Rajinikanth: ಕ್ಲಾಸ್ ಟಾಪರ್ ಆಗಿದ್ದ ರಜನಿಕಾಂತ್ ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿದ್ದೇಕೆ?
ಭಾರತೀಯ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ರಜನಿಕಾಂತ್ ಅವರು ಮೂಲತಃ ಕನ್ನಡಿಗರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಬೆಂಗಳೂರಿನಲ್ಲಿ ಬಸ್ ಕಂಡಕ್ಟರ್ ಆಗಿದ್ದ ರಜನಿಕಾಂತ್ ಅವರು ಬಳಿಕ ತಮಿಳು ಚಿತ್ರರಂಗದ ಮೇರುನಟರಾಗಿ ಇಂದಿಗೂ ಸೌಂಡ್ ಮಾಡುತ್ತಿದ್ದಾರೆ. ಆದರೆ ಅವರು ವಿದ್ಯಾರ್ಥಿ ಜೀವನದಲ್ಲೂ ಟಾಪರ್ ಆಗಿದ್ದರು ಎಂಬುದನ್ನು ಖುದ್ದು ಅವರೇ ತಿಳಿಸಿದ್ದಾರೆ.
ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿರುವ ರಜನಿಕಾಂತ್ ಅವರು ಬೆಂಗಳೂರಿನಲ್ಲಿ ತಮ್ಮ ಬಾಲ್ಯದ ಜೀವನ ಹಾಗೂ ವಿದ್ಯಾರ್ಥಿ ಜೀವನದ ಬಗ್ಗೆ ಕನ್ನಡದಲ್ಲೇ ಮಾತನಾಡಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿ ಸದಾ ಮುಂದಿರುತ್ತಿದ್ದ ರಜನಿಕಾಂತ್ ಅವರು ತರಗತಿಯ ಟಾಪರ್ ಆಗಿದ್ದರು. ಹಾಗೆಯೇ ಇದ್ದಕ್ಕಿದ್ದಂತೆ ಲಾಸ್ಟ್ ಬೆಂಚ್ ಸ್ಟೂಡೆಂಟ್ ಆಗಿಬಿಟ್ಟೆ ಎಂದು ಅವರು ನೆನೆದಿದ್ದಾರೆ. ಇದಕ್ಕೆ ಕಾರಣವನ್ನೂ ಅವರು ಬಿಚ್ಚಿಟ್ಟಿದ್ದಾರೆ.

ರಜನಿಕಾಂತ್ ಅವರು ಬೆಂಗಳೂರಿನ ಎಪಿಎಸ್ ಸಂಸ್ಥೆಯ ವಿದ್ಯಾರ್ಥಿಯಾಗಿದ್ದರು ಎಂಬುದನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ನಾನು ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ನಲ್ಲಿರುವುದರಿಂದ ಸಂಸ್ಥೆಯ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗುತ್ತಿಲ್ಲ. ಅಲ್ಲಿಗೆ ಬಂದಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು ಎಂದು ರಜನಿ ಹೇಳಿದ್ದಾರೆ.
ಎಪಿಎಸ್ ಹೈಸ್ಕೂಲ್ ಹಾಗೂ ಕಾಲೇಜಿನಲ್ಲಿ ಓದಿದ್ದೇನೆ ಎನ್ನುವ ಗರ್ವ ನನಗಿದೆ. ಮೊದಲಿಗೆ ನಾನು ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದ ಬಳಿ ಇರುವ ಸರ್ಕಾರಿ ಶಾಲೆಯಲ್ಲಿ ಓದಿದೆ. ಅಲ್ಲಿನ ನಾನು ಕನ್ನಡ ಮಾಧ್ಯಮದಲ್ಲಿ ಓದಿದ್ದು, ತುಂಬಾ ಚೆನ್ನಾಗಿ ಓದುತ್ತಿದ್ದೆ. ಕ್ಲಾಸಿಗೆ ನಾನು ಫಸ್ಟ್ ಎಂದಿದ್ದಾರೆ.

ಕ್ಲಾಸಿಗೆ ನಾನೇ ಲೀಡರ್ ಆಗಿದ್ದೆ. ಶೇ 98ರಷ್ಟು ಅಂಕ ಪಡೆದಿದ್ದರಿಂದ ನನ್ನನ್ನು ಹೈಸ್ಕೂಲಿಗೆ ಇಂಗ್ಲೀಷ್ ಮೀಡಿಯಂಗೆ ಸೇರಿಸಿಬಿಟ್ಟರು. ಸಂಪೂರ್ಣವಾಗಿ ಕನ್ನಡ ಮಾಧ್ಯಮದಲ್ಲಿ ಓದಿದ್ದ ನಾನು ದಿಢೀರನೆ ಇಂಗ್ಲಿಷ್ ಮಾಧ್ಯಮಕ್ಕೆ ಸೇರಿದ್ದರಿಂದ ಬಹಳ ಕಷ್ಟವಾಯ್ತು. ಇದರಿಂದ ಫಸ್ಟ್ ಬೆಂಚ್‌ನಲ್ಲಿದ್ದ ನಾನು ಲಾಸ್ಟ್ ಬೆಂಚ್‌ಗೆ ಬಂದುಬಿಟ್ಟೆ ಎಂದು ನೆನೆದಿದ್ದಾರೆ.
ಆದರೆ, ಅಲ್ಲಿದ್ದ ಶಿಕ್ಷಕರು ನನ್ನ ಕಷ್ಟ ಅರ್ಥ ಮಾಡಿಕೊಂಡು ಪಾಠ ಮಾಡಿದರು, ನನ್ನ ಮೇಲೆ ಕರುಣೆ ತೋರಿದ್ದರಿಂದ ಎರಡು ವರ್ಷ ಸಲೀಸಾಗಿ ಪಾಸ್ ಮಾಡಿದೆ. ಆದರೆ, 10ನೇ ತರಗತಿಗೆ ಬಂದಾಗ ಪಬ್ಲಿಕ್ ಪರೀಕ್ಷೆ ಇದ್ದಿದ್ದರಿಂದ ಒಂದು ವಿಷಯದಲ್ಲಿ ಫೇಲ್ ಆದೆ. ಆಗ ಕೆಮಿಸ್ಟ್ರಿ ಟೀಚರ್‌ವೊಬ್ಬರು ಮನೆಯಲ್ಲಿ ಸ್ಪೆಷಲ್ ಕ್ಲಾಸ್ ತಗೋತಿದ್ರು, ನನಗೆ ಫ್ರೀಯಾಗಿ ಅವರು ಪಾಠ ಹೇಳಿಕೊಟ್ಟರು. ಕೊನೆಗೆ ನಾನು ಆ ವಿಷಯದಲ್ಲಿ ಪಾಸ್ ಆದೆ ಎಂದು ರಜನಿ ತಮ್ಮ ಬಾಲ್ಯ ನೆನೆದಿದ್ದಾರೆ.
ಕೊನೆಗೆ ಮಾರ್ಕ್ಸ್ ಕಡಿಮೆ ಇದ್ರೂ ನನ್ನನ್ನು ಹೈಸ್ಕೂಲಿಂದ ಕಾಲೇಜಿಗೆ ಕಳಿಸಿದ್ರು. ಆದರೆ, ಹಲವು ಕಾರಣಗಳಿಂದ ನಾನು ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೈಸ್ಕೂಲ್‌ನಲ್ಲಿ ಪ್ರತಿ ವರ್ಷ ನಾಟಕಗಳು ನಡೆಯುತ್ತಿದ್ದವು. ನಾನು ಕಥೆಗಳನ್ನು ಹೇಳುತ್ತಿದ್ದ ಕಾರಣ ಉಳಿದ ವಿದ್ಯಾರ್ಥಿಗಳು ತುಂಬಾ ಖುಷಿಪಡುತ್ತಿದ್ದರು. ಕೊನೆಗೆ ಒಂದು ನಾಟಕ ಮಾಡುವಂತೆ ಶಿಕ್ಷಕರು ನನಗೆ ಹೇಳಿದ್ರು. ಆದಿಶಂಕರರು ಚಂಡಾಲನನ್ನು ಭೇಟಿಯಾಗುವ ಪ್ರಸಂಗ ನನಗೆ ನೀಡಿದ್ರು.
ಆಗ ನಾನು ಚಂಡಾಲನ ಪಾತ್ರವನ್ನು ಮಾಡಿದೆ. ನಾನು ಚಂಡಾಲನ ತರನೇ ಇದ್ದೆ ಅಂತ ಕಾಣುತ್ತೆ. ಅದಕ್ಕೆ ಆ ಪಾತ್ರ ನನಗೆ ಬಂತು. ಕೊನೆಗೆ ನಮ್ಮ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಸಿಕ್ಕಿತು. ಆಗ ನನಗೆ ಅತ್ಯುತ್ತಮ ನಟ ಎಂಬ ಪ್ರಶಸ್ತಿ ಕೂಡ ಬಂದಿತ್ತು. ದೊಡ್ಡ ಕಪ್ ನನಗೆ ಕೊಟ್ಟಿದ್ರು. ಆಗಲೇ ನನನ್ನು ಒಬ್ಬ ನಟ ಎಂದು ಅಂಗೀಕಾರ ಮಾಡಿದ್ದರು. ಇಂದು ಅದೇ ವೃತ್ತಿಯಲ್ಲಿ ನನ್ನಿಂದ ಸಾಧ್ಯವಾದಷ್ಟು ನಟನೆ ಮಾಡುತ್ತಿದ್ದೇನೆ ಎಂದು ರಜನಿ ಮೆಲುಕು ಹಾಕಿದ್ದಾರೆ.
ಇಂದು ನಾನು ದೊಡ್ಡ ನಟನಾಗಲು ಕಾರಣ ಒಂದು ರೀತಿಯಲ್ಲಿ ಎಪಿಎಸ್ ಸಂಸ್ಥೆಯಿಂದಲೇ ಶುರುವಾಗಿದ್ದು ಎಂದು ಹೇಳಿಕೊಳ್ಳಲು ಒಂದು ರೀತಿಯ ಸಂತೋಷ, ಹೆಮ್ಮೆ ಇದೆ. ಎಪಿಎಸ್‌ನಲ್ಲಿ ನಾವು ಕಳೆದ ಶೈಕ್ಷಣಿಕ ದಿನಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಖಂಡಿತವಾಗಿಯೂ ಮುಂದೊಮ್ಮೆ ನಾನು ಅಲ್ಲಿಗೆ ಬಂದೇ ಬರುತ್ತೇನೆ ಎಂದು ರಜನಿಕಾಂತ್ ಪ್ರಾಮಿಸ್ ಮಾಡಿದ್ದಾರೆ.












Click it and Unblock the Notifications