Darshan : ಮತ್ತೆ ಒಂದಾದ ಕಾಟೇರ ತಂಡ: ಸಿಂಧೂರ ಲಕ್ಷ್ಮಣನ ಪಾತ್ರದಲ್ಲಿ ದರ್ಶನ್
ಕಾಟೇರ ಯಶಸ್ಸಿನ ಖುಷಿಯಲ್ಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಹೊಸ ಸಿನಿಮಾ 'ಡೆವಿಲ್ ದಿ ಹೀರೋ' ಸಿನಿಮಾದ ಮೊದಲ ಲುಕ್ ಕೂಡ ಬಿಡುಗಡೆ ಮಾಡಲಾಗಿದೆ.
ಕಾಟೇರ ಸಿನಿಮಾದಲ್ಲಿ ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಡೆವಿಲ್ ಸಿನಿಮಾದಲ್ಲಿ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ವಿಲನ್ ಶೇಡ್ ಇರುವ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಂಡಿದ್ದು ಮತ್ತೊಂದು ಮಾಸ್ ಮಸಾಲಾ ಸಿನಿಮಾ ಅಭಿಮಾನಿಗಳಿಗೆ ಸಿದ್ಧವಾಗುತ್ತಿದೆ.

ಡೆವಿಲ್ ಬಳಿಕ ದರ್ಶನ್ ಯಾವ ಸಿನಿಮಾ ಮಾಡುತ್ತಾರೆ ಎನ್ನುವ ಕುತೂಹಲ ಇತ್ತು, ದರ್ಶನ್ ಮತ್ತೆ ಪ್ರೇಮ್ ಜೊತೆ ಸಿನಿಮಾ ಮಾಡುವುದು ಖಚಿತವಾಗಿದೆ. ಕೆವಿಎನ್ ಪ್ರೊಡಕ್ಷನ್ ಇದಕ್ಕೆ ಬಂಡವಾಳ ಹೂಡುತ್ತಿದೆ. ಇದು ದರ್ಶನ್ ಅವರ 58ನೇ ಸಿನಿಮಾವಾಗಿದೆ.
ಅದಾದ ಬಳಿಕ ದರ್ಶನ್ ಅವರ 59ನೇ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡುವುದು ಪಕ್ಕಾ ಆಗಿದೆ. ಅದೂ ಕೂಡ ಐತಿಹಾಸಿಕ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ. ಸಂಗೊಳ್ಳಿ ರಾಯಣ್ಣನ ಪಾತ್ರದಲ್ಲಿ ಮಿಂಚಿರುವ ದರ್ಶನ್, ವೀರ ಸಿಂಧೂರ ಲಕ್ಷ್ಮಣನಾಗಿ ತೆರೆಮೇಲೆ ಅಬ್ಬರಿಸುವುದು ಪಕ್ಕಾ ಆಗಿದೆ.
ರಾಬರ್ಟ್ ಬಳಿಕವೇ ಆಗಬೇಕಿದ್ದ ಸಿನಿಮಾ
ತರುಣ್ ಸುಧೀರ್ ಮತ್ತು ದರ್ಶನ್ ಕಾಂಬಿನೇಷನ್ ರಾಬರ್ಟ್ ಸಿನಿಮಾ ಯಶಸ್ಸಿನ ಬಳಿಕವೇ ಸಿಂಧೂರ ಲಕ್ಷ್ಮಣ ಸಿನಿಮಾ ಕೆಲಸ ಆರಂಭವಾಗಬೇಕಿತ್ತು. ಆದರೆ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಅವರ ಜೊತೆಗಿನ ವೈಮನಸ್ಸು ಮತ್ತು ಕೋವಿಡ್ ಕಾರಣದಿಂದ ಸಿನಿಮಾ ಬರಿ ಘೋಷಣೆಗಷ್ಟೇ ಸೀಮಿತವಾಗಿತ್ತು.
ಆದರೆ ಈಗ ಸಿಂಧೂರ ಲಕ್ಷ್ಮಣ ತೆರೆಗೆ ಬರುವುದು ಖಚಿತವಾಗಿದೆ. ಡೆವಿಲ್ ಸಿನಿಮಾ ಬಳಿಕ ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದು, ಅದಾದ ಬಳಿಕ ಸಿಂಧೂರ ಲಕ್ಷ್ಮಣನ ಪಾತ್ರಕ್ಕೆ ದರ್ಶನ್ ಬಣ್ಣ ಹಚ್ಚಲಿದ್ದಾರೆ.
ಮೀಡಿಯಾ ಹೌಸ್ ಸ್ಟುಡಿಯೋ ಅಡಿಯಲ್ಲಿ ಶೈಲಜಾ ನಾಗ್ ಮತ್ತು ಬಿ. ಸುರೇಶ ಈ ಸಿನಿಮಾಗೆ ಬಂಡವಾಳ ಹಾಕಲಿದ್ದಾರೆ. ವಿ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಲಿದ್ದಾರೆ. ತರುಣ್ ಸುಧೀರ್ ಸಿನಿಮಾದ ಕೆಲಸ ಆರಂಭಿಸಲಿದ್ದಾರೆ.
ಆದರೆ ಅಭಿಮಾನಿಗಳು ದರ್ಶನ್‌ರನ್ನು ಸಿಂಧೂರ ಲಕ್ಷ್ಮಣನಾಗಿ ನೋಡಲು ಇನ್ನೂ ಎರಡು ವರ್ಷ ಕಾಯಬೇಕಾಗುತ್ತದೆ. ಡೆವಿಲ್ ಸಿನಿಮಾ ಚಿತ್ರೀಕರಣ ಇನ್ನೂ ಆರಂಭವಾಗಬೇಕಿದ್ದು, ಅದಾದ ಬಳಿಕ ಪ್ರೇಮ್ ಅವರ ಇನ್ನೂ ಹೆಸರಿಡದ ಸಿನಿಮಾ ಕೆಲಸ ಶುರುವಾಗಲಿದೆ. ಐತಿಹಾಸಿಕ ಸಿನಿಮಾ ಆಗಿರುವ ಕಾರಣ ಸಿಂಧೂರ ಲಕ್ಷ್ಮಣ ಚಿತ್ರದ ತಯಾರಿಗೆ ಹೆಚ್ಚಿನ ದಿನಗಳು ಬೇಕಾಗಲಿದ್ದು 2025ರ ಅಂತ್ಯಕ್ಕೆ ಅಥವಾ 2026ರಲ್ಲಿ ಸಿನಿಮಾ ಬಿಡುಗಡೆಯಾಗುವ ಸಾಧ್ಯತೆ ಇದೆ.












Click it and Unblock the Notifications