ರಿಯಾಲಿಟಿ ಶೋಗಳ ಅಸಲಿ ಮುಖವಾಡ ಕಳಚಿಟ್ಟ ಗಾಯಕಿ ಅರ್ಚನಾ ಉಡುಪ
ಖ್ಯಾತ ಗಾಯಕಿ ಅರ್ಚನಾ ಉಡುಪ (Archana Udupa) ಅವರು ನಾಡಿನ ಅತ್ಯುತ್ತಮ ಗಾಯಕಿಯರಲ್ಲಿ ಪ್ರಮುಖರು. ಹಲವು ಹಾಡುಗಳಿಗೆ ತಮ್ಮ ಧ್ವನಿ ನೀಡಿದ್ದು, ಅರ್ಚನಾ ಅವರ ಕಂಠಕ್ಕೆ ಮಾರುಹೋಗದವರಿಲ್ಲ. ಇನ್ನು ಇವರು ಗಾಯನದ ಜೊತೆಗೆ ಕಿರುತೆರೆಯಲ್ಲೂ ಮಿಂಚುತ್ತಿದ್ದಾರೆ. ಧಾರಾವಾಹಿಯೊಂದರಲ್ಲಿ ವಿಲನ್ ಆಗಿಯೂ ಕಾಣಿಸಿಕೊಂಡಿರುವ ಅರ್ಚನಾ ಅವರು ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ. ಇನ್ನು ಬಹುವರ್ಷಗಳ ಕಾಲ ಅರ್ಚನಾ ಅವರು ಹಲವು ಸಂಗೀತ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಂಡಿದ್ದರು. ಆದರೆ ರಿಯಾಲಿಟಿ ಶೋಗಳ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು ಅಲ್ಲಿ ನಡೆಯುವ ಶಾಕಿಂಗ್ ಸಂಗತಿಯೊಂದನ್ನು ರಿವೀಲ್ ಮಾಡಿದ್ದಾರೆ.
'ರಿಯಾಲಿಟಿ ಶೋಗಳು ಒಂದು ದೊಡ್ಡ ವರ ಹಾಗೂ ಅವಕಾಶವೂ ಹೌದು, ದೊಡ್ಡ ಶಾಪವೂ ಹೌದು. ಈಗಿನ ಕಾಲಘಟ್ಟವನ್ನು ನಾವು ನೋಡುತ್ತಾ ಹೋದರೆ, ಅತಿಯಾದರೆ ಅಮೃತವೂ ವಿಷ ಆಗುತ್ತೆ ಅನ್ನುವ ಗಾದೆಯೇ ಸರಿ ಹೊಂದುತ್ತದೆ. ಇದು ಅರ್ಥ ಆಗುವವರಿಗೆ ಅರ್ಥವಾಗುತ್ತೆ' ಎಂದು ಅರ್ಚನಾ ಉಡುಪ ಅವರು ಸುವರ್ಣ ವಾಹಿನಿಯ ಬೆಂಗಳೂರು ಬಝ್ ಪಾಡ್‌ಕಾಸ್ಟ್‌ನಲ್ಲಿ ಮಾತನಾಡಿದ್ದಾರೆ.

ʼಪ್ರತಿಭೆಗಿಂತ ಎಮೋಷನ್‌ಗೆ ಸ್ಥಾನʼ
'ಈಗಿನ ಟ್ಯಾಲೆಂಟ್ ಹಂಟ್ ಶೋನಲ್ಲಿ ಸ್ಪರ್ಧಿಗಳ ಪ್ರತಿಭೆಗಿಂತಲೂ ಅವರ ಹಿನ್ನೆಲೆ, ಅವರಿಗೆ ಏನಾದರೂ ಹೆಚ್ಚು ಸಂಕಷ್ಟಗಳಿದ್ದರೆ ಅದನ್ನೇ ಹೆಚ್ಚಾಗಿ ಫೋಕಸ್ ಮಾಡುವುದು, ವಿಕ್ಟಿಮ್ ಕಾರ್ಡ್ ಪ್ಲೇ ಮಾಡ್ತಾರೆ. ಸ್ಪರ್ಧಿಗಳು ಅದ್ಭುತವಾಗಿ ಹಾಡುತ್ತಾರೆ. ಆದರೆ ವೋಟಿಂಗ್ ವಿಚಾರಕ್ಕೆ ಬಂದಾಗ ಅಯ್ಯೋ ಪಾಪ, ಇವರಿಗೆ ಕಷ್ಟ ಇದೆ ಅನ್ನೋ ಭಾವನೆ ಮೂಡಿಸ್ತಾರೆ. ಅಲ್ಲಿ ಟ್ಯಾಲೆಂಟ್‌ಗಿಂತ ಎಮೋಷನಲ್ ವಿಚಾರಗಳು ಮುಖ್ಯವಾಗುತ್ತವೆ' ಎಂದು ಅರ್ಚನಾ ಅವರು ಬೇಸರ ಹಂಚಿಕೊಂಡಿದ್ದಾರೆ.
'ಆರ್ಥಿಕವಾಗಿ, ದೈಹಿಕವಾಗಿ ನಿಮಗಿರುವ ಕಷ್ಟವನ್ನು ಹೆಚ್ಚಾಗಿ ಫೋಕಸ್ ಮಾಡ್ತಾರೆ. ಬಹಳಷ್ಟು ಕಡೆ ವೋಟಿಂಗ್ ಇಲ್ಲದೆ ತೀರ್ಪುಗಾರರೇ ಆಯ್ಕೆ ಮಾಡಿದರೆ ಸರಿಯಾದ ದಾರಿಯಲ್ಲಿ ಸಾಗುತ್ತದೆ. ಆದರೆ ಜನ ವೋಟ್ ಮಾಡುವಾಗ ಪ್ರತಿಯೊಬ್ಬರೂ ಒಬ್ಬೊಬ್ಬರಿಗೆ ಕನೆಕ್ಟ್ ಆಗುವ ರೀತಿ ಬೇರೆಯೇ ಇರುತ್ತೆ. ಕೆಲವರು ಪ್ರಬುದ್ಧವಾಗಿ ಚೆನ್ನಾಗಿ ಹಾಡುವವರಿಗೆ ವೋಟ್ ಮಾಡಬೇಕು ಅನ್ಕೋತಾರೆ. ಆದರೆ ಗ್ರಾಮೀಣ ಭಾಗದ ಜನರು, ಸಂಗೀತದ ಜ್ಞಾನ ಇಲ್ಲದವರು ಸ್ಪರ್ಧಿಗಳ ಕಷ್ಟಗಳನ್ನು ನೋಡಿಕೊಂಡು ವೋಟ್ ಹಾಕ್ತಾರೆ. ನಮ್ಮ ವೋಟ್‌ನಿಂದ ಅವರು ಗೆಲ್ತಾರೆ, ಅವರಿಗೆ ಸಹಾಯ ಆಗುತ್ತೆ, ವೋಟ್ ಮಾಡೋಣ' ಎಂದುಕೊಳ್ಳುತ್ತಾರೆ.

ಹಾಡುವವರನ್ನ ಡ್ಯಾನ್ಸ್ ಮಾಡಿಸ್ತಾರೆ!
'ನಾನು ಸರಿಗಮಪ ಕಾರ್ಯಕ್ರಮಕ್ಕೆ ಜಡ್ಜ್ ಆಗಿ ಹೋದಾಗ ಸ್ಪರ್ಧಿಗಳ ಆಯ್ಕೆ ಚೆನ್ನಾಗಿತ್ತು. ಪ್ರತಿಭೆಗಳ ಅನ್ವೇಷಣೆಯೂ ಚೆನ್ನಾಗಿತ್ತು. ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದು ಹೇಳಲು ನನಗೂ ಬೇಸರವಾಗುತ್ತೆ. ಈಗ ಸಂಗೀತಕ್ಕಿಂತ ಹೆಚ್ಚು ಮಾತು, ಹಾಸ್ಯ, ಡ್ಯಾನ್ಸ್‌ನ ಸೇರಿಸಿಕೊಳ್ತಾರೆ. ಹಾಡು ಹೇಳುವವರ ಕೈಯಲ್ಲಿ ಡ್ಯಾನ್ಸ್ ಮಾಡಿಸ್ತಾರೆ. ಈಗ ಸ್ಕಿಟ್ ಕೂಡ ಮಾಡಿಸ್ತಿದ್ದಾರೆ. ಇದೆಲ್ಲ ಆದಾಗ ಗಾಯಕರು ಕೂಡ ನಟನೆ, ಡ್ಯಾನ್ಸ್ ಕಡೆಗೆ ವಾಲುತ್ತಿದ್ದಾರೆ'.
'ರಿಯಾಲಿಟಿ ಶೋಗಳ ದೊಡ್ಡ ದುರಂತ ಅಂದರೆ ಒಂದು ಸೀಸನ್ ನಡೆಯುವಾಗ ಸ್ಪರ್ಧಿಗಳಿಗೆ ಫುಲ್ ಹೈಪ್ ಸಿಗುತ್ತೆ. ನೀವೇ ಇಂದ್ರ ಚಂದ್ರ ದೇವೇಂದ್ರ ಎಂದು ಅಲ್ಲಿ ಬಿಂಬಿಸುತ್ತಾರೆ. ತಲೆಮೇಲೆ ಹತ್ತಿಸಿಕೊಂಡು ಮೆರೆಸುತ್ತಾರೆ. ಆ ಸಮಯದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆಯೂ ಸಿಗುತ್ತೆ. ಆದರೆ ಅಲ್ಲಿಂದ ಆಚೆ ಬಂದ ಮೇಲೆ ಅವರಿಗೆ ನಿಜವಾದ ಸವಾಲುಗಳು ಶುರುವಾಗುತ್ತವೆ. ಮೊದಲೆಲ್ಲ ಬೆರಳೆಣಿಕೆಯಷ್ಟು ಮಂದಿ ಮಾತ್ರವೇ ಗಾಯಕರು ಇರುತ್ತಿದ್ರು, ಈಗ ಪ್ರತಿ ಎರಡು ಮನೆಗೆ ಒಬ್ಬರು ಕಲಾವಿದರು ಇದ್ದಾರೆ' ಎಂದಿದ್ದಾರೆ.
ʼನಮ್ಮನ್ನ ಬಿಟ್ರೆ ಇಲ್ಲ ಅಂತ ಮೆರೆಯುತ್ತಾರೆʼ
'ಈಗ ಸಿಕ್ಕಾಪಟ್ಟೆ ಟ್ಯಾಲೆಂಟ್ ಇದೆ. ಎಲ್ರೂ ಹಾಡ್ತಾರೆ, ಎಲ್ರೂ ನಟನೆ ಮಾಡ್ತಾರೆ. ಆದರೆ ಎಲ್ಲರಿಗೂ ಮುಂದೆ ಕೆಲಸ ಸಿಗುತ್ತಿಲ್ಲ, ವೃತ್ತಿಯಲ್ಲಿ ಮುಂದುವರಿಯಲು ಕೂಡ ಕಷ್ಟ ಇದೆ. ಅಬ್ಬಬ್ಬಾ ಅಂದ್ರೆ ಎರಡು ವರ್ಷ ಉಳಿದುಕೊಳ್ಳಬಹುದು, ಆ ಮೇಲೆ ಅವರು ಯಾರು ಅನ್ನೋದು ಜನ ಮರೆಯುತ್ತಾರೆ. ವೇದಿಕೆಗಳಲ್ಲಿ ನಮ್ಮನ್ನ ಬಿಟ್ರೆ ಇಲ್ಲ ಅಂತ ಮೆರೆದಿರುತ್ತಾರೆ. ಆಚೆ ಬಂದ ಮೇಲೆ ಅವರನ್ನ ಕೇಳೋರೇ ಇರಲ್ಲ. ಆಗ ಅವರು ಡಿಪ್ರೆಶನ್‌ಗೆ ಒಳಗಾಗುತ್ತಾರೆ' ಎಂದು ಅರ್ಚನಾ ಉಡುಪ ಕಳವಳ ವ್ಯಕ್ತಪಡಿಸಿದ್ದಾರೆ.












Click it and Unblock the Notifications