Shah Rukh Khan & Yash: ಗೆಳೆಯ ಯಶ್‌ಗೆ ವಿಶೇಷ ಮನವಿ ಮಾಡಿದ ಶಾರುಖ್ ಖಾನ್
ಬಾಲಿವುಡ್ ನಟ ಶಾರುಖ್ ಖಾನ್ ಕೆಜಿಎಫ್ ನಟ ಯಶ್ ಸೇರಿದಂತೆ ದಕ್ಷಿಣ ಭಾರತದ ಹಲವು ನಟರನ್ನು ನನ್ನ ಸ್ನೇಹಿತರು ಎಂದು ಕರೆದಿದ್ದಾರೆ. ಜೊತೆಗೆ ದಕ್ಷಿಣ ಭಾರತದ ಹೀರೋಗಳಿಗೆ ವಿಶೇಷವಾದ ಮನವಿಯೊಂದನ್ನು ಮಾಟಿದ್ದಾರೆ. ಅವರ ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.
ಭಾನುವಾರ ಯುನೈಟೆಡ್ ಅರಬ್ ಎಮಿರೇಟ್ಸ್ ನ ದುಬೈನಲ್ಲಿರುವ ಗ್ಲೋಬಲ್ ವಿಲೇಜ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. ಅವರ ವಿಡಿಯೋ ಮತ್ತು ಫೋಟೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಒಂದು ವಿಡಿಯೋದಲ್ಲಿ ಅವರು ದಕ್ಷಿಣ ಭಾರತದ ನಟರನ್ನು ನನ್ನ ಸ್ನೇಹಿತರು ಎಂದು ಕರೆದಿದ್ದಾರೆ.

ಶಾರುಖ್ ಖಾನ್ ಅವರ ಅಭಿಮಾನಿಯೊಬ್ಬರು ಹಂಚಿಕೊಂಡಿರುವ ವಿಡಿಯೋದಲ್ಲಿ ಜನ ಶಾರುಖ್ ಖಾನ್ ಅವರನ್ನು ಡ್ಯಾನ್ಸ್ ಮಾಡಲು ಹುರಿದುಂಬಿಸುವಾಗ ಮಾತನಾಡಿದ ಅವರು, ಕರ್ನಾಟಕ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಜನರನ್ನು ಉದ್ದೇಶಿಸಿ, ನನಗೆ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹಲವು ಸ್ನೇಹಿತರಿದ್ದಾರೆ. ಯಶ್, ಪ್ರಭಾಸ್, ಅಲ್ಲು ಅರ್ಜುನ್, ರಾಮ್ ಚರಣ್, ಮಹೇಶ್ ಬಾಬು, ವಿಜಯ್ ದಳಪತಿ, ರಜಿನಿ ಕಾಂತ್ ಸರ್, ಕಮಲ್ ಹಾಸನ್ ಸರ್ ನನ್ನ ಸ್ನೇಹಿತರಾಗಿದ್ದಾರೆ. ಅವರಿಗೆ ನನ್ನದೊಂದು ಮನವಿ ಇದೆ, ಅವರು ಇಷ್ಟು ವೇಗವಾಗಿ ಡ್ಯಾನ್ಸ್ ಮಾಡುವುದನ್ನು ನಿಲ್ಲಿಸಬೇಕು, ಅವರಂತೆ ವೇಗವಾಗಿ ಡ್ಯಾನ್ಸ್ ಮಾಡುವುದು ನನಗೆ ಕಷ್ಟ ಎಂದು ಮನವಿ ಮಾಡಿದರು. ದಕ್ಷಿಣ ಭಾರತದ ನಟರನ್ನು ನನ್ನ ಸ್ನೇಹಿತರು ಎಂದಿದ್ದಕ್ಕೆ ಹಲವು ನಟರ ಅಭಿಮಾನಿಗಳು ಖುಷಿಯಾಗಿದ್ದಾರೆ.
ಪಠಾಣ್, ಜವಾನ್ ಸಿನಮಾದ ಭರ್ಜರಿ ಯಶಸ್ಸಿನ ಬಳಿಕ ಹೊಸ ಚಿತ್ರಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ. ಪಠಾಣ್ ಸಿನಿಮಾ ನಿರ್ದೇಶಕ ಸಿದ್ಧಾರ್ಥ್ ಆನಂದ್ ಜೊತೆ ಮುಂದಿನ ಸಿನಿಮಾಗೆ ಕೈಜೋಡಿಸಿದ್ದಾರೆ. ಇದಕ್ಕೆ ಕಿಂಗ್ ಎಂದು ಹೆಸರಿಡಲಾಗಿದೆ.
ನಾನು ಇಲ್ಲಿ ಚಿತ್ರೀಕರಣ ಮಾಡಲು ಬಂದಿಲ್ಲ, ಒಂದೆರಡು ತಿಂಗಳ ಬಳಿಕ ಮುಂಬೈನಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಸಿನಿಮಾದ ಬಗ್ಗೆ ಯಾವುದೇ ವಿಚಾರವನ್ನು ಬಹಿರಂಗಪಡಿಸಬಾರದು ಎಂದು ನಿರ್ದೇಶಕ ಸಿದ್ಧಾರ್ಥ್ ಆನಂದ್ ಕಟ್ಟುನಿಟ್ಟಾಗಿ ಸೂಚನೆ ಕೊಟ್ಟಿದ್ದಾರೆ. ಆದ್ದರಿಂದ ಸಿನಿಮಾದ ಬಗ್ಗೆ ನಾನು ಏನೂ ಹೇಳಲಾರೆ, ಆದರೆ ಅದು ನಿಮಗೆ ಉತ್ತಮ ಮನರಂಜನೆ ನೀಡುತ್ತೆ ಎಂದು ಭರವಸೆ ನೀಡುತ್ತೇನೆ ಎಂದು ಹೇಳಿದರು.
ಶಾರುಖ್ ಖಾನ್ ಅವರ ಮಗಳು ಸುಹಾನಾ ಖಾನ್ ಮತ್ತು ಅಭಿಷೇಕ್ ಬಚ್ಚನ್ ಕೂಡ ಸಿನಿಮಾದಲ್ಲಿ ಮುಖ್ಯ ಪಾತ್ರಗಳನ್ನು ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications