Arun Kathare: ರೀಲ್ಸ್ ಸ್ಟಾರ್ ಅರುಣ್ ಕಟಾರೆ ಬಂಧನ: ಕಾರಣ ಇಲ್ಲಿದೆ
ಬೆಂಗಳೂರು, ಜುಲೈ 01: ಸಾಮಾಜಿಕ ಜಾಲತಾಣಗಳನ್ನು ಬಳಸುವವರಿಗೆ ಅರುಣ್ ಕಟಾರೆ ಚಿರಪರಿಚಿತ. ಪಾಶ್ ಕಾರುಗಳು, ಮೈತುಂಬಾ ಚಿನ್ನ..ಕೈ ತುಂಬಾ ಹಣ..ದುಬಾರಿ ಜೀವನ..ಗನ್ ಮ್ಯಾನ್..ಬಾಡಿ ಗಾರ್ಡ್ಸ್.. ಜೊತೆಗೆ ಸುತ್ತ ಮುತ್ತ ಹುಡುಗಿಯರು. ನೋಡುಗರ ಕಣ್ಣು ಕುಕ್ಕುವಂತೆ ದುಬಾರಿ ಜೀವನ ನಡೆಸುವ ಈತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಫೇಮಸ್.
ದುಬಾರಿ ಕಾರು ಹಾಗೂ ಹುಡುಗಿಯರ ಜೊತೆ ರೀಲ್ಸ್ ಮಾಡುತ್ತಾ ಜೀವನದ ಬಗ್ಗೆ ಮಸ್ತ್ ಡೈಲಾಗ್ ಹೊಡೆಯುತ್ತಿದ್ದ ಅರುಣ್ ಕಟಾರೆಗೆ ಈಗ ರೀಲ್ಸ್‌ಯೇ ಕಂಟಕವಾಗಿದೆ. ರೀಲ್ಸ್‌ಗಾಗಿ ಮಾಡಿದ ಶೋಕಿ ಈಗ ಜೈಲುಪಾಲಾಗುವಂತೆ ಮಾಡಿದೆ. ಅರುಣ್ ಕಟಾರೆ ಬೆಂಗಳೂರಿನಲ್ಲಿ ಶೋ ಕೊಡಲು ಹೋಗಿ ಜೈಲು ಸೇರುವಂತಾಗಿದೆ.

ರೀಲ್ಸ್‌ಗಾಗಿ ಫುಲ್ ರಿಚ್ ಆಗಿ ಕಾಣಿಸಿಕೊಳ್ಳಲು ಮೈಮೇಲೆ ಕೆಜಿಗಟ್ಟಲೇ ಚಿನ್ನ ಧರಿಸಿಕೊಂಡು ಜೊತೆಗೆ ವಿತ್ ವೆಪನ್ ಬಾಡಿಗಾರ್ಡ್ ಇಟ್ಟುಕೊಂಡಿದ್ದ ಅರುಣ್ ಕಟಾರೆ, ಬಾಡಿ ಗಾರ್ಡ್ ಕೈಯಲ್ಲಿ ಎಕೆ 47 ಮಾದರಿಯ ನಕಲಿ ಗನ್ ಹಿಡಿಸಿ ರಸ್ತೆಯಲ್ಲಿ ಶೋ ಆಫ್ ಮಾಡುತ್ತಿದ್ದ. ಈತನ ಶೋನಿಂದ ಅನೇಕರಿಗೆ ಗಾಬರಿಯಾಗಿದೆ ಎನ್ನಲಾಗಿದೆ.
ಅರುಣ್ ಕಟಾರೆ ಶೋಗೆ ಬೆದರಿದ ಸಾರ್ವಜನಿಕರು ಆತಂಕದಿಂದ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದು, ಸಾರ್ವಜನಿಕರ ಮಾಹಿತಿ ಮೇರೆಗೆ ಕೊತ್ತನೂರು ಪೊಲೀಸರು ಅರುಣ್ ಕಟಾರೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ವಿಚಾರಣೆ ವೇಳೆ ಈತ ಹಿಡಿದುಕೊಂಡು ಓಡಾಡಿರುವುದು ನಕಲಿ ಗನ್ ಎನ್ನುವುದು ತಿಳಿದು ಬಂದಿದೆ.
ಆದರೆ ಸಾರ್ವಜನಿಕವಾಗಿ ನಕಲಿ ಗನ್ ಹಿಡಿದು ಏರಿಯಾದಲ್ಲಿ ಆತಂಕ ಸೃಷ್ಟಿಸಿದಕ್ಕೆ ಕೇಸ್ ದಾಖಲು ಮಾಡಿಕೊಂಡಿರುವ ಕೊತ್ತನೂರು ಪೊಲೀಸರು, ಆರ್ಮ್ಸ್ ಆಕ್ಟ್, ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಾರೆ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಲು ಹೋಗಿ ಅರುಣ್ ಕಟಾರೆ ಸಂಕಷ್ಟಕ್ಕೆ ಸಿಲುಕಿದ್ದು, ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ರೀಲ್ಸ್ ಮಾಡುವವರಿಗೆ ತಕ್ಕ ಪಾಠದಂತಾಗಿದೆ.












Click it and Unblock the Notifications