ಪಂಚಭೂತಗಳಲ್ಲಿ ಲೀನರಾದ ಹಿರಿಯ ನಟ ದ್ವಾರಕೀಶ್
ಬೆಂಗಳೂರು, ಏಪ್ರಿಲ್ 16: ಕನ್ನಡ ಚಿತ್ರರಂಗದ ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಅವರ ಅಂತ್ಯಕ್ರಿಯೆ ಇಂದು (ಏಪ್ರಿಲ್ 17) ಬುಧವಾರ ಚಾಮರಾಜಪೇಟೆ ಕೆ.ಆರ್ ಮಿಲ್ ಬಳಿ ಇರುವ ಬ್ರಾಹ್ಮಣರ ಚಿತಾಗಾರದಲ್ಲಿ ನೆರವೇರಿದೆ.
ಚಿತ್ರರಂಗದ ಹಲವಾರು ಗಣ್ಯರು ಇಂದು ದ್ವಾರಕೀಶ್ ಅವರ ಅಂತಿಮ ದರ್ಶನ ಪಡೆದು ನಮನ ಸಲ್ಲಿದ್ದು, ಈ ಬಳಿಕ ಚಾಮರಾಜಪೇಟೆಯ ಟಿ.ಆರ್ ಮಿಲ್‌ನಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ. ನಟ ದ್ವಾರಕೀಶ್ ಅವರ ಮಕ್ಕಳು ಅಂತಿಮ ವಿಧಿವಿಧಾನ ನೆರವೇರಿಸಿದ್ದಾರೆ.

ದ್ವಾರಕೀಶ್ ಅವರ ಹಿರಿಯ ಪುತ್ರ ಸಂತೋಷ್ ಅವರು ತಂದೆಯ ಮೃತದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದ್ದು, ಕುಟುಂಬಸ್ಥರು, ಅಭಿಮಾನಿಗಳು, ರಾಜಕೀಯ ಗಣ್ಯರು, ಚಿತ್ರರಂಗದ ಗಣ್ಯರು ಹಾಸ್ಯನಟ ದ್ವಾರಕೀಶ್ ಅವರಿಗೆ ಕಣ್ಣೀರ ವಿದಾಯ ಹೇಳಿದ್ದಾರೆ.
ದ್ವಾರಕೀಶ್ ಅವರಿಗೆ ಏನಾಗಿತ್ತು..?
ದ್ವಾರಕೀಶ್ ಅವರು ದೀರ್ಘ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಸೋಮವಾರ ರಾತ್ರಿ ಲೂಸ್ ಮೋಷನ್ ಆಗಿತ್ತು. ಹೀಗಾಗಿ ಅವರು ರಾತ್ರಿ ನಿದ್ದೆ ಮಾಡಿರಲಿಲ್ಲ. ಬೆಳಗ್ಗೆ ಕಾಫಿ ಕುಡಿದು ಎರಡು ಗಂಟೆ ಮಲಗುತ್ತೇನೆ ಎಂದು ನಿದ್ರಿಸಿದ್ದರು. ಮಲಗಿದವರು ಎದ್ದೇ ಇಲ್ಲ. ಅವರಿಗೆ ಹೃದಯಾಘಾತ ಆಗಿದೆ ಎಂದು ಪುತ್ರ ಯೋಗಿ, ದ್ವಾರಕೀಶ್ ಅವರ ಅಂತಿಮ ಕ್ಷಣಗಳ ಬಗ್ಗೆ ತಿಳಿಸಿದ್ದಾರೆ.
ದ್ವಾರಕೀಶ್ ಜೀವನ ಪರಿಚಯ
1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ ದ್ವಾರಕೀಶ್ ಅವರು, ಶಾಮರಾವ್ ಮತ್ತು ಜಯಮ್ಮ ಅವರ ಮುದ್ದಿನ ಪುತ್ರ. ಶಾರದ ವಿಲಾಸ್ ಮತ್ತು ಬನುಮ್ಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಫ್ರೌಡ ಶಿಕ್ಷಣದ ನಂತರ ಸಿಪಿಸಿ ಪಾಕಿಟೆಕ್ನಿಕ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದರು.
ನಟನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದ ದ್ವಾರಕೀಶ್ 1963ರಲ್ಲಿ ವ್ಯಾಪಾರ ಬಿಟ್ಟು ನಟನೆಯತ್ತ ಮುಖ ಮಾಡಿದರು. 1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದ ದ್ವಾರಕೀಶ್ ಅವರು, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ಈವರೆಗೂ ನೂರಾರು ಸಿನಿಮಾಗಳಲ್ಲಿ ನಟಿಸಿದ್ದರು.












Click it and Unblock the Notifications