Yash: ನಿಮ್ಮಂತ ಸೀನಿಯರ್‌ಗಳಿಂದಲೇ ಕಲಿತೆ ಸರ್: ಟಾಕ್ಸಿಕ್ ಟೀಸರ್ ಮೆಚ್ಚಿದ ಸುದೀಪ್‌ಗೆ ನಟ ಯಶ್ ರಿಪ್ಲೈ
ನಟ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿ ಭಾರೀ ಸಂಚಲನ ಮೂಡಿಸಿದೆ. ಟೀಸರ್ ನೋಡಿದ ಬಳಿಕ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಅವರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿ, ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಪೋಸ್ಟ್‌ಗೆ ಈಗ ನಟ ಯಶ್ ಕೂಡ ಪ್ರತಿಕ್ರಿಯೆ ನೀಡಿದ್ದು, ಅವರ ಮಾತುಗಳು ಅಭಿಮಾನಿಗಳ ಮನಗೆದ್ದಿದೆ.
'ಟಾಕ್ಸಿಕ್' ಟೀಸರ್‌ನ ಮೇಕಿಂಗ್ ಹಾಗೂ ಯಶ್ ಅವರ ಸ್ಕ್ರೀನ್ ಪ್ರೆಸೆನ್ಸ್ ನೋಡಿ ಕಿಚ್ಚ ಸುದೀಪ್ ಅವರು ಮುಕ್ತವಾಗಿ ಶ್ಲಾಘಿಸಿದ್ದರು. ಸ್ಯಾಂಡಲ್‌ವುಡ್‌ನ ಹಿರಿಯ ನಟನಾಗಿ ಸುದೀಪ್ ನೀಡಿದ ಈ ಮೆಚ್ಚುಗೆ, ಯಶ್ ಹಾಗೂ ಚಿತ್ರತಂಡಕ್ಕೆ ದೊಡ್ಡ ಬೆಂಬಲದಂತೆ ಕಂಡಿತು. ಇದನ್ನು ಅಭಿಮಾನಿಗಳು "ಸ್ಟಾರ್‌ರಿಂದ ಸ್ಟಾರ್‌ಗೆ ಸಿಗುವ ಗೌರವ ಇದು" ಎಂದು ಕೊಂಡಾಡಿದ್ದರು.

ಸುದೀಪ್ ಏನಂದಿದ್ರು?
ಯಶ್ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ, ಟಾಕ್ಸಿಕ್ ಟೀಸರ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದ ಸುದೀಪ್, ಈ ಹೊಸ ಹೆಜ್ಜೆ ನಿಮ್ಮನ್ನು ಅದೃಷ್ಟದ ಹತ್ತಿರಕ್ಕೆ ಕೊಂಡೊಯ್ಯಲಿ, ನೀವು ನಿಮ್ಮ ಗುರಿಯೆಡೆಗೆ ಸಾಗಿದ್ದೀರಿ, ಚಿಯರ್ಸ್ ಎಂದು ಪೋಸ್ಟ್ ಮಾಡಿದ್ದರು. ಕಿಚ್ಚ ಸುದೀಪ್ ಅವರ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಯಶ್, ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
ಯಶ್ ಎಕ್ಸ್‌ನಲ್ಲಿ, "ಧನ್ಯವಾದಗಳು ಸರ್.ಒಂದು ಮಹತ್ವದ ವಿಷಯವೆಂದರೆ ಗಮನ, ಪ್ರಾಮಾಣಿಕತೆ ಮತ್ತು ಧೈರ್ಯದಿಂದ ನಮ್ಮ ಕಲೆಯನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ಒತ್ತಾಸೆ ನನ್ನ ಹಿರಿಯರಿಂದ ನಾನು ಕಲಿತೆ. ಅದರಲ್ಲಿ ನೀವು ಕೂಡ ಸೇರಿದ್ದೀರಿ" ಎಂದು ಯಶ್ ಥ್ಯಾಂಕ್ಸ್ ಹೇಳಿದ್ದಾರೆ.
Thank you, sir. One thing I have learnt from my seniors, yourself among them, is the drive to elevate the craft with focus, honesty and courage.🙂
— Yash (@TheNameIsYash) January 11, 2026
ಯಶ್ ಅವರ ಈ ಪ್ರತಿಕ್ರಿಯೆ ಕೇವಲ ಒಂದು ಧನ್ಯವಾದಕ್ಕೆ ಸೀಮಿತವಾಗದೆ, ತಮ್ಮ ಹಿರಿಯ ಕಲಾವಿದರ ಮೇಲೆ ಇರುವ ಗೌರವ ಮತ್ತು ಅಭಿಮಾನವನ್ನು ಸ್ಪಷ್ಟಪಡಿಸಿದೆ. ಚಿತ್ರರಂಗದಲ್ಲಿ ಯಶಸ್ಸು ಬಂದ ನಂತರವೂ ಹಿರಿಯರ ಮಾರ್ಗದರ್ಶನ ಮತ್ತು ಮೌಲ್ಯಗಳನ್ನು ಮರೆಯದೆ ಗೌರವಿಸುವ ವ್ಯಕ್ತಿತ್ವವನ್ನು ಯಶ್ ಮತ್ತೊಮ್ಮೆ ತೋರಿಸಿದ್ದಾರೆ ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇದರ ಸ್ಕ್ರೀನ್‌ಶಾಟ್‌ಗಳು ಎಲ್ಲೆಡೆ ವೈರಲ್ ಆಗಿ, ಇವರೇ ನಿಜವಾದ ಜೋಡೆತ್ತು ಎನ್ನುತ್ತಿದ್ದಾರೆ.
ಕಿಚ್ಚ-ಯಶ್ ಫ್ಯಾನ್ಸ್ ಫುಲ್ ಖುಷ್
ಈ ಸ್ಟಾರ್‌ಗಳ ನಡುವಿನ ಸಂಭಾಷಣೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಅಭಿಮಾನಿಗಳು "ಇದುವೇ ಸ್ಯಾಂಡಲ್‌ವುಡ್‌ನ ಏಕತೆ" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಿಚ್ಚ ಸುದೀಪ್ ಅವರಂತಹ ಹಿರಿಯ ನಟನ ಮೆಚ್ಚುಗೆ ಹಾಗೂ ಅದಕ್ಕೆ ಯಶ್ ನೀಡಿದ ಪ್ರತಿಕ್ರಿಯೆ, 'ಟಾಕ್ಸಿಕ್' ಸಿನಿಮಾದ ಮೇಲೆ ಇರುವ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿದೆ. ಟೀಸರ್ ಮೂಲಕವೇ ಚಿತ್ರ ಭಾರಿ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ಅಪ್‌ಡೇಟ್‌ಗಳಿಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 'ಟಾಕ್ಸಿಕ್' ಟೀಸರ್ ಸುತ್ತಲಿನ ಈ ಸಂಭಾಷಣೆ ಸ್ಯಾಂಡಲ್‌ವುಡ್‌ನಲ್ಲಿ ಕಲೆಗೆ ಇರುವ ಗೌರವ, ಹಿರಿಯ-ಕಿರಿಯರ ನಡುವಿನ ಉತ್ತಮ ಬಾಂಧವ್ಯವನ್ನು ಮತ್ತೊಮ್ಮೆ ತೋರಿಸಿದೆ.












Click it and Unblock the Notifications