Daali Dhananjaya: ಚಾಮುಂಡಿ ಬೆಟ್ಟದಲ್ಲಿ ನಟ ಡಾಲಿ-ಧನ್ಯತಾ ಲಗ್ನಪತ್ರಿಕೆಗೆ ವಿಶೇಷ ಪೂಜೆ
ಸ್ಯಾಂಡಲ್‌ವುಡ್ ನಟ ಡಾಲಿ ಧನಂಜಯ್ ಶೀಘ್ರದಲ್ಲೇ ಮಧುಮಗನಾಗುತ್ತಿದ್ದಾರೆ. ಡಾ.ಧನ್ಯತಾ ಅವರೊಂದಿಗೆ ಡಾಲಿ ಮದುವೆ ನೆರವೇರಲಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ. ಈಗಾಗಲೇ ಗಣ್ಯರನ್ನು ಮದುವೆಗೆ ಆಹ್ವಾನಿಸಿರುವ ಡಾಲಿ ಜೋಡಿ ಇಂದು ಮೈಸೂರಿನ ಚಾಮುಂಡಿಬೆಟ್ಟಕ್ಕೆ ತೆರಳಿ ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ. ತಮ್ಮ ಲಗ್ನಪತ್ರಿಕೆಗೆ ವಿಶೇಷ ಪೂಜೆಯೂ ಸಲ್ಲಿಸಿದ್ದಾರೆ.
ತನ್ನ ಭಾವಿ ಪತ್ನಿ ಧನ್ಯತಾ ಅವರೊಂದಿಗೆ ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಯ ದರ್ಶನ ಪಡೆದಿದ್ದಾರೆ. ಧನುರ್ಮಾಸದ ವಿಶೇಷ ಪೂಜೆಯ ಹಿನ್ನೆಲೆ ಇಂದು ಮುಂಜಾನೆಯೇ ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ಈ ಕುರಿತು ಮಾತನಾಡಿರುವ ನಟ ಡಾಲಿ, ಮದುವೆಗೆ ಎಲ್ಲ ತಯಾರಿ ನಡೆಯುತ್ತಿದೆ. ಲಗ್ನಪತ್ರಿಕೆ ಹಂಚುವುದನ್ನು ಶುರು ಮಾಡಿದ್ದೇವೆ ಎಂದು ಹೇಳಿದ್ದಾರೆ.

ಈಗಾಗಲೇ ಹಿರಿಯರಿಗೆ, ಗಣ್ಯರಿಗೆ ಲಗ್ನ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸಲಾಗಿದೆ. ಇಂದು ತಾಯಿ ಚಾಮುಂಡೇಶ್ವರಿಯ ಮುಂದೆ ನಮ್ಮ ಲಗ್ನ ಪತ್ರಿಕೆಗೆ ಪೂಜೆ ಸಲ್ಲಿಸಿದ್ದೇವೆ. ನಮ್ಮ ಮದುವೆ ಮೈಸೂರಿನಲ್ಲೇ ನಡೆಯುತ್ತಿದ್ದು, ಎಲ್ಲರೂ ಬಂದು ಆಶೀರ್ವಾದ ಮಾಡಬೇಕು. ನಿಮಗೆಲ್ಲರಿಗೂ ಲಗ್ನಪತ್ರಿಕೆ ಕೊಡುತ್ತೇನೆ ಎಂದು ಕರೆಯೋಲೆ ನೀಡಿದ್ದಾರೆ.
ಮೈಸೂರಿನಲ್ಲಿ ಫೆಬ್ರವರಿ 15 ಹಾಗೂ 16ರಂದು ಧನಂಜಯ್-ಧನ್ಯತಾ ಮದುವೆ ನೆರವೇರಲಿದೆ. ಈಗಾಗಲೇ ಸ್ಯಾಂಡಲ್‌ವುಡ್‌ನ ನಟ-ನಟಿಯರು, ಸಿಎಂ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಎಸ್ ಯಡಿಯೂರಪ್ಪ, ಎಚ್.ಡಿ.ದೇವೇಗೌಡ ಸೇರಿದಂತೆ ರಾಜಕೀಯ ನಾಯಕರಿಗೂ ಡಾಲಿ ಜೋಡಿ ಖುದ್ದಾಗಿ ತೆರಳಿ ಆಮಂತ್ರಣ ನೀಡಿ ಬಂದಿದೆ.
ನವೆಂಬರ್ ಒಂದರ ಕನ್ನಡ ರಾಜ್ಯೋತ್ಸವದಂದೇ ನಟ ಡಾಲಿ ತಮ್ಮ ಪ್ರೇಯಸಿಯನ್ನು ಕರುನಾಡಿಗೆ ಪರಿಚಯಿಸಿದ್ದರು. ಪ್ರೀತಿಯ ಕರುನಾಡಿಗೆ, ನನ್ನಿಚ್ಛೆಯಂತೆ, ಕುಟುಂಬದ ಇಚ್ಛೆಯಂತೆ, ನಿಮ್ಮೆಲ್ಲರ ಇಚ್ಛೆಯಂತೆ, ಸದ್ಯದಲ್ಲೇ ಮದುವೆಯಾಗುತ್ತಿದ್ದೇನೆ. ಪ್ರತಿ ಹೆಜ್ಜೆಯಲ್ಲೂ ಕೈ ಹಿಡಿದು ನಡೆಸಿದ್ದೀರಿ, ಮನದಾಳದಿಂದ ಹರಸಿದ್ದೀರಿ. ಬದುಕಿನ ಮಹತ್ವವಾದ ಘಟ್ಟಕ್ಕೆ ಗೆಳತಿ ಧನ್ಯತಾಳೊಂದಿಗೆ ಹೆಜ್ಜೆಯಿಡುತ್ತಿದ್ದೇನೆ. ಪ್ರೀತಿ, ಆಶೀರ್ವಾದವಿರಲಿ. ಮದುವೆಗೆ ಕರಿತೀನಿ, ಎಲ್ಲ ಬಂದು ಊಟ ಮಾಡಿಕೊಂಡು ಹೋಗ್ಬೇಕು. ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿಯ ಶುಭಾಶಯಗಳು. ನಾನು ಧನ್ಯ ಎಂದು ಧನಂಜಯ್ ಸಿಹಿಸುದ್ದಿ ಹಂಚಿಕೊಂಡಿದ್ದರು.

ಚಿತ್ರದುರ್ಗ ಮೂಲದ ವೈದ್ಯೆ ಧನ್ಯತಾ ಅವರೊಂದಿಗೆ ಮದುವೆ ನಿಶ್ಚಯವಾಗಿರುವುದಾಗಿ ಡಾಲಿ ಅನೌನ್ಸ್ ಮಾಡಿದ್ದರು. ಬಳಿಕ ಇಬ್ಬರೂ ಸಿಂಪಲ್ ಆಗಿ ಎಂಗೇಜ್‌ಮೆಂಟ್ ಕೂಡ ಆಗಿದ್ದರು. ಮದುವೆ ಆಮಂತ್ರಣವನ್ನು ಕೂಡ ತುಂಬಾ ಸಿಂಪಲ್ ಆಗಿ ಕೈಬರಹದಲ್ಲಿ ಬರೆಸಿ ಗಮನ ಸೆಳೆದಿದ್ದಾರೆ.
ಧನ್ಯತಾ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಪ್ರಸೂತಿ ತಜ್ಞರಾಗಿದ್ದು, ವೈದ್ಯಕೀಯ ಪದವಿಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಇತ್ತ ಧನಂಜಯ್ ಅವರು ಇಂಜಿನಿಯರಿಂಗ್ ಪದವಿಯಲ್ಲಿ ರ‍್ಯಾಂಕ್ ಪಡೆದಿದ್ದಾರೆ. ಇನ್ನು ಡಾಲಿ ಧನಂಜಯ್ ಮತ್ತು ಧನ್ಯತಾ ಇಬ್ಬರೂ ಹಲವು ವರ್ಷಗಳಿಂದ ಪರಿಚಯವಿದ್ದರು. ಧನಂಜಯ್ ಹಾಗೂ ಧನ್ಯತಾ ಓದಿರುವುದು ಕೂಡ ಮೈಸೂರಿನಲ್ಲೇ. ಇದೀಗ ಸಾಂಸ್ಕೃತಿಕ ನಗರದಲ್ಲೇ ಇವರ ಮದುವೆ ನಡೆಯುತ್ತಿರುವುದು ವಿಶೇಷ. ಇವರ ಮದುವೆಯಲ್ಲಿ ತಾರೆಯರ ದಂಡು ಸೇರುವುದು ಪಕ್ಕಾ ಎಂದು ಹೇಳಲಾಗುತ್ತಿದೆ.












Click it and Unblock the Notifications