Rajinikanth: ಜೈಲರ್ ಬಿಡುಗಡೆಗೂ ಮುನ್ನ ಹಿಮಾಲಯದಲ್ಲಿ ಕಾಣಿಸಿಕೊಂಡ ಸೂಪರ್ ಸ್ಟಾರ್ ರಜನಿಕಾಂತ್- ಇಲ್ಲಿದೆ ನಿಗೂಢ ಕಾರಣ
ಚೆನ್ನೈ, ಆಗಸ್ಟ್ 09: ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಬಹು ನಿರೀಕ್ಷಿತ ಚಿತ್ರ 'ಜೈಲರ್' ನಾಳೆ ( ಆಗಸ್ಟ್ 10 ) ಬಿಡುಗಡೆಯಾಗಲಿದೆ. ಇದಕ್ಕೆ ಮುಂಚಿತವಾಗಿ, ಅಂದರೆ ಬುಧವಾರ ಬೆಳಿಗ್ಗೆ ರಜನಿಕಾಂತ್ ಅವರು ಚೆನ್ನೈನಿಂದ ಹಿಮಾಲಯಕ್ಕೆ ತೆರಳಿದ್ದಾರೆ.
ಚೆನ್ನೈ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಜನಿಕಾಂತ್, 'ನಾನು 4 ವರ್ಷಗಳ ನಂತರ ಹಿಮಾಲಯಕ್ಕೆ ಪ್ರಯಾಣಿಸುತ್ತಿದ್ದೇನೆ. ಕೋವಿಡ್ ಸಾಂಕ್ರಾಮಿಕದಿಂದಾಗಿ ಹಿಮಾಲಯಕ್ಕೆ ಭೇಟಿ ನೀಡಲು ಸಾಧ್ಯವಾಗಲಿಲ್ಲ' ಎಂದು ತಿಳಿಸಿದ್ದಾರೆ.
ಜೈಲರ್ ಚಿತ್ರದಲ್ಲಿನ ಅವರ ಪಾತ್ರದ ಕುರಿತು ಕೇಳಿದಾಗ ರಜನಿಕಾಂತ್ ಅವರು ನಗುತ್ತಲೇ, 'ನೀವು ಸಿನಿಮಾವನ್ನು ನೋಡಿ, ಬಳಿಕ ಅದರ ಬಗ್ಗೆ ಹೇಳಿ' ಎಂದು ತಿಳಿಸಿದರು.

ಸೂಪರ್‌ಸ್ಟಾರ್ ರಜನಿಕಾಂತ್ ಅವರು ಹಿಮಾಲಯಕ್ಕೆ ಹಲವಾರು ಭಾರಿ ಭೇಟಿ ನೀಡಿದ್ದಾರೆ. ಅವರು ಹಿಮಾಲಯದ ಮೇಲೆ ಅಪಾರ ಒಲವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಅಲ್ಲಿನ ಬೆಟ್ಟ, ನದಿ, ಹಿಮ ಮತ್ತು ಧ್ಯಾನದ ಕುರಿತು ರಜನಿಕಾಂತ್ ಮಾತನಾಡುತ್ತಲೇ ಇರುತ್ತಾರೆ.
'ರಜನಿಕಾಂತ್ ಹಿಮಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಾಮಾನ್ಯವಾಗಿ ಅಲ್ಲಿನ ಋಷಿಮುನಿಗಳೊಂದಿಗೆ ಮಾತನಾಡುತ್ತಾರೆ. ಅವರ ಜೀವನ ವಿಧಾನದ ಕುರಿತು ತಿಳಿದುಕೊಳ್ಳುತ್ತಾರೆ. ಅವರೊಂದಿಗೆ ಧ್ಯಾನ ಮಾಡುತ್ತಾರೆ' ಎಂದು ಸೂಪರ್ ಸ್ಟಾರ್ ಸ್ನೇಹಿತರು ತಿಳಿಸಿದ್ದಾರೆ.
ನಾಳೆ ಜೈಲರ್ ಬಿಡುಗಡೆ
ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಬಹುನಿರೀಕ್ಷಿತ ಜೈಲರ್ ಚಿತ್ರ ನಾಳೆ ವಿಶ್ವದಾದ್ಯಂತ ಥಿಯೇಟರ್‌ಗಳಲ್ಲಿ ಅದ್ಧೂರಿಯಾಗಿ ತೆರೆಕಾಣಲಿದೆ. ಮೃಗ ಖ್ಯಾತಿಯ ನೆಲ್ಸನ್ ದಿಲೀಪ್‌ಕುಮಾರ್ ಈ ಚಿತ್ರದ ನಿರ್ದೇಶಕರು. ಈ ಚಿತ್ರ ತಮಿಳು, ಕನ್ನಡ, ತೆಲುಗು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಈ ಚಿತ್ರದಲ್ಲಿ ರಜಿನಿಕಾಂತ್ ಅವರ ಪತ್ನಿಯಾಗಿ ರಮ್ಯಾ ಕೃಷ್ಣನ್ ನಟಿಸಿದ್ದಾರೆ. ತಮನ್ನಾ ಭಾಟಿಯಾ, ಮೋಹನ್ ಲಾಲ್, ಜಾಕಿ ಶ್ರಾಫ್, ಶಿವರಾಜಕುಮಾರ್, ವಿನಾಯಕನ್, ಸುನಿಲ್ ಮತ್ತು ಯೋಗಿ ಬಾಬು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಸಂಗೀತವನ್ನು ಅನಿರುದ್ಧ್ ರವಿಚಂದರ್ ಸಂಯೋಜಿಸಿದ್ದಾರೆ. ಸನ್ ಪಿಕ್ಚರ್ಸ್ ಇದನ್ನು ನಿರ್ಮಿಸಿದೆ.
ಕಂಪನಿಗಳಿಗೆ ರಜೆ
ಎರಡು ವರ್ಷಗಳ ಬಳಿಕ ರಜನಿಕಾಂತ್ ಅವರನ್ನು ಮತ್ತೆ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ. ಜೈಲರ್ ಬಿಡುಗಡೆಯ ದಿನದಂದು ಚೆನ್ನೈ ಮತ್ತು ಬೆಂಗಳೂರಿನಲ್ಲಿರುವ ಕೆಲ ಕಂಪನಿಗಳು ತನ್ನ ಉದ್ಯೋಗಿಗಳಿಗೆ ರಜೆ ಘೋಷಿಸಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ. ಅಷ್ಟೇ ಅಲ್ಲದೇ, ಕೆಲವು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಉಚಿತ ಟಿಕೆಟ್‌ಗಳನ್ನೂ ನೀಡಿವೆ ಎಂದು ತಿಳಿದುಬಂದಿದೆ. ಗುರುವಾರದಂದು ವಿಶ್ವಾದ್ಯಂತ ಚಿತ್ರವು ಅದ್ಧೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ.












Click it and Unblock the Notifications