Manchu Manoj: ತಂದೆಯಿಂದಲೇ ದೂರು! ಖ್ಯಾತ ತೆಲುಗು ನಟನ ಬಂಧಿಸಿದ ತಿರುಪತಿ ಪೊಲೀಸರು
ತೆಲುಗು ಚಿತ್ರರಂಗದ ಹಿರಿಯ ನಟ ಮೋಹನ್ ಬಾಬು ಕುಟುಂಬದ ಬೀದಿ ಜಗಳ ಸದ್ಯಕ್ಕೆ ಮುಗಿಯುವಂತೆ ಕಾಣುತ್ತಿಲ್ಲ. ಮಂಗಳವಾರ ಮೋಹನ್ ಬಾಬು ಅವರ ಪುತ್ರ ನಟ ಮಂಚು ಮನೋಜ್ ಅವರನ್ನು ತಿರುಪತಿ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿವಾದಕ್ಕೆ ಸಂಬಂಧಿಸಿದ್ದಂತೆ ತನಿಖೆ ಬಳಿಕ ಮಂಚು ಮನೋಜ್‌ರನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ವರದಿಯ ಪ್ರಕಾರ ಮಂಚು ಮನೋಜ್ ಅವರನ್ನು ತಿರುಪತಿಯ ಅವರ ನಿವಾಸದಿಂದ ಬಂಧಿಸಿದ್ದು ಭಕರಪೇಟೆ ಪೋಲಿಸ್ ಠಾಣೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಕೌಟುಂಬಿಕ ವಿವಾದಕ್ಕೆ ಸಲ್ಲಿಸಿದಂತೆ ಹಿರಿಯ ನಟ ಮೋಹನ್ ಬಾಬು ಸಲ್ಲಿಸಿದ ದೂರಿನ ಆಧಾರದ ಮೇಲೆಯೇ ಮಂಚು ಮನೋಜ್‌ರನ್ನು ಬಂಧಿಸಲಾಗಿದೆ.

ಸೋಮವಾರ ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದಲ್ಲಿ ನಡೆದ ಜಲ್ಲಿಕಟ್ಟು ಕಾರ್ಯಕ್ರಮದಲ್ಲಿ ಮನೋಜ್ ಭಾಗವಹಿಸಿದ್ದರು. ಟಿಡಿಪಿ, ಜನಸೇನಾ ಮತ್ತು ಎನ್‌ಟಿಆರ್ ಅಭಿಮಾನಿಗಳು ಪಟಾಕಿ ಸಿಡಿಸುವ ಮೂಲಕ ಮಂಚು ಮನೋಜ್‌ರನ್ನು ಬರಮಾಡಿಕೊಂಡಿದ್ದರು. ಕಾರ್ಯಕ್ರಮದಲ್ಲಿ ಮಂಚು ಮನೋಜ್ ತಮ್ಮ ರಾಜಕೀಯ ಆಕಾಂಕ್ಷೆಗಳ ಬಗ್ಗೆ ಮಾತನಾಡಿದ್ದರು. ಕಾರ್ಯಕ್ರಮಕ್ಕೆ ಮುನ್ನ ಅವರು ಆಂಧ್ರ ಪ್ರದೇಶ ಸಚಿವ ನಾರಾ ಲೋಕೇಶ್ ಅವರನ್ನು ರೇಣಿಗುಂಟ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ್ದರು.
ಏನಿದು ಕುಟುಂಬದ ಜಗಳ
ಕಳೆದ ವರ್ಷ ಹಿರಿಯ ನಟ ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮಂಚು ಮನೋಜ್ ನಡುವೆ ವೈಮನಸ್ಸು ಉಂಟಾಗಿತ್ತು. ಮನೋಜ್ ಮತ್ತು ಅವರ ಪತ್ನಿ ಮೌನಿಕಾ ವಿರುದ್ಧ ಮೋಹನ್ ಬಾಬು ದೂರು ನೀಡಿದ್ದರು. ಹೈದರಾಬಾದ್‌ನ ಜಲಪಲ್ಲಿಯಲ್ಲಿರುವ ತಮ್ಮ ಮನೆಯನ್ನು ಬಲವಂತವಾಗಿ ಆಕ್ರಮಿಸಿಕೊಳ್ಳಲಾಗಿದೆ ಎಂದು ಮಗನ ವಿರುದ್ಧವೇ ಆರೋಪ ಮಾಡಿದ್ದರು. ಮತ್ತೊಂದು ಕಡೆ ಅಪರಿಚಿತ ವ್ಯಕ್ತಿಗಳು ನಮ್ಮ ಮನೆಗೆ ನುಗ್ಗಿ ಹಾನಿ ಮಾಡಿದ್ದಾರೆ ಎಂದು ಮಂಚು ಮನೋಜ್ ಆರೋಪಿಸಿದ್ದಾರೆ.
ತೆಲುಗು ನಟ ಮತ್ತು ನಿರ್ಮಾಪಕ ಮೋಹನ್ ಬಾಬುಗೆ ಎರಡು ಮದುವೆಯಾಗಿದ್ದಾರೆ. ಮಂಚು ವಿಷ್ಣು, ಮಂಚು ಲಕ್ಷ್ಮಿ ಮೋಹನ್ ಬಾಬು ಅವರ ಮೊದಲ ಪತ್ನಿ ವಿದ್ಯಾದೇವಿಯ ಮಕ್ಕಳಾಗಿದ್ದರೆ ಮಂಚು ಮನೋಜ್ ವಿದ್ಯಾ ಅವರ ತಂಗಿ ನಿರ್ಮಲಾ ದೇವಿ ಅವರ ಮಗ. ಮೊದಲ ಪತ್ನಿ ವಿದ್ಯಾದೇವಿ ಮೃತಪಟ್ಟ ಬಳಿಕ ನಿರ್ಮಲಾ ದೇವಿ ಅವರನ್ನು ಮದುವೆಯಾಗಿದ್ದರು.
ಮಂಚು ಮನೋಜ್ ಮತ್ತು ಮಂಚು ವಿಷ್ಣು ನಡುವೆ ಸಹೋದರರ ಜಗಳ ಕುಟುಂಬದಲ್ಲಿ ಹಲವು ವರ್ಷದಿಂದ ನಡೆಯುತ್ತಿದೆ. ಮೋಹನ್ ಬಾಬು ವಿಶ್ವವಿದ್ಯಾಲಯ ಮತ್ತು ಶ್ರೀ ವಿದ್ಯಾನಿಕೇತನ ಶೈಕ್ಷಣಿಕ ಟ್ರಸ್ಟ್ ಸೇರಿದಂತೆ ಅಪಾರ ಆಸ್ತಿ ಹೊಂದಿದ್ದು ಆಸ್ತಿ ಹಂಚಿಕೆಯೇ ಈಗ ಕಲಹಕ್ಕೆ ಕಾರಣವಾಗಿದೆ. ವಿಶ್ವ ವಿದ್ಯಾಲಯ ಸೇರಿದಂತೆ ಅವರ ದೊಡ್ಡ ಸಂಸ್ಥೆಗಳಲ್ಲಿ ಮಂಚು ವಿಷ್ಣುಗೆ ದೊಡ್ಡ ಹುದ್ದೆ ನೀಡಿದ್ದರೂ, ಮಂಚು ಮನೋಜ್‌ರನ್ನು ಕಡೆಗಣಿಸಲಾಗಿದೆ ಎಂದು ವರದಿಯಾಗಿದೆ.
ಮನೋಜ್ ಮತ್ತು ಮೌನಿಕಾ ಮದುವೆಗೆ ಮೋಹನ್ ಬಾಬು ಮತ್ತು ಅವರ ಕುಟುಂಬ ಒಪ್ಪಿಗೆ ನೀಡಿಲ್ಲ ಎಂದು ಹೇಳಲಾಗಿದೆ. ಇದು ಕುಟುಂಬ ಕಲಹ ಹೆಚ್ಚಲು ಇನ್ನೊಂದು ಕಾರಣವಾಗಿದೆ.












Click it and Unblock the Notifications