Tara Anuradha: ಕಿಚ್ಚ ಸುದೀಪ್‌ಗೆ ಟಾಂಗ್ ಕೊಟ್ಟ ತಾರಾ ಅನುರಾಧಾ?
ಕನ್ನಡ ಚಿತ್ರರಂಗ ಕಂಡ ಅತ್ಯಾದ್ಭುತ ನಟಿ ತಾರಾ ಅನುರಾಧಾ ಅವರಿಗೆ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಡಾಕ್ಟರೇಟ್ ಪದವಿಯನ್ನು ಕೊಟ್ಟು ಗೌರವಿಸಿದೆ. ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿರುವ ತಾರಾ ಅವರು ನಟನೆಯ ಮೂಲಕ ಸಾಕಷ್ಟು ಜನರ ಪ್ರೀತಿಯನ್ನು ಗಳಿಸಿದ್ದಾರೆ. ಪ್ರಶಸ್ತಿ ಪಡೆದ ಖುಷಿ ವಿಚಾರವನ್ನು ತಾರಾ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಇದೇ ವೇಳೆ ಕಿಚ್ಚಾ ಸುದೀಪ್ ಅವರಿಗೆ ಟಾಂಗ್ ಕೊಟ್ರಾ ತಾರಾ ಎನ್ನುವ ಅನುಮಾನ ಕೂಡ ಮೂಡಿದೆ. ಹಾಗಾದರೆ ತಾರಾ ಹೇಳಿದ್ದೇನು?
ಸಂದರ್ಶನವೊಂದರಲ್ಲಿ ಮಾತನಾಡಿದ ತಾರಾ ಅವರು, ತಮಗೆ ಡಾಕ್ಟರೇಟ್ ಪದವಿ ಸಿಕ್ಕಿದ್ದರ ಬಗ್ಗೆ ಮಾತನಾಡಿದರು. 'ನಮಗೆ ಈ ರೀತಿ ಪ್ರಶಸ್ತಿಗಳು ಬಂದಾಗ ಹೌದಾ..? ನಾನು ಈ ಪ್ರಶಸ್ತಿಗೆ ಭಾಜನಾಗಿದ್ನಾ ಅನ್ನೋ ಪ್ರಶ್ನೆ ಬರುತ್ತದೆ. ನನಗೆ ಪ್ರಶಸ್ತಿ ಬಂದಿರುವುದು ತುಂಬಾ ದೊಡ್ಡ ಗೌರವ. ಡಾಕ್ಟರೇಟ್ ಅನ್ನು ತುಂಬಾ ಹಿರಿಯರಿಗೆ ಕೊಡುತ್ತಾರೆ ಅನ್ನೋ ಭ್ರಮೆ ಇತ್ತು ನನಗೆ. ಆದರೆ ಅದಕ್ಕೆ ತಕ್ಕ ವ್ಯಕ್ತಿ ಯಾರೇ ಆಗಲಿ ಅವರನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ತುಂಬಾ ಜನ ಹಿರಿಯರಿಗೆ ಈ ಪ್ರಶಸ್ತಿ ಸಿಕ್ಕಿದೆ. ತುಂಬಾ ಜನರಿಗೆ ಪ್ರಶಸ್ತಿ ಸಿಗಬೇಕಿದೆ. ಆ ಹಿರಿಯರಲ್ಲಿ ನನ್ನನ್ನು ಗುರುತಿಸಿ ಈ ಪ್ರಶಸ್ತಿ ನೀಡಿದ್ದು ತುಂಬಾ ಖುಷಿ ಆಗಿದೆ' ಎಂದು ತಾರಾ ಅವರು ಹೇಳಿದರು.

ಕಿಚ್ಚ ಸುದೀಪ್‌ಗೆ ಟಾಂಗ್ ಕೊಟ್ಟ ತಾರಾ?
ಇನ್ನೂ ಕಿಚ್ಚ ಸುದೀಪ್ ಅವರು ಪ್ರಶಸ್ತಿಯನ್ನು ನಿರಾಕರಿಸಿದ ಬಗ್ಗೆ ಮಾತನಾಡಿದ ತಾರಾ ಅನುರಾಧಾ ಅವರು, 'ಯಾವುದೇ ಪ್ರಶಸ್ತಿಯನ್ನು ನಿರಾಕರಿಸುವಷ್ಟು ದೊಡ್ಡದಾಗಿ ನಾನು ಬೆಳದಿಲ್ಲ. ಪ್ರಶಸ್ತಿ ನಮಗೆ ಸಂದ ಗೌರವ, ನಮಗೆ ತೋರಿಸುವ ಗೌರವ. ಆ ಪ್ರಶಸ್ತಿ ನನ್ನ ವೈಯಕ್ತಿವಾಗಿ ಸಂದ ಪ್ರಶಸ್ತಿ ಅಲ್ಲ. ಅದು ಒಬ್ಬ ನಟಿಗೆ ಬಂದ ಗೌರವ. ಅದನ್ನು ಕೊಟ್ಟಾಗ ನನ್ನ ಜವಬ್ದಾರಿ ಹೆಚ್ಚಾಗುತ್ತದೆ. ನಾನು ಇನ್ನಷ್ಟು ಏನಾದರೂ ಮಾಡಬೇಕು ಅನ್ನೋದು ತಲೆಯಲ್ಲಿ ಬರುತ್ತದೆ. ಆದರೆ ಅದನ್ನು ನಿರಾಕರಿಸೋದು ನನಗೆ ಸರಿ ಅನಿಸೋದಿಲ್ಲ' ಎಂದು ತಾರಾ ಹೇಳಿದ್ದಾರೆ. ಇದೇ ವೇಳೆ ಡಾ. ರಾಜಕುಮಾರ್ ಅವರ ಕುಟುಂಬವನ್ನೂ ತಾರಾ ಅವರು ನೆನೆದರು.
ರಾಜಕುಮಾರ್ ಕುಟುಂಬದ ಮೇಲೆ ತುಂಬಾ ಗೌರ ಇದೆ- ತಾರಾ
'ನನಗೆ ಡಾ.ರಾಜಕುಮಾರ್ ಅವರ ಕುಟುಂಬದ ಮೇಲೆ ಅತೀವವಾದ ಗೌರವ ಇದೆ. ಯಾಕೆಂದರೆ ನನಗೆ ಆರಂಭದಲ್ಲಿ ತುಂಬಾ ಒಳ್ಳೆಯ ಪಾತ್ರಗಳನ್ನು ಕೊಟ್ಟು ಬೆಳಸಿದವರು. ಅವರು ನೀಡಿದ ಒಳ್ಳೆಯ ಪಾತ್ರಗಳಿಂದಾಗಿ ನಾನು ಇವತ್ತು ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ' ಎಂದು ರಾಜಕುಮಾರ್ ಅವರ ಕುಟುಂಬವನ್ನು ಈ ಸಂದರ್ಭದಲ್ಲಿ ತಾರಾ ಅವರು ನೆನೆದರು. ಅಲ್ಲದೇ ತಾರಾ ಅವರು ಈಗಿನ ನಟ-ನಟಿಯರಿಗೆ ಕಿವಿ ಮಾತನ್ನೂ ಹೇಳಿದ್ದಾರೆ.
ಈಗಿನ ನಟ-ನಟಿಯರಿಗೆ ತಾರಾ ಕಿವಿ ಮಾತು
'ನಾವೆಲ್ಲಾ ಸಿನಿಮಾಕ್ಕೆ ಬಂದ ಮೇಲೆ ಎಲ್ಲವನ್ನೂ ಕಲಿತಿದ್ದು. ಆದರೆ ಈಗ ಸಿನಿಮಾ ಬರುವ ಮುನ್ನ ಎಲ್ಲವನ್ನೂ ಕಲಿತು ಬರುತ್ತಾರೆ. ಹೀಗಾಗಿ ನಾವು ಅವರಿಗೆ ಹೇಳಿಕೊಡುವುದು ಏನೂ ಇರೋದಿಲ್ಲ. ಅವರಿಗೆ ಒಳ್ಳೆಯದಾಗಲಿ ಅಂತ ಶುಭ ಕೋರಬಹುದು ಅಷ್ಟೇ' ಎಂದು ತಾರಾ ಹೇಳಿದರು.
ಒಟ್ಟಿನಲ್ಲಿ ಒಂದು ಪ್ರಶಸ್ತಿಗೆ ತಾರಾ ಅವರು ಕೊಡುವ ಗೌರವ ಎಷ್ಟು ಎನ್ನುವ ಬಗ್ಗೆ ವಿವರಿಸಿದ್ದಾರೆ. ಅಲ್ಲದೆ ಆ ಪ್ರಶಸ್ತಿ ಸಿಕ್ಕಾಗ ಅದರಿಂದ ಒಬ್ಬ ನಟಿಗೆ ಆಗುವ ಖುಷಿ ಎಂಥದ್ದು ಎನ್ನುವ ಬಗ್ಗೆ ವಿವರಿಸಿದ್ದಾರೆ.












Click it and Unblock the Notifications