ಮನೆಯಲ್ಲಿ ಮಗಳಿದ್ದಾಳೆ, ಊರಲ್ಲಿ ರಾಕ್ಷಸರಿದ್ದಾರೆ-ಗನ್‌ಗೆ ಅರ್ಜಿ ಹಾಕಿ: ನಟ ದರ್ಶನ್ ಅಭಿಮಾನಿಗಳ ಪೋಸ್ಟರ್ ಭಾರೀ ವೈರಲ್
Darshan Thoogudeepa: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ & ಗ್ಯಾಂಗ್ ಜೈಲು ಸೇರಿದ್ದಾರೆ. ಕೆಲ ಅಭಿಮಾನಿಗಳು ತಮ್ಮ ನೆಚ್ಚಿನ ನಟ ಯಾವಾಗ ಹೊರಬರುತ್ತಾರೆಯೋ ಎಂದು ಕಾಯುತ್ತಿದ್ದರೆ, ಇನ್ನು ಕೆಲವರು ವಿಚಿತ್ರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಅಂಧಾಭಿಮಾನ ಮೆರೆಯುತ್ತಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ನನ್ನು ಹೊರತರಲು ಪತ್ನಿ ವಿಜಯಲಕ್ಷ್ಮಿ ಹಾಗೂ ಕುಟುಂಬಸ್ಥರು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈಗಾಗಲೇ ಹಲವು ಬಾರಿ ನಟ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಇನ್ನು ಪತಿ ದರ್ಶನ್‌ಗಾಗಿ ವಿಜಯಲಕ್ಷ್ಮಿ ಅವರು ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ವ್ರತಗಳನ್ನು ಮಾಡುತ್ತಲೇ ಇದ್ದಾರೆ. ಮತ್ತೊಂದೆಡೆ ಅಭಿಮಾನಿಗಳು ಕೂಡ ವಿಶೇಷ ಪೂಜೆಗಳನ್ನು ಮಾಡಿಸುತ್ತಿದ್ದಾರೆ.

ಇದರ ನಡುವೆಯೇ ಕೆಲ ಅಂಧಾಭಿಮಾನಿಗಳು ವಿಚಿತ್ರ ಪೋಸ್ಟರ್‌ಗಳನ್ನು ಹಾಕುವ ಮೂಲಕ ಹುಚ್ಚಾಟ ಮೆರೆಯುತ್ತಿದ್ದಾರೆ. ಇದೀಗ ಬಾಳೆಹೊನ್ನೂರಿನಲ್ಲಿ ದರ್ಶನ್ ಅಭಿಮಾನಿಗಳು ಹಾಕಿರುವ ಬ್ಯಾನರ್ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ. ಹಾಗಾದರೆ ಆ ಬ್ಯಾನರ್‌ನಲ್ಲಿ ಏನು ಬರೆದಿದೆ ಎಂದು ಇಲ್ಲಿ ತಿಳಿಯಿರಿ.
ದಸರಾ ಹಬ್ಬದ ಪ್ರಯುಕ್ತ ಗಜಪಡೆ ಬಾಳೆಹೊನ್ನೂರು ಎಂಬ ಅಭಿಮಾನಿಗಳ ಬಳಗ ಬ್ಯಾನರ್ ಮಾಡಿಸಿದ್ದು, "ದಾಸನ ದಾರಿಯಲ್ಲಿ ನಮ್ಮ ನಡೆ. ಎಲ್ಲಾ ತಂದೆ-ತಾಯಂದಿರು ಸರ್ಕಾರಕ್ಕೆ ಬಂದೂಕು ಪರವಾನಗಿಗಾಗಿ ಅರ್ಜಿ ಸಲ್ಲಿಸಿ. ಮನೆಯಲ್ಲಿ ಮಗಳಿದ್ದಾಳೆ, ಊರಲ್ಲಿ ರಾಕ್ಷಸರಿದ್ದಾರೆ ಎಂದು ಬರೆಯಿರಿ," ಎಂದು ಬರೆದಿರುವ ಪೋಸ್ಟರ್‌ವೊಂದು ಭಾರೀ ವೈರಲ್ ಆಗುತ್ತಿದೆ. ಈ ಪೋಸ್ಟರ್ ಅನ್ನು 𝐀𝐧𝐚𝐧𝐝 𝐊𝐚𝐚𝐭𝐞𝐫𝐚 ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ಪೋಸ್ಟರ್ 𝐀𝐧𝐚𝐧𝐝 𝐊𝐚𝐚𝐭𝐞𝐫𝐚 ಎಂಬ ಟ್ಟಿಟರ್ ಖಾತೆಯಿಂದ ಅಕ್ಟೋಬರ್ 5ರ ರಾಂತ್ರಿ 9:11 ಗಂಟೆಗೆ ಹಂಚಿಕೊಂಡಿದ್ದಾರೆ. ಇಲ್ಲಿಯವರೆಗೆ ಇದನ್ನು 1,339 ಜನರು ವೀಕ್ಷಣೆ ಮಾಡಿದ್ದಾರೆ. ಅಲ್ಲದೆ, 73 ರೀಪೋಸ್ಟ್ ಮಾಡಿಕೊಂಡಿದ್ದಾರೆ, 179 ಲೈಕ್ಸ್ ಬಂದಿವೆ.












Click it and Unblock the Notifications