Bigg Boss: ಟ್ರೋಫಿ ನಾನಲ್ಲ ಅಮ್ಮ ನಿನ್ನ ಇನ್ನೊಬ್ಬ ಮಗ ಗೆಲ್ತಾನೆ- ಉಗ್ರಂ ಮಂಜು ಭಾವುಕ ಮಾತು
ಬಿಗ್‌ಬಾಸ್ ಕನ್ನಡ ಸೀಸನ್ 11ರ ಟಾಪ್ 5 ಸ್ಪರ್ಧಿಯಾಗಿ ಉಗ್ರಂ ಮಂಜು ಹೊರಬಂದಿದ್ದಾರೆ. ಬಿಗ್‌ಬಾಸ್ ಮನೆಯಿಂದ ಹೊರ ಬಂದ ಉಗ್ರಂ ಮಂಜು ಪೋಷಕರಿಗೆ ಹೇಳಿದ ಆ ಒಂದು ಮಾತು ವೀಕ್ಷಕರ ಮನ ಮುಟ್ಟಿದೆ. ಹಾಗಾದರೆ ಮಂಜು ಹೇಳಿದ ಆ ಮಾತು ಏನು? ವೀಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದು ಯಾಕೆ?
ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ತ್ರಿವಿಕ್ರಮ್, ಹನುಮಂತ, ಮೋಕ್ಷಿತಾ ಹಾಗೂ ರಜತ್ ಇನ್ನೂ ಮನೆಯಲ್ಲಿ ಉಳಿದುಕೊಂಡಿದ್ದು ಉಗ್ರಂ ಮಂಜು ಹೊರ ಬಂದಿದ್ದಾರೆ. ಉಳಿದ ಸ್ಪರ್ಧಿಗಳಿಗೆ ಹೋಲಿಸಿದರೆ ಉಗ್ರಂ ಮಂಜು ಕಡಿಮೆ ಮತಗಳನ್ನು ಪಡೆದಿದ್ದರಿಂದ ಅವರು ಔಟ್ ಆಗಿದ್ದಾರೆ. ಮನೆಯಿಂದ ಹೊರ ಬಂದ ತಕ್ಷಣ ಕಿಚ್ಚ ಸುದೀಪ್ ಅವರೊಂದಿಗೆ ಮಂಜು ಭಾವುಕ ಮಾತುಗಳನ್ನು ಆಡಿದರು.

'ನಾನು ಅಮ್ಮನಿಗೆ ಟ್ರೋಫಿ ಗೆದ್ದು ಬರುತ್ತೇನೆ ಎಂದು ಹೇಳಿದ್ದೆ. ಆದರೆ ನನಗೆ ಟ್ರೋಫಿ ತರಲು ಆಗಲಿಲ್ಲ. ನಿನ್ನ ಇನ್ನೊಬ್ಬ ಮಗ ಟ್ರೋಫಿ ತಗೊಂಡು ಬರುತ್ತಾನೆ. ನಿನ್ನಂತೆ ತಾಯಿ ಒಬ್ಬರು ನಿನ್ನಷ್ಟೇ ಖುಷಿ ಪಡುತ್ತಾರೆ. ಅದನ್ನು ನೀಡಿ ನೀನು ಖುಷಿ ಪಡು ಅಮ್ಮ' ಎಂದು ಉಗ್ರಂ ಮಂಜು ಮನದಾಳದ ಮಾತು ಹೇಳಿದ್ದಾರೆ. ಇದಕ್ಕೆ ವೀಕ್ಷಕರು ಶಿಳ್ಳೆ ಹೊಡೆದು ಚಪ್ಪಾಳೆ ತಟ್ಟಿದ್ದಾರೆ.
ಅಲ್ಲದೆ ಇಷ್ಟು ದಿನ ಮತ ಹಾಕಿ ಬಿಗ್‌ಬಾಸ್ ಮನೆಯಲ್ಲಿ ಉಳಿಯುವಂತೆ ಮಾಡಿದ ಕನ್ನಡದ ಜನತೆಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ನನಗೆ ಕಿಚ್ಚ ಸುದೀಪ್ ಅಣ್ಣನ ಪ್ರೀತಿ, ಜನರ ಪ್ರೀತಿ ಸಿಕ್ಕಿದೆ. ಇದೇ ನನಗೆ ದೊಡ್ಡ ಟ್ರೋಫಿ. ಬಿಗ್‌ಬಾಸ್ ಮನೆಯಲ್ಲಿ ಸೋತರು ಮ್ಯಾಕ್ಸ್ ಸಿನಿಮಾದಲ್ಲಿ ಗೆದ್ದಿದ್ದೇನೆ ಎಂದಿದ್ದಾರೆ. ಇನ್ನೂ ಇದೇ ವೇಳೆ ವೇದಿಕೆಗೆ ಬಂದ ಅವರ ತಂದೆ ರಾಮಣ್ಣ ಕೂಡ ಮಗನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮಂಜು ಅವರ ಬಗ್ಗೆ ಮಾತನಾಡಿದ ರಾಮಣ್ಣ ಅವರು, 'ನನಗೆ ಡ್ಯಾನ್ಸ್ ಬರಲ್ಲ. ಆದರೂ ಕೂಡ ನನಗೆ ಟ್ರೈನಿಂಗ್ ಕೊಟ್ಟು ಡ್ಯಾನ್ಸ್ ಮಾಡಿಸಿದರು. ನನಗೆ ತುಂಬಾ ಖುಷಿ ಆಯ್ತು. ನನ್ನ ಮಗನಿಗೆ ಓಟ್ ಮಾಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳನ್ನು ತಿಳಿಸುತ್ತೇನೆ' ಎಂದರು.
ಮಂಜು ಔಟ್ ಆಗಲು ಕಾರಣ ಏನು?
ಉಗ್ರಂ ಮಂಜು ಬಿಗ್‌ಬಾಸ್ ಮನೆಯಲ್ಲಿ ಉತ್ತಮ ಸ್ಪರ್ಧಿ. ಆರಂಭದಲ್ಲಿ ತ್ರಿವಿಕ್ರಮ್ ಹಾಗೂ ಮಂಜು ನಡುವೆ ಬಿಗ್ ಫೈಟ್ ಇತ್ತು. ಇವರಿಬ್ಬರೇ ಫಿನಾಲೆ ತಲುಪುತ್ತಾರೆ ಎಂದು ಅಂದುಕೊಳ್ಳಲಾಗಿತ್ತು. ಯಾವಾಗ ರಜತ್ ಹಾಗೂ ಹನುಮಂತ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ರೋ ಆಗ ಎಲ್ಲವೂ ಬದಲಾಗಿ ಹೋಯ್ತು.
ಮಂಜು ಅವರು ಗೌತಮಿ ಹಾಗೂ ಮೋಕ್ಷಿತಾ ಅವರೊಂದಿಗೆ ಸ್ನೇಹ ಬೆಳಸಿ ಆಡಲು ಶುರು ಮಾಡಿದ್ರು. ನಂತರ ಈ ಸ್ನೇಹವೇ ಅವರಿಗೆ ಮುಳುವಾಯ್ತು. ಇದು ಅವರು ಬಿಗ್‌ಬಾಸ್ ಮನೆಯಿಂದ ಹೊರ ಬರಲು ಒಂದು ಕಾರಣ. ಆಕ್ಟಿಂಗ್, ಕಾಮಿಡಿ, ಜಗಳ, ಆಟ ಎಲ್ಲದರಲ್ಲೂ ಮುಂದೆ ಇದ್ದ ಮಂಜು ಅವರು ಸ್ನೇಹದ ಬಲೆಯಲ್ಲಿ ಸಿಲುಕಿ ಹೊರಬರಲು ಆಗದೆ ಕೊನೆಗೆ ಬಿಗ್‌ಬಾಸ್ ಮನೆಯಿಂದಲೇ ಹೊರ ಬಂದರು.












Click it and Unblock the Notifications