ಶಾರುಖ್ ಖಾನ್ ಈಸ್ ಬ್ಯಾಕ್! ಗಲ್ಲಾಪೆಟ್ಟಿಗೆ ಅಖಾಡದಲ್ಲಿ ಹೊಸ ದಾಖಲೆ ಬರೆದ ‘ಡಂಕಿ’
ನಟ ಶಾರುಖ್ ಖಾನ್ ತಮ್ಮ ಹಳೇ ಖದರ್ ತೋರಿಸಿದ್ದಾರೆ. 2023ರಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ, ಈ ವರ್ಷಕ್ಕೆ ಗುಡ್‌ಬೈ ಹೇಳಲು ಸಜ್ಜಾಗಿದ್ದಾರೆ ಬಾಲಿವುಡ್ ಬಾದ್ ಷಾ ಶಾರುಖ್. ಇದೇ ಸಮಯದಲ್ಲಿ ಸಿಹಿಸುದ್ದಿ ಒಂದು ಸಿಕ್ಕಿದ್ದು 'ಡಂಕಿ' ಜಗತ್ತಿನಾದ್ಯಂತ ಬಾಕ್ಸ್ ಆಫಿಸ್ ಅಖಾಡದಲ್ಲಿ ಭರ್ಜರಿ ಗಳಿಕೆ ಮಾಡಿದೆ. ಹಾಗಾದ್ರೆ ಕಿಂಗ್ ಖಾನ್ ಸಿನಿಮಾ, ಈಗ ಗಳಿಸಿರೋದು ಎಷ್ಟು ನೂರು ಕೋಟಿ?
ಶಾರುಖ್ ಖಾನ್ ಏನೇ ಮಾಡಿದ್ರು ಸೂಪರ್ ಅಂತಾರೆ ಅವರ ಫ್ಯಾನ್ಸ್. ಶಾರುಖ್‌ಗೆ ಭಾರತದಲ್ಲಿ ಮಾತ್ರವಲ್ಲ ಅಮೆರಿಕ & ಯುರೋಪ್ ಸೇರಿ ಜಗತ್ತಿನ ಮೂಲೆ ಮೂಲೆಯಲ್ಲಿ ಕೂಡ ಅಭಿಮಾನಿ ಬಳಗವಿದೆ. ಇಂತಿಪ್ಪ ಶಾರುಖ್ ಖಾನ್ ಅವ್ರು ಡಂಕಿ ಕಥೆ ಹೇಳಲು ಬೆಳ್ಳಿತೆರೆ ಮೇಲೆ ಮತ್ತೊಮ್ಮೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಶಾರುಖ್ ಖಾನ್ ಜೊತೆ ಸ್ಟಾರ್ಸ್ ದಂಡೇ ಈ ಸಿನಿಮಾಗೆ ಸಾಥ್ ನೀಡಿದೆ.

ಶಾರುಖ್ ಸಿನಿಮಾ ಗಳಿಸಿದ್ದು ಎಷ್ಟು?
ರಾಜಕುಮಾರ್ ಹಿರಾನಿ ಅವರು ಕಾನೂನು ಬಾಹಿರವಾಗಿ ಬೇರೆ ದೇಶಕ್ಕೆ ಹೋಗುವ ಜನರ ಕಥೆ ಆಧರಿಸಿ ಡಂಕಿ ಕಥೆ ಹೆಣೆದಿದ್ದರು. ಹೀಗೆ ಡಂಕಿ ಸಿನಿಮಾ ಅಭಿಮಾನಿಗಳಿಗೆ ಈಗ ಸಿಕ್ಕಾಪಟ್ಟೆ ಇಷ್ಟವಾಗಿದ್ದು, ಬಾಕ್ಸ್ ಆಫಿಸ್‌ನಲ್ಲಿ ಭರ್ಜರಿ 305 ಕೋಟಿ ರೂಪಾಯಿ ಹಣವನ್ನ ಬಾಚಿದೆ ಎನ್ನಲಾಗಿದೆ. ಇದರ ಜೊತೆಗೆ ಹೊಸ ವರ್ಷಕ್ಕೆ ಮತ್ತಷ್ಟು ಗಳಿಕೆ ಹೆಚ್ಚಿಸಿಕೊಳ್ಳುವ ನಿರೀಕ್ಷೆ ದಟ್ಟವಾಗಿದೆ.
ಭಾರತದಲ್ಲೇ 150 ಕೋಟಿ ಕಮಾಲ್!
ಹೌದು, 'ಡಂಕಿ' ಸಿನಿಮಾ ಬಿಡುಗಡೆಯಾಗಿ 7 ದಿನ ಕಳೆದಿದೆ. ಡಿಸೆಂಬರ್ 21ರಂದು ಈ ಚಿತ್ರ ಬಿಡುಗಡೆ ಆಗಿತ್ತು. ದಿನದಿಂದ ದಿನಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್ ಕಲೆಕ್ಷನ್ ಹೆಚ್ಚಿಸಿಕೊಂಡು, ಇದೀಗ 300 ಕೋಟಿ ರೂಪಾಯಿ ಕ್ಲಬ್ ಸೇರಿದೆ. ಅದರಲ್ಲೂ ಭಾರತ ಒಂದರಲ್ಲೇ ಸಿನಿಮಾ ಭರ್ಜರಿ 150 ಕೋಟಿ ಬಾಚಿದೆ ಎನ್ನಲಾಗಿದೆ. ಸಾವಿರಾರು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿ ಅಬ್ಬರಿಸಿತ್ತು ಡಂಕಿ. ಶಾರುಖ್ ಖಾನ್, ಹಿಂದಿನ ಪಠಾಣ್ & ಜವಾನ್ ಸಿನಿಮಾಗಳ ಮೂಲಕ 2023ರಲ್ಲಿ ಭರ್ಜರಿ ಹಿಟ್ ಕಂಡಿದ್ದರು. ಈ ಎರಡು ಚಿತ್ರಗಳು 1000 ಕೋಟಿ ಕ್ಲಬ್ ಸೇರಿದ್ದವು.

'ಡಂಕಿ' ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ತಾಪ್ಸಿ ಪನ್ನು, ವಿಕ್ಕಿ ಕೌಶಲ್, ಬೊಮನ್ ಇರಾನಿ, ವಿಕ್ರಂ ಕೊಚ್ಚರ್, ಅನಿಲ್ ಗ್ರೋವರ್ ಮುಂತಾದವರು ನಟಿಸಿದ್ದಾರೆ. ಸಿನಿಮಾವನ್ನ ಜಿಯೋ ಸ್ಟುಡಿಯೋಸ್, ರೆಡ್ ಚಿಲ್ಲೀಸ್ ಎಂಟರ್‌ಟೇನ್‌ಮೆಂಟ್ ಮತ್ತು ರಾಜ್‌ಕುಮಾರ್ ಹಿರಾನಿ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಗೌರಿ ಖಾನ್ ಹಾಗೂ ರಾಜ್‌ಕುಮಾರ್ ಹಿರಾನಿ ನಿರ್ಮಿಸಿದ್ದಾರೆ.












Click it and Unblock the Notifications