Shiva Rajkumar: ಶಿವಣ್ಣಗೆ ಆಪರೇಷನ್ ಆಗಿ ಎರಡೇ ದಿನಕ್ಕೆ ನಡೆಯಿತು ಪವಾಡ- ಗೀತಕ್ಕ ಹೇಳಿದ್ದೇನು?
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೆ ಅಮೆರಿಕಾದಲ್ಲಿ ಶಸ್ತ್ರಚಿಕಿತ್ಸೆ ಪೂರ್ಣಗೊಂಡಿದ್ದು ಬೆಂಗಳೂರಿಗೆ ವಾಪಾಸ್ ಆಗಿದ್ದಾರೆ. ಮೊದಲಿಗಿಂತ ಶಿವಣ್ಣ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಅಲ್ಲದೆ ಇನ್ನೂ ಒಂದು ತಿಂಗಳ ವಿಶ್ರಾಂತಿ ಬಳಿಕ ಸಿನಿಮಾ ಶೂಟಿಂಗ್ ಮಾಡುವುದಾಗಿ ಶಿವಣ್ಣ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಿವಣ್ಣ ಅವರು, 'ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಅಮೆರಿಕಾದಲ್ಲಿ ಕರ್ನಾಟಕದ ಕನ್ನಡಿಗ ವೈದ್ಯರು ನನಗೆ ಶಸ್ತ್ರಚಿಕಿತ್ಸೆ ಮಾಡಿದರು. ಆ ದೇವರ ಆಶೀರ್ವಾದ, ಅಭಿಮಾನಿಗಳ ಆಶೀರ್ವಾದ ಹಾಗೂ ಕುಟುಂಬಸ್ಥರ ಸ್ನೇಹಿತರ, ಇಂಡಸ್ಟ್ರಿಯವರ ಪ್ರೀತಿಯಿಂದ ನಾನು ಇಂದು ನಿಮ್ಮ ಮುಂದೆ ಬಂದು ಕುಳಿತಿದ್ದೇನೆ. ಅಭಿಮಾನಿ ದೇವರುಗಳು ನನ್ನ ಶಸ್ತ್ರ ಚಿಕಿತ್ಸೆ ದಿನ ಪೂಜೆ ಸಲ್ಲಿಸಿದ್ದರು. ಆ ಪೂಜಾ ಫಲದಿಂದ ನನ್ನ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ' ಎಂದು ಶಿವಣ್ಣ ಹೇಳಿದ್ದಾರೆ.

'ನನಗೆ ಎನರ್ಜಿ ಎಲ್ಲಿಂದ ಬಂತೋ ಗೊತ್ತಿಲ್ಲ. ಸರ್ಜರಿ ಆಗಿ ಎರಡೇ ದಿನಕ್ಕೆ ನಾನು ವಾಕ್ ಮಾಡಲು ಶುರು ಮಾಡಿದೆ. ಅಭಿಮಾನಿಗಳು ಮಾತ್ರವಲ್ಲ ಇಂಡಸ್ಟ್ರಿ ಅವರು ನನಗೆ ತುಂಬಾ ಧೈರ್ಯ ತುಂಬಿದರು. ಗೀತಾ ಬಗ್ಗೆ ನಾನು ಮಾತನಾಡಲ್ಲ. ಅವಳು ನನಗೆ ಹೆಂಡತಿನೂ ಹೌದು, ತಾಯಿನೂ ಹೌಡ. ಈ ಬಾರಿ ಮಗಳು ನಿವೇದಿತಾ ತಾಯಿಗಿಂತ ಹೆಚ್ಚು ನನ್ನನ್ನು ನೋಡಿಕೊಂಡಿದ್ದಾಳೆ. ನಿವೇದಿತಾ ಗೆಳತಿ ಕೂಡ ಒಂದು ತಿಂಗಳು ನಮ್ಮ ಜೊತೆಗೆ ಇದ್ದರು' ಎಂದು ಶಿವಣ್ಣ ಹೇಳಿದ್ದಾರೆ.
ಇದೇ ವೇಳೆ ಪತ್ನಿ ಗೀತಾ ಮಾತನಾಡಿ, 'ಅವರ ಆರೋಗ್ಯದ ಬಗ್ಗೆ ಹೇಳಿಕೊಳ್ಳಲು ಎಲ್ಲಿಯೂ ಕೂಡ ಹಿಂಜರಿಯಲಿಲ್ಲ. ಶಸ್ತ್ರಚಿಕಿತ್ಸೆಗೂ ಹೆದರಲಿಲ್ಲ. ಅವರಿಗೆ ಶಸ್ತ್ರಚಿಕಿತ್ಸೆ ಆಗಿ ಎರಡನೇ ದಿನವೇ ನಡೆದಾಡಿದ್ದಾರೆ. ಇದು ನಿಜಕ್ಕೂ ಪವಾಡ. ಅಭಿಮಾನಿಗಳ ಆಶೀರ್ವಾದಿಂದ ಅವರು ಬಹುಬೇಗ ಚೇತರಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ನೀವು. ನಿಮ್ಮ ಪೂಜಾ ಫಲ, ಆಶೀರ್ವಾದ ಅವರ ಮೇಲೆ ಇರುವುದರಿಂದ ಅವರು ಬೇಗ ಹುಷಾರಾಗಿದ್ದಾರೆ' ಎಂದರು.
ಇನ್ನೂ ಶಿವಣ್ಣ ಬೆಂಗಳೂರಿಗೆ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಬಂದು ಇಳಿಯುತ್ತಿದ್ದಂತೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ವಿಮಾನ ನಿಲ್ದಾಣದ ಬಳಿ ಹೈ ಅಲರ್ಟ್ ಘೋಷಣೆ ಮಾಡಲಾಗಿತ್ತು. ಹೀಗಾಗಿ ವಿಮಾನ ನಿಲ್ದಾಣದ ಬಳಿ ಯಾವುದೇ ಆಚರಣೆ ಹಾಗೂ ಸ್ವಾಗತಕ್ಕೆ ಅವಕಾಶ ನೀಡಿರಲಿಲ್ಲ. ಆದ್ದರಿಂದ ಅಭಿಮಾನಿಗಳು ಸಾದಹಳ್ಳಿ ಟೋಲ್ ಬಳಿ ಅದ್ಧೂರಿ ಸ್ವಾಗತ ಮಾಡಿದ್ದಾರೆ.
ಮೂತ್ರ ಕೋಶದ ಕ್ಯಾನ್ಸರ್ ಸಂಬಂಧ ಶಿವರಾಜಕುಮಾರ್ ಡಿಸೆಂಬರ್ 18ರಂದು ಬೆಂಗಳೂರಿನಿಂದ ಅಮೆರಿಕಾಕ್ಕೆ ಪ್ರಯಾಣ ಮಾಡಿದ್ದರು. ಡಿಸೆಂಬರ್ 24ರಂದು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಶಿವಣ್ಣ ಅವರಿಗೆ ಆರು ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಇದಾಗಿ ಕೇವಲ ಎರಡೇ ದಿನದಲ್ಲಿ ಪವಾಡ ಎಂಬಂತೆ ಶಿವಣ್ಣ ಎದ್ದು ಓಡಾಡಿದ್ದಾರೆ.
ಪ್ರಸ್ತುತ ಅವರು ಚೇತರಿಸಿಕೊಂಡು ಬೆಂಗಳೂರಿಗೆ ಬಂದಿದ್ದು ಅವರ ಅಭಿಮಾನಿಗಳು ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಸ್ಯಾಂಡಲ್‌ವುಡ್ ನ ನೆಚ್ಚಿನ ಹಾಗೂ ಹೈ ಎನರ್ಜಿಟಿಕ್ ನಟನಾಗಿ ಗುರುತಿಸಿಕೊಂಡಿರುವ ಶಿವರಾಜ್‌ಕುಮಾರ್ ಸ್ವಾಗತಕ್ಕೆ ಅಭಿಮಾನಿಗಳು ಕೇಕ್ ಕತ್ತರಿಸಿ ಶಿಳ್ಳೆ ಹೊಡೆದು ಘೋಷಣೆಗಳನ್ನು ಕೂಗಿ ಸಂಭ್ರಮಿಸಿದ್ದಾರೆ.












Click it and Unblock the Notifications