಎಂದು ಹೇಳಲು ತುಂಬಾ ಬೇಜಾರಾಗುತ್ತದೆ. ಮೊದಲೆಲ್ಲಾ ಆರೋಗ್ಯವಾಗಿದ್ದು, ಇತ್ತೀಚಿಗೆ ಕೆಲ ದಿನಗಳಿಂದ ಅನಾರೋಗ್ಯ ಕಾಡಿತ್ತು. ಅವರು ಹುಷಾರಾಗಿ ಬರುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ಇದ್ದೆವು' ಎಂದು ಹೇಳಿದ್ದಾರೆ.












Click it and Unblock the Notifications