ಯುಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್, ಬಿಗ್‌ಬಾಸ್‌ನಲ್ಲಿ ಮಿಂಚ್ತಾರಾ ಸರಿಗಮಪ ಸಿಂಗರ್?
Bigg Boss offer BBK 12: ಬಿಗ್‌ಬಾಸ್ ಕನ್ನಡ ಸೀಸನ್ 12 ಇದೇ ಸೆಪ್ಟೆಂಬರ್ 28ರಿಂದ ಶುರುವಾಗಲಿದೆ. ಈ ಅದ್ಧೂರಿ ವೇದಿಕೆಯಲ್ಲಿ ಯಾರೆಲ್ಲ ಸ್ಪರ್ಧಿಗಳು ಇರ್ತಾರೆ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿದೆ. ಸೋಷಿಯಲ್ ಮೀಡಿಯಾದಲ್ಲಿ ಹಲವರ ಹೆಸರುಗಳು ಹರಿದಾಡುತ್ತಿದೆ. ಈ ಸೀಸನ್‌ನ ಸ್ಪರ್ಧಿಗಳು ಇವರೇ ಎಂಬ ಸಂಭಾವ್ಯರ ಪಟ್ಟಿಯೊಂದ ವೈರಲ್ ಆಗಿದೆ. ಈ ಪೈಕಿ ಯುಟ್ಯೂಬ್‌ನಲ್ಲಿ ಮಿಲಿಯನ್‌ಗಟ್ಟಲೆ ಫಾಲೋವರ್ಸ್ ಹೊಂದಿರುವ "ಸರಿಗಮಪ" ಖ್ಯಾತಿಯ ಜಾನಪದ ಗಾಯಕ ಬಾಳು ಬೆಳಗುಂದಿ ಅವರ ಹೆಸರು ಕೂಡ ಇದೆ. ಹಲವು ದಿನಗಳಿಂದ ಇವರ ಹೆಸರು ಚರ್ಚೆಯಲ್ಲಿದೆ. ಬಿಗ್‌ಬಾಸ್‌ಗೆ ಹೋಗೋದು ಪಕ್ಕಾನಾ? ಈಗಾಗಲೇ ಆಫರ್ ಬಂದಿರೋದು ನಿಜಾನಾ? ಎಂಬ ಪ್ರಶ್ನೆಗಳಿಗೆ ಬಾಳು ಬೆಳಗುಂದಿ ಅವರೇ ಉತ್ತರ ನೀಡಿದ್ದಾರೆ.
ನಟ ಕಿಚ್ಚ ಸುದೀಪ್ ಅವರೇ ಈ ಬಿಗ್‌ಬಾಸ್ ಸೀಸನ್ ಹೋಸ್ಟ್ ಮಾಡುವುದು ಪಕ್ಕಾ ಆಗಿದೆ. ಕಲರ್ಸ್ ವಾಹಿನಿ ಈಗಾಗಲೇ ಎರಡು ಪ್ರೋಮೋಗಳನ್ನೂ ಹಂಚಿಕೊಂಡಿದೆ. ಒಂದರಲ್ಲಿ ಯಾವೆಲ್ಲ ಕ್ಷೇತ್ರದ ಸ್ಪರ್ಧಿಗಳಿರ್ತಾರೆ ಎಂದು ಸುದೀಪ್ ಸುಳಿವು ನೀಡಿದ್ದರೆ, ಮತ್ತೊಂದು ಪ್ರೋಮೋದಲ್ಲಿ ನರಿ-ಕಾಗೆ ಕಥೆ ಹೇಳುವ ಮೂಲಕ ಕುತೂಹಲ ಹೆಚ್ಚಿಸಿದ್ದಾರೆ. ಈ ಬಿಗ್‌ಬಾಸ್ ಬಗ್ಗೆ ನಿಮಗೆಲ್ಲಾ ಗೊತ್ತು ಅನ್ಕೊಂಡ್ರೆ ಅದು ಭ್ರಮೆ ಎಂದು ಕಿಚ್ಚ ಪ್ರೇಕ್ಷಕರ ಕಾಲೆಳೆದಿದ್ದಾರೆ. ಆದರೆ ಈ ಸೀಸನ್‌ನ ಸ್ಪರ್ಧಿಗಳ ಹೆಸರು ಕೂಡ ಲೀಕ್ ಆಗಿದೆ ಎನ್ನಲಾದ ಪಟ್ಟಿಯೊಂದು ಹರಿದಾಡುತ್ತಿದೆ.

ಇದೆಲ್ಲ ಅಂತೆ ಕಂತೆಗಳ ನಡುವೆ ಬಾಳು ಬೆಳಗುಂದಿ ಅವರ ಹೆಸರಂತೂ ಭಾರೀ ಚರ್ಚೆಯಲ್ಲಿದೆ. ಈ ಬಗ್ಗೆ ಬಾಳು ಅವರೇ ಕ್ಲಾರಿಟಿ ಕೊಟ್ಟಿದ್ದಾರೆ. 'ಬಿಗ್‌ಬಾಸ್ ಅನ್ನೋದು ಒಂದು ದೊಡ್ಡ ಕಾರ್ಯಕ್ರಮ. ನನಗೆ ಅದರ ಬಗ್ಗೆ ತುಂಬಾ ಗೌರವ ಇದೆ. ಆದರೆ ಯಾವಾಗ ಏನು ಆಗುತ್ತದೆಯೋ ಗೊತ್ತಿಲ್ಲ. ಸದ್ಯಕ್ಕೆ ನನ್ನ ಕೆಲಸಗಳಲ್ಲಿ ನಾನು ಬ್ಯುಸಿಯಾಗಿದ್ದೀನಿ. ಬಿಗ್‌ಬಾಸ್‌ಗೆ ಹೋಗುವ ಬಗ್ಗೆ ಏನು ಹೇಳಬೇಕು ಅನ್ನೋದು ನನಗೆ ಗೊತ್ತಿಲ್ಲ' ಎಂದಿದ್ದಾರೆ.
'ಕಳೆದ ಸೀಸನ್‌ಗೇ ಕರೆದಿದ್ರು'
'ಇಲ್ಲಿವರೆಗೆ ಇದರ ಬಗ್ಗೆ ಏನನ್ನೂ ಹೇಳಲಾರೆ. ದೇವರು ಆ ಅವಕಾಶ ಕೊಟ್ಟಾಗ ನೋಡೋಣ. ಈ ವರ್ಷ ನನಗೆ ಆಫರ್ ಬಂದಿತ್ತು. ಆದರೆ ನನಗೆ ಹೆಚ್ಚಿನ ಕೆಲಸಗಳು ಇರುವುದರಿಂದ ಅದನ್ನ ಮುಂದೂಡಿದ್ದೇನೆ. ಕಳೆದ ವರ್ಷ ಸರಿಗಮಪ ಕಾರ್ಯಕ್ರಮಕ್ಕೆ ಬರೋ ಮುನ್ನವೇ ಆಫರ್ ಒಂದು ಸಲ ಬಂದಿತ್ತು. ಅದನ್ನ ನಾನು ಮಿಸ್ ಮಾಡಿಕೊಂಡೆ. ನಾನು ಹೋಗಲಿಲ್ಲ ಎಂದು ನಮ್ಮ ಹನುಮಂತಣ್ಣ ಅವರಿಗೆ ಅವಕಾಶ ಕೊಟ್ಟಿದ್ರು. ಅವರು ನಮ್ಮ ಹಾವೇರಿಯವರು. ಶೋ ವಿನ್ ಆಗಿದ್ದು ತುಂಬಾ ಖುಷಿ ಆಯ್ತು' ಎಂದಿದ್ದಾರೆ.
'ಈಗ ನನ್ನ ಕೆಲಸಗಳು ತುಂಬಾ ಇವೆ. ನನ್ನದೇ ಯುಟ್ಯೂಬ್ ಚಾನಲ್ ಕೂಡ ಇದೆ, ಒಂದು ಟೀಂ ಕೆಲಸ ಮಾಡುತ್ತೆ. ಎಲ್ಲರಿಗೂ ಸಮನಾಗಿ ನವೂ ಕೆಲಸಗಳನ್ನ ಮಾಡಬೇಕಿದೆ. ಬಿಗ್‌ಬಾಸ್ ಒಂದು ದೊಡ್ಡ ವೇದಿಕೆ. ಆದರೆ ನನ್ನದೇ ಆದ ಒಂದು ಕುಟುಂಬ ಹಾಗೂ ತಂಡ ಇದೆ. ಇದೆಲ್ಲವನ್ನ ಬಿಟ್ಟು, ನಾನು ಬಿಗ್‌ಬಾಸ್‌ಗೆ ಹೋಗಲು ಸಾಧ್ಯವಿಲ್ಲ' ಎಂದು ಬಾಳು ಬೆಳಗುಂದಿ ಹೇಳಿದ್ದಾರೆ.












Click it and Unblock the Notifications