Rachita Ram: ಬಿಕ್ಲು ಶಿವ ಹತ್ಯೆ ಕೇಸ್ ಆರೋಪಿ ಜಗ್ಗನಿಂದ ರಚ್ಚುಗೆ ಭರ್ಜರಿ ಗಿಫ್ಟ್: ಫೋಟೋ ವೈರಲ್
ಬೆಂಗಳೂರು, ಜುಲೈ 22: ಹೊಸ ಸಿನಿಮಾವೊಂದ ಪ್ರಚಾರಕ್ಕೆ ಹೋಗಿಲ್ಲ ಎಂಬ ಆರೋಪ ಎದುರಿಸಿದ್ದ ನಟಿ ರಚಿತಾ ರಾಮ್ ಬೇರೆ ಬೇರೆ ಸಿನಿಮಾ ಹಾಗೂ ಇತರ ಕೆಲಸಗಳಲ್ಲಿ ಬ್ಯೂಸಿ ಇದ್ದಾರೆ. ಇದೀಗ ಅವರು ಕೊಲೆ ಆರೋಪಿ ರೌಡಿ ಜಗ್ಗನಿಂದ ಸೀರೆ ಹಾಗೂ ಚಿನ್ನಾಭರಣ ಉಡುಗೊರೆ ಪಡೆದಿರುವುದು ಬೆಳಕಿಗೆ ಬಂದಿದೆ. ಕೊಲೆ ಪ್ರಕರಣ ತನಿಖೆ ಚುರುಕುಗೊಳಿಸಿದ ಪೊಲೀಸರಿಗೆ ಆರೋಪಿ ಜಗ್ಗನಿಗೂ ಸಿನಿಮಾ ರಂಗಕ್ಕೂ ನಂಟಿರುವುದು ವೈರಲ್ ಆಗುತ್ತಿರುವ ಫೋಟೋದಿಂದ ಗೊತ್ತಾಗಿದೆ. ಏನಿದು ಪ್ರಕರಣ?
ಬೆಂಗಳೂರಿನಲ್ಲಿ ಈ ಹಿಂದೆ ನಡೆದಿದ್ದ ಭಾರತಿನಗರ ರೌಡಿ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ ಜಗದೀಶ್ ಅಲಿಯಾಸ್ ಜಗ್ಗನಿಗೆ ಸಿನಿಮಾ ರಂಗದವರ ಜೊತೆಗೆ ಒಡನಾಟವಿತ್ತು ಎಂಬ ಮಾಹಿತಿ ಪೊಲೀಸ್ ತನಿಖೆಯಿಂದ ಬೆಳಕಿಗೆ ಬಂದಿದೆ. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಒಂದೊಂದಾಗೆ ಮಾಹಿತಿ ಸಿಕ್ಕಿದೆ. ಅದರಲ್ಲಿ ರಚಿತಾ ರಾಮ್ ಶೂಟಿಂಗ್ ವೇಳೆ ಇದೇ ಆರೋಪಿ ಭರ್ಜರಿ ಗಿಫ್ಟ್ ನೀಡಿದ್ದಾನೆ. ಈ ವೇಳೆ ನಟ ರವಿಚಂದ್ರನ್ ಅವರು ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.

ರವಿ ಬೋಪಣ್ಣ ಸಿನಿಮಾ ಶೂಟಿಂಗ್ ವೇಳೆ ತೆರಳಿದ್ದ ಆರೋಪಿ ಜಗ್ಗ ಡಿಂಪಲ್ ಕ್ವೀನ್ ರಚಿತಾ ರಾಮ್‌ಗೆ ಕಾಸ್ಲಿ ಉಡುಗೊರೆ ನೀಡಿದ್ದ ಫೋಟೋ ವೈರಲ್ ಆಗಿದೆ. ರೆಷ್ಮೆ ಸೀರೆ, ಚಿನ್ನಾಭರಣ ಗಿಫ್ಟ್ ನೀಡಿದ್ದಾನೆ. ಅದರಲ್ಲಿ ಚಿನ್ನದ ನಕ್ಲೇಸ್ ಗಿಫ್ಟ್ ಅನ್ನು ತೋರಿಸುತ್ತಲೇ ನಟಿ ರಚಿತಾರಾಮ್ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಸಂತೋಷದಿಂದಲೇ ಗಿಫ್ಟ್ ಸ್ವೀಕರಿಸಿ ಕೈ ಕುಲುಕಿದ್ದ ಕಾಣಿಸುತ್ತದೆ. ಈ ಮೂಲಕ ಸಿನಿರಂಗದವರ ಜೊತೆಗೆ ಆರೋಪಿಗೆ ನಂಟಿರುವುದು ಪೊಲೀಸರಿಗೆ ಖಚಿತವಾಗಿದೆ. ಆ ಆಯಾಮದಲ್ಲೂ ಬಿಕ್ಲು ಶಿವನ ಹತ್ಯೆ ಪ್ರಕರಣ ತನಿಖೆ ಮುಂದುವರಿಸಿದ್ದಾರೆ.
ನಟಿ ವಿಚಾರಣೆ ಸಾಧ್ಯತೆ, ಎದುರಾಯ್ತಾ ಸಂಕಷ್ಟ?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬೈರತಿ ಬಸವರಾಜ ಅವರು ಸೇರಿ ಐವರ ಮೇಲೆ FIR ಹಾಕಲಾಗಿತ್ತು. ಬೈರತಿ ಬಸವರಾಜ ಅವರನ್ನು ವಿಚಾರಣೆ ನಡೆಸಿದ್ದರು. ಮುಂದೆ ಕರೆದಾಗ ಬರುವಂತೆ ಮತ್ತೆ ಹೇಳಿ ಕಳುಹಿಸಿದ್ದಾರೆ. ಇದೀಗ ಸಿನಿಮಾ ನಟ-ನಟಿಯರೊಂದಿಗೆ ನಂಟು ಗೊತ್ತಾಗುತ್ತಿದ್ದಂತೆ, ಮುಂದಿನ ದಿನಗಳಲ್ಲಿ ನಟಿ ರಚಿತಾರಾಮ್ ಅವರನ್ನು ಕರೆಸಿ ವಿಚಾರಣೆ ನಡೆಸಿದರೂ ಅಚ್ಚರಿಪಡಬೇಕಿಲ್ಲ. ಏಕೆಂದರೆ ಅಂದು ಶೂಟಿಂಗ್ ವೇಳೆ ಆರೋಪಿ ಸಿಕ್ಕಿದ್ದು ಹೇಗೆ? ಗಿಫ್ಟ್ ಪಡೆದಿದ್ದು ಏಕೆ? ಕಾರಣವೇನು?, ಇಬ್ಬರ ಮಧ್ಯದ ಮಾತುಗಳ ಕುರಿತು ಪೊಲೀಸರು ಪ್ರಶ್ನಿಸಬಹುದು. ಇದರಿಂದ ನಟಿ ರಚಿತಾರಾಮ್‌ಗೂ ಸಂಕಷ್ಟ ಎದುರಾಗುತ್ತದೆ ಎಂದು ಹೇಳಲಾಗುತ್ತಿದೆ.

ಹತ್ಯೆ ಪ್ರಕರಣದ ಹಿನ್ನೆಲೆ
ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವನನ್ನು ಜುಲೈ 15ರಂದು ಹತ್ಯೆ ಮಾಡಲಾಗಿತ್ತು. ಕೆಲವರ ಮೇಲೆ ಎಫ್‌ಐಆರ್ ಹಾಕಿದ್ದರು. ಪ್ರಕರಣ ಸಂಬಂಧಿಸಿದಂತೆ ಎಒನ್ ಆರೋಪಿ ಜಗ್ಗ ಜೊತೆಗೆ ನವೀನ್, ಅನಿಲ್ ಮತ್ತು ಅರುಣ್ ಮೂವರು ಆರೋಪಿಗಳನ್ನು ಭಾರತಿನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ತೀವ್ರ ವಿಚಾರಣೆ ಮುಂದುವರಿದಿದೆ.












Click it and Unblock the Notifications