ಇಬ್ಬರು ಮಕ್ಕಳನ್ನು ಕಳೆದುಕೊಂಡ ಖ್ಯಾತ ಕಿರುತೆರೆ ನಟ ಅಶೋಕ್: ಆಗಿದ್ದೇನು?
ಕನ್ನಡ ಕಿರುತೆರೆಯ ಜನಪ್ರಿಯ ನಟರಲ್ಲಿ ಒಬ್ಬರಾದ ಅಶೋಕ್ ಹೆಗ್ಡೆ ಸದ್ಯ ದೃಷ್ಟಿಬೊಟ್ಟು ಧಾರಾವಾಹಿಯಲ್ಲಿ ದೃಷ್ಟಿಯ ತಂದೆ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೂರು ದಶಕಗಳಿಗಿಂತಲೂ ಹೆಚ್ಚು ಬಣ್ಣದ ಲೋಕದಲ್ಲಿರುವ ಅಶೋಕ್ ಹೆಗ್ಡೆ ಅವರ ವೈಯಕ್ತಿಕ ಬದುಕಿನ ಬಗ್ಗೆ ಅನೇಕರಿಗೆ ಕುತೂಹಲವಿದೆ. ಆದರೆ ಈವರೆಗೂ ಎಲ್ಲಿಯೂ ಅವರು ತಮ್ಮ ಖಾಸಗಿ ಜೀವನದ ಬಗ್ಗೆ ಹೇಳಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಅಶೋಕ್ ಹೆಗ್ಡೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ. ಮಕ್ಕಳಿಲ್ಲದ ನೋವನ್ನು ತೋಡಿಕೊಂಡಿದ್ದಾರೆ.
ಅಶ್ವವೇಗ ನ್ಯೂಸ್ ಜೊತೆ ಮಾತನಾಡಿದ ಅವರು, 'ನನಗೆ ಇಬ್ಬರು ಮಕ್ಕಳಾದರು. ಗರ್ಭಿಣಿ ಇರುವಾಗ ನನ್ನ ಪತ್ನಿಗೆ ಶುಗರ್ ಬಂತು. ಮೊದಲು ಇರಲಿಲ್ಲ. ಗರ್ಭಿಣಿಯಾದ ಸಂದರ್ಭದಲ್ಲಿ ಶುಗರ್ ಬಂತು. ಎರಡು ಮಕ್ಕಳು ಹಾಗೆ ಸತ್ತು ಹೋದರು. ಅವಳಿಗಿದ್ದ ಶುಗರ್ ಮಕ್ಕಳಿಗೆ ಬಂದು ಎರಡು ಮಕ್ಕಳು ಸತ್ತು ಹೋದವು. ಈಗ ಇದೇ ಹರಿಶ್ಚಂದ್ರ ಘಾಟ್‌ನಲ್ಲಿ ಮಲಗಿಕೊಂಡಿವೆ. ಒಂದು ಮಗು ಆಯ್ತು ಅದು ಹಾಗೇ ಹೋಯ್ತು. ಇನ್ನೊಂದು ಮಗು ಆಯ್ತು ಅದು ಕೂಡ ಹಾಗೇ ಹೋಯ್ತು. ಮತ್ತೆ ಮಗು ಬೇಡ ಅಂತಾ ನಿರ್ಧಾರ ಮಾಡಿದೆವು' ಎಂದರು.

'ಯಾಕೆಂದರೆ ನಾನು ಶೂಟಿಂಗ್ ಅಂತಾ ಹೊರಗಡೆ ಹೋಗುತ್ತೇನೆ. ಆದರೆ ಅವಳು ಮನೆಯಲ್ಲೇ ಇರುತ್ತಾಳೆ. ಇನ್ನೊಂದು ಮಗುವಾದರೂ ಹೀಗೆ ಆಗುತ್ತಾ, ಮತ್ತೊಂದು ಮಗುವಾದರೆ ಹೀಗೆ ಆಗುತ್ತಾ ಅಂತಾ ಯೋಚನೆ ಮಾಡಿ ಒಂಥರಾ ಅವಳಿಗೆ ಮಾನಸಿಕ ಆಗುತ್ತದೆ. ಅದಕ್ಕೆ ಇಬ್ಬರು ಕುಳಿತುಕೊಂಡು ನಿರ್ಧಾರ ಮಾಡಿದೆವು ಮಕ್ಕಳೇ ಬೇಡಾ ಅಂತಾ. ನನಗೆ ನೀನು ನಿನಗೆ ನಾನು ಇವತ್ತಿಗೂ ನನಗೆ ಅವಳು ದದ್ದಾ ಅಂತಾ ಕರೆಯುತ್ತಾಳೆ, ನಾನು ಅವಳಿಗೆ ದದ್ದಾ ಅಂತಾ ಕರೆಯುತ್ತೇನೆ' ಎಂದು ಹೇಳಿದರು.
'ಅವಳು ನನ್ನನ್ನು ಯಾವುದೇ ನಿರೀಕ್ಷೆಗಳು ಇಟ್ಟುಕೊಂಡು ಪ್ರೀತಿಸಿಲ್ಲ. ಪ್ರೀತಿವೊಂದನ್ನು ಮಾತ್ರ ಇಟ್ಟುಕೊಂಡು ಪ್ರೀತಿಸಿದ್ದು ಅಷ್ಟೇ. ಅದಕ್ಕಾಗಿಯೇ ನಾನು ನನ್ನ ಹೆಂಡತಿ ಗಟ್ಟಿಯಾಗಿದ್ದೇವೆ. ಅವಳೆಷ್ಟು ನೊಂದುಕೊಂಡಿರುತ್ತಾಳೆ ಅಂತಾ ನನಗೂ ಅನಿಸುತ್ತದೆ. ಮದುವೆಯಾಗಿ ಇಷ್ಟು ವರ್ಷ ಆದರೂ ಮಕ್ಕಳು ಆಗ್ವಿಲಾ ಅಂತಾ ಯಾರಾದರೂ ಕೇಳಿದಾಗ ಗಂಡು ಮಕ್ಕಳು ನಿರ್ಲಕ್ಷಿಸಿ ಮುಂದೆ ಹೋಗುತ್ತಾರೆ. ಆದರೆ ಹೆಣ್ಣು ಮಕ್ಕಳಿಗೆ ಅದು ಆಗುವುದಿಲ್ಲ'.

'ನಾನು ಮದುವೆಯಾದಾಗ ನಿರ್ದೇಶನ ಕೂಡ ಮಾಡುತ್ತಿದೆ. ಊಟ ಮಾಡಲು ಕೂಡ ಹಣ ಇರುತ್ತಿರಲಿಲ್ಲ. ಆ ಸಮಯದಲ್ಲಿ ಆದ ಮಗುವನ್ನು ಡಾಕ್ಟರ್ ಕೂಡ ಅಬಾರ್ಷನ್ ಮಾಡಿಸಿ ಅಂದರು. ನಮಗೆ ತಿನ್ನಲು ಕೂಡ ದುಡ್ಡು ಇರುತ್ತಿರಲಿಲ್ಲ. ಬಹುಷಃ ಅದರ ಪರಿಣಾಮ ಈ ಎರಡು ಮಗು ಸಾಯಲು ಕಾರಣವಾಯ್ತು. ಒಪ್ಪಿಕೊಳ್ಳುತ್ತೇನೆ. ಆದರೂ ಕೂಡ ನನ್ನ ಹೆಂಡತಿ ಇವನ ಹತ್ತಿರ ದುಡ್ಡಿಲ್ಲ, ಇವನು ಹೀರೋ ಆಗಿಲ್ಲ ಅಂತಾ ಬಿಟ್ಟು ಹೋಗಲಿಲ್ಲ. ನನ್ನ ಜೊತೆ ನಿಂತುಕೊಂಡು ಸಾಥ್ ಕೊಟ್ಟಳು' ಎಂದರು.
'ಎರಡನೇ ಮಗುವನ್ನು ಉಳಿಸಿಕೊಳ್ಳಲು ತುಂಬಾ ಪ್ರಯತ್ನಪಟ್ಟೆ ಆದರೂ ಆ ಮಗು ಉಳಿಯಲಿಲ್ಲ. ಆ ಮಗು ಏನು ತಪ್ಪು ಮಾಡಿಲ್ಲ. ಅದು ನರಕಕ್ಕೆ ಅಂತೂ ಹೋಗಲ್ಲ. ಅದು ಸ್ವರ್ಗಕ್ಕೆ ಹೋಗುತ್ತದೆ ಎನ್ನುವ ನಂಬಿಕೆ ನನಗೆ ಇದೆ. ಹರಿಶ್ಚಂದ್ರ ಘಾಟ್‌ನಲ್ಲಿ ಎರಡು ಬಟ್ಟೆ ತೆಗೆದುಕೊಂಡು ಅವನ ಮೇಲೆ ಕೆಳಗೆ ಹಾಕಿ ಕಳುಹಿಸಿದೆ. ಅದು ಸತ್ತಿರಬಹುದು, ಅದಕ್ಕೆ ಜೀವ ಇಲ್ಲದೇ ಇರಬಹುದು, ಆದರೆ ನನ್ನ ಮತ್ತು ನನ್ನ ಹೆಂಡತಿ ಮನಸ್ಸಿನಲ್ಲಿ ಅದು ಇದೆ. ಇವತ್ತಿನ ವರೆಗೂ ಅದರ ಜೀವ ನಮ್ಮ ಜೊತೆ ಇದೆ' ಎಂದರು.
'ನನಗೆ ನನ್ನ ಹೆಂಡತಿ, ಹೆಂಡತಿ ಮಾತ್ರ ಅಲ್ಲ, ಅವಳೇ ಎಲ್ಲಾ. ಇವತ್ತಿಗೂ ನಾವು ಕಷ್ಟದಲ್ಲಿದ್ದೇವೆ. ಒಳ್ಳೆಯ ಬದುಕಿಗೋಸ್ಕರ ಹೋರಾಟ ಮಾಡುತ್ತಿದ್ದೇವೆ. ಒಂದಲ್ಲ ಒಂದು ದಿನ ನಾನು ನನ್ನ ಹೆಂಡತಿ ಖುಷಿಯಾಗಿರುತ್ತೇವೆ. ನಾವಿಬ್ಬರು ಖುಷಿಯಾಗಿ ನಕ್ಕು ಇರುತ್ತೇವಲ್ಲ, ಆ ಒಂದು ದಿನಕ್ಕಾಗಿ ಕಾಯುತ್ತಿದ್ದೇವೆ. ಆ ಒಂದು ದಿನವನ್ನು ನನ್ನ ಕಿರುತೆರೆ ಅಥವಾ ಬೆಳ್ಳಿತೆರೆ ಕೊಡುತ್ತದೆ ಎನ್ನುವ ನಂಬಿಕೆ ಮತ್ತು ವಿಶ್ವಾಸದ ಮೇಲೆ ಈ ಕ್ಷೇತ್ರದಲ್ಲಿ ಬದುಕುತ್ತಿದ್ದೇನೆ. ಬದುಕುತ್ತೇನೆ' ಎಂದು ಅಶೋಕ್ ಹೆಗ್ಡೆ ಹೇಳಿದ್ದಾರೆ.












Click it and Unblock the Notifications