ತೆಲುಗು ಹಾಸ್ಯ ನಟ ಪೋಸಾನಿ ಕೃಷ್ಣ ಮುರಳಿ ಬಂಧನ: ಡಿಸಿಎಂ ಪವನ್ ಕಲ್ಯಾಣ್ ಕೈವಾಡ?
ತೆಲುಗು ಚಿತ್ರರಂಗದ ಹಿರಿಯ ನಟ, ಹಾಸ್ಯ ನಟ ಪೋಸಾನಿ ಕೃಷ್ಣ ಮುರಳಿ ಅವರನ್ನು ಆಂಧ್ರ ಪ್ರದೇಶದ ಪೊಲೀಸರು ಹೈದರಾಬಾದ್‌ನಲ್ಲಿ ಬಂಧಿಸಿದ್ದಾರೆ. ನಿನ್ನೆ ಫೆಬ್ರವರಿ 26 ಬುಧವಾರ ರಾತ್ರಿ 8:45ರ ಸುಮಾರಿಗೆ ನಟ ಪೋಸಾನಿ ಕೃಷ್ಣ ಮುರಳಿ ಅವರ ಮನೆಗೆ ತೆರಳಿರುವ ಆಂಧ್ರ ಪ್ರದೇಶದ ಪೊಲೀಸರು ಕುಟುಂಬಸ್ಥರ ಎದುರಿನಲ್ಲೇ ನಟನನ್ನು ಬಂಧಿಸಿದ್ದಾರೆ.
ನಟ ಪೋಸಾನಿ ಕೃಷ್ಣ ಮುರುಳಿ ಅವರ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದು, ಇದೀಗ ಸಮುದಾಯವೊಂದರ ವಿರುದ್ಧ ನಟ ಅವಹೇಳನಕಾರಿ ಹೇಳಿಕೆ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ನಟನ ಹೇಳಿಕೆಯು ಎರಡು ಗುಂಪುಗಳ ನಡುವೆ ವೈಷಮ್ಯಕ್ಕೂ ಕಾರಣವಾಗಿದೆ ಎನ್ನುವ ಆರೋಪದ ಮೇಲೆ ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರು ಹೆಚ್ಚಿನ ತನಿಖೆಗಾಗಿ ನಟ ಪೋಸಾನಿ ಕೃಷ್ಣ ಮುರಳಿ ಅವರನ್ನು ಬಂಧಿಸಿ, ವಿಚಾರಣೆ ಮುಂದುವರಿಸಿದ್ದಾರೆ.

ಬಂಧನದ ವೇಳೆ ನಟ ಪೋಸಾನಿ ಕೃಷ್ಣ ಮುರುಳಿ ಮನೆಯಲ್ಲಿ ಹೈಡ್ರಾಮ
ಪೊಲೀಸರು ನಿನ್ನೆ ಫೆಬ್ರವರಿ 26 ಬುಧವಾರ ರಾತ್ರಿ 8:45ರ ಸುಮಾರಿಗೆ ನಟ ಪೋಸಾನಿ ಕೃಷ್ಣ ಮುರಳಿ ಅವರ ಮನೆಗೆ ತೆರಳಿದ್ದಾರೆ. ಈ ವೇಳೆ ಅರೆಸ್ಟ್ ವಾರೆಂಟ್ ತೋರಿಸಿ ಬಂಧಿಸಲು ಮುಂದಾಗಿದ್ದಾರೆ. ಈ ವೇಳೆ ನಟ ಪೋಸಾನಿ ಕೃಷ್ಣ ತನಗೆ ಆರೋಗ್ಯ ಸರಿ ಇಲ್ಲ ಎನ್ನುವ ಕಾರಣ ಕೊಟ್ಟಿದ್ದು, ನೀವು ನನ್ನನ್ನು ಬಂಧಿಸುವಂತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ನಟ ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದ್ದು, ಕೊನೆಯಲ್ಲಿ ಪೊಲೀಸರು ನಟನನ್ನು ಬಂಧಿಸಿ ಕರೆದುಕೊಂಡು ಹೋಗಿರುವ ವಿಡಿಯೋ ವೈರಲ್ ಆಗಿದೆ.

ನಟನ ವಿರುದ್ಧ ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 196, 353(2), ಮತ್ತು 111 ಹಾಗೂ ಎಸ್‌ಸಿ/ಎಸ್‌ಟಿ ಕಾಯ್ದೆಯ ಸೆಕ್ಷನ್ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಸದ್ಯ ನಟನನ್ನು ಬಂಧಿಸಿರುವ ಪೊಲೀಸರು ರಾಜಂಪೇಟೆಯ ಹೆಚ್ಚುವರಿ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದಾರೆ. ಇನ್ನು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಅವರ ಬಂಧನದಲ್ಲಿ ಡಿಸಿಎಂ ಪವನ್ ಕಲ್ಯಾಣ್ ಕೈವಾಡ ಇದೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿದೆ.












Click it and Unblock the Notifications