ನಟ ಶ್ರೀಧರ್ ಕೊನೇ ಆಸೆ ಈಡೇರಲೇ ಇಲ್ಲ: ಕಿರುತೆರೆ ನಟಿ ಸಿತಾರಾ ಹೇಳಿದ್ದೇನು?
ಪಾರು ಧಾರಾವಾಹಿ ಖ್ಯಾತಿಯ ಕಿರುತೆರೆ ನಟ ಶ್ರೀಧರ್ ನಾಯಕ್ ಅವರು ಗಂಭೀರ ಅನಾರೋಗ್ಯ ಸಮಸ್ಯೆಯಿಂದ ನಿನ್ನೆ ನಿಧನರಾದರು. ಸುರದ್ರೂಪಿಯಾಗಿದ್ದ ಶ್ರೀಧರ್ ಅವರು ವಿಭಿನ್ನ ಪಾತ್ರಗಳಿಂದಾಗಿ ಕರ್ನಾಟಕದ ಮನೆಮಾತಾಗಿದ್ದರು. ಆದರೆ ಕೆಲ ತಿಂಗಳ ಹಿಂದಷ್ಟೇ ಅವರ ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದರು. ಗುರುತೇ ಸಿಗದ ರೂಪಕ್ಕೆ ಬದಲಾಗಿ ತಮ್ಮ ಚಿಕಿತ್ಸೆಗಾಗಿ ನೆರವಿನ ಸಹಾಯವನ್ನೂ ಕೇಳಿದ್ದರು. ಆದರೆ ವಿಧಿ ಅವರನ್ನು ಇಹಲೋಕ ತ್ಯಜಿಸುವಂತೆ ಮಾಡಿತು. ಒಂದು ರೀತಿ ದಾರುಣ ಸಾವು ಕಂಡ ನಟ ಶ್ರೀಧರ್ ಅವರಿಗೆ ಕೊನೆಯ ಆಸೆಯೊಂದಿತ್ತು. ಶ್ರೀಧರ್ ಅವರೊಂದಿಗೆ ಅವರೊಂದಿಗೆ ಸೀರಿಯಲ್‌ನಲ್ಲಿ ನಟಿಸಿದ್ದ ನಟಿ ಸಿತಾರಾ ಅವರು ಆ ಕೊನೆಯ ಆಸೆ ಈಡೇರಲೇ ಇಲ್ಲ ಎಂದು ನೋವಿನಿಂದ ಮಾತನಾಡಿದ್ದಾರೆ.
ಶ್ರೀಧರ್ ಅವರ ನಿಧನದ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ನಟಿ ಸಿತಾರಾ ಅವರು, ʼಶ್ರೀಧರ್ ಅವರು ಒಂದು ರೀತಿ ಪಾದರಸದಂತೆ ಇದ್ರು. ಅಂತಹ ಮನುಷ್ಯ ಈ ರೀತಿ ಹೋಗಿದ್ದು ಮನಸ್ಸಿಗೆ ತುಂಬಾ ನೋವು ಕೊಡ್ತಿದೆ. ಇದರಿಂದ ಅರ್ಥವಾಗಿದ್ದು ಏನಂದ್ರೆ ಇರುವಷ್ಟು ದಿನ ಆರೋಗ್ಯವನ್ನ ಚೆನ್ನಾಗಿ ಕಾಪಾಡಿಕೊಳ್ಳಬೇಕು. ಜೀವ ಥಟ್ ಹೋದರೆ ಏನೂ ಅನಿಸಲ್ಲ, ಆದ್ರೆ ನೋವು ಅನುಭವಿಸಿ ನರಳಾಡಿ ಹೋಗುವುದು ತುಂಬಾ ಕಷ್ಟದ ವಿಚಾರʼ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ʼಶ್ರೀಧರ್ ನಮ್ಮ ಇಡೀ ಪಾರು ಟೀಂಗೆ ಚಿಕ್ಕಪ್ಪ ಆಗಿದ್ರು. ನಾವೆಲ್ಲ ಅವರನ್ನ ಚಿಕ್ಕಪ್ಪ ಅಂತಾನೇ ಕರೀತಿದ್ವಿ, ಎಲ್ಲರೊಂದಿಗೂ ಅವರ ಒಡನಾಟ ಚೆನ್ನಾಗಿತ್ತು. ಆದರೆ ಸಡನ್ನಾಗಿ ಅವರ ಆರೋಗ್ಯ ಹಾಳಾಯ್ತು. ಅವರ ದೇಹ ಟ್ರೀಟ್‌ಮೆಂಟ್‌ಗೆ ಸಪೋರ್ಟ್ ಮಾಡುತ್ತಿರಲಿಲ್ಲ. ಅವರನ್ನ ಕೊನೇ ಬಾರಿ ಮೀಟ್ ಮಾಡಿದಾಗಲೂ ಹಾಸಿಗೆ ಮೇಲೆ ನಗುತ್ತಲೇ ನಮ್ಮನ್ನ ಮಾತನಾಡಿಸಿದ್ರು. ಆದರೆ ಅವರಿಗೆ ಸಾಯುವ ಮುಂಚೆ ಒಂದು ಆಸೆ ಇತ್ತುʼ ಎಂದು ಸಿತಾರಾ ನೆನೆದಿದ್ದಾರೆ.
ʼಶ್ರೀಧರ್ ಅವರಿಗೆ ಸಾಯುವ ಮುನ್ನ ನನ್ನ ಮಗನನ್ನ ನೋಡಬೇಕು ಎಂಬ ಆಸೆ ಇತ್ತು. ಆದರೆ ಅದು ಆಗಲೇ ಇಲ್ಲ. ನನ್ನ ಪ್ರಕಾರ ಚೆನ್ನಾಗಿದ್ದ ತಂದೆಯನ್ನ ಆ ಸ್ಥಿತಿಯಲ್ಲಿ ನೋಡಿದರೆ ಅವರ ತಲೆಯಲ್ಲಿ ಅದು ಹಾಗೆಯೇ ಉಳಿದುಬಿಡುತ್ತೆ. ಆ ಕಾರಣಕ್ಕೂ ಅವರು ಬಂದು ಶ್ರೀಧರ್ ಅವರನ್ನ ನೋಡಲಿಲ್ಲ ಅನಿಸುತ್ತೆ. ಮಗನನ್ನ ನೋಡಬೇಕು ಅನ್ನೋ ಆಸೆ ತುಂಬಾ ಇತ್ತು. ಈ ವಿಚಾರವಾಗಿ ಕೊನೇ ಕ್ಷಣದಲ್ಲಾದ್ರೂ ಮಗನ್ನ ಅವರಿಗ ತೋರ್ಸೋಣ ಅಂತ ನಾವು ಕೂಡ ತುಂಬಾ ಪ್ರಯತ್ನ ಮಾಡಿದ್ವಿʼ ಎಂದಿದ್ದಾರೆ.
ʼಈ ವಿಚಾರದಲ್ಲಿ ಅವರು ಯೋಚನೆ ಮಾಡೋದು ಕೂಡ ಸರಿ ಇರುತ್ತೆ. ಯಾಕಂದ್ರೆ ಎಲ್ಲವನ್ನೂ ನಾವು ನೆಗೆಟಿವ್ ಆಗಿ ನೋಡಬಾರದು. ಆದರೆ ಶ್ರೀಧರ್ ಅವರು ಕನವರಿಸುತ್ತಿದ್ದಾಗ ಅವರ ತಾಯಿ ಮೊಬೈಲ್‌ನಲ್ಲಿದ್ದ ಮಗನ ಫೋಟೋವನ್ನು ತೋರಿಸಿದ್ದರಂತೆ. ಆ ಫೋಟೋ ನೋಡಿ ಶ್ರೀಧರ್ ಮಗನಿಗೆ ಟಾಟಾ, ಟಾಟಾ ಎನ್ನುತ್ತಾ ಕೊನೆಯುಸಿರೆಳೆದರು. ಇದನ್ನು ಅವರ ತಾಯಿ ನಮಗೆ ಹೇಳಿದ್ರು, ಈ ವಿಚಾರ ಕೇಳಿ ತುಂಬಾ ನೋವಾಯ್ತುʼ ಎಂದು ಸಿತಾರಾ ಭಾವುಕರಾಗಿದ್ದಾರೆ.












Click it and Unblock the Notifications