Sonal: ತರುಣ್ ಸುಧೀರ್ ಬಾಳ ಸಂಗಾತಿ ಸೋನಲ್ ಮೊಂಥೆರೋ ಯಾರು..? ಯಾವ ಊರು?
ಬೆಂಗಳೂರು, ಜುಲೈ 22: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಟ ತರುಣ್ ಸುಧೀರ್ ನಟಿ ಸೋನಲ್ ಮೊಂಥೆರೋ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಸಿಹಿ ಸುದ್ದಿಯನ್ನು ಡೈರೆಕ್ಟರ್ ಹಾಗೂ ನಟಿ ವಿಭಿನ್ನವಾಗಿ ಪ್ರೀ ವೆಡ್ಡಿಂಗ್ ವಿಡಿಯೋ ಮೂಲಕ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಜೊತೆಗೆ ತರುಣ್ ಹಾಗೂ ಸೋನಲ್ ಮದುವೆ ದಿನಾಂಕವನ್ನು ಕೂಡ ರಿವೀಲ್ ಮಾಡಿದ್ದಾರೆ.
ನಟ ತರುಣ್ ಸುಧೀರ್ ಕನ್ನಡಿಗರಿಗೆ ಚಿರಪರಿಚಿತರು. ಖ್ಯಾತ ಖಳನಟ ಸುಧೀರ್ ಹಾಗೂ ಮಾಲತಿ ಅವರ ಕಿರಿಯ ಪುತ್ರ. ನಟನಾಗಿ, ನಿರ್ದೇಶಕನಾಗಿ ಕನ್ನಡಿಗರ ಮನಗೆದ್ದಿರುವ ತರುಣ್ ಸುಧೀರ್ ಕೈ ಹಿಡಿಯುತ್ತಿರುವ ಸೋನಲ್ ಮೊಂಥೆರೋ ಯಾರು..? ಎಲ್ಲಿಯವರು..? ಎನ್ನುವ ಪ್ರಶ್ನೆ ಅನೇಕರಿಗಿದೆ. ಈ ಪ್ರಶ್ನೆಗೆ ಉತ್ತರ ಇಲ್ಲಿದೆ.

ರಾಬರ್ಟ್ ಚಿತ್ರದ ಮೂಲಕ ಕನ್ನಡಿಗರ ಮನಗೆದ್ದಿರುವ ಸೋನಲ್ ಮೊಂಥೆರೋ ಕರಾವಳಿ ಭಾಗದವರು. ಮೂಲತಃ ಮಂಗಳೂರಿನವರಾದ ಸೋನಲ್ ಮೊದಲು ತುಳು ಚಿತ್ರಗಳಲ್ಲಿ ನಟಿಸಿದ್ದರು. ತುಳು ಭಾಷೆಯ ಎಕ್ಕ ಸಕ ಎನ್ನುವ ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಪಿಲಿಬೈಲ್ ಯಮುನಕ್ಕ ಸೇರಿದಂತೆ ಕೆಲವು ತುಳು ಚಿತ್ರಗಳಲ್ಲಿ ನಟಿಸಿದ್ದಾರೆ. 2018ರಲ್ಲಿ ಅಭಿಸಾರಿಕೆ ಎನ್ನುವ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
2019ರಲ್ಲಿ ಯೋಗರಾಜ್ ಭಟ್ ನಿರ್ದೇಶನದ ಪಂಚತಂತ್ರ ಚಿತ್ರದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿ ಕಾಣಿಸಿಕೊಂಡರು. ತರುಣ್ ಸುಧೀರ್ ನಿದೇರ್ಶನದ ರಾಬರ್ಟ್ ಚಿತ್ರದಲ್ಲಿ ಸೋನಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ವಿನೋದ್ ಪ್ರಭಾಕರ್‌ಗೆ ಜೋಡಿಯಾಗಿದ್ದರು. ಶುಗರ್ ಫ್ಯಾಕ್ಟರಿ, ಬನಾರಸ್, ಗರಡಿ, ಮದುವೆ ದಿಬ್ಬಣ, ಡೆಮೊ ಪೀಸ್, ಶಂಭೋ ಶಿವ ಶಂಕರ್ ಚಿತ್ರಗಳಲ್ಲಿ ಸೋನಲ್ ಮೊಂಥೆರೋ ನಟಿಸಿದ್ದಾರೆ. ಇನ್ನು ಉಪೇಂದ್ರ ನಟನೆಯ ಬುದ್ಧಿವಂತ 2 ಹಾಗೂ ಮಾರ್ಗರೆಟ್ ಲವ್ ಆಫ್ ರಾಮಾಚಾರಿ ಚಿತ್ರದಲ್ಲಿ ಸೋನಲ್ ಅಭಿನಯಿಸುತ್ತಿದ್ದಾರೆ.

ತರುಣ್ ಸುಧೀರ್ ಸಿನಿಮಾ ಪಯಣ
ನಿದೇರ್ಶಕನಾಗಿ ಯಶಸ್ಸು ಕಂಡಿರುವ ತರುಣ್ ಸುಧೀರ್ 1990ರಲ್ಲಿಗಣೇಶನ ಮದುವೆ ಸಿನಿಮಾದಲ್ಲಿ ಬಾಲನಟನಾಗಿ ತೆರೆ ಮೇಲೆ ಬಂದರು. ಅಲ್ಲಿಂದ ನಟನೆ ಆರಂಭಿಸಿದ ತರುಣ್ ಎಕ್ಸ್‌ಕ್ಯೂಸ್ ಮಿ, ಚಪ್ಪಾಳೆ, ವಿಷ್ಣುಸೇನಾ, ಜೊತೆ ಜೊತೆಯಲಿ, ವಿದ್ಯಾರ್ಥಿ, ನವಗ್ರಹ, ಗಜಕೇಸರಿ, ಚೌಕ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಬಳಿಕ ಚೌಕ ಸಿನಿಮಾ ಮೂಲಕ ನಿರ್ದೇಶನಕ್ಕಿಳಿದ ತರುಣ್, ರಾಬರ್ಟ್, ಕಾಟೇರದಂತಹ ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಜೊತೆಗೆ ತರುಣ್ ರಾಂಬೋ, ವಿಕ್ಟರಿ, ಅಧ್ಯಕ್ಷ, ಗಜಕೇಸರಿ, ರನ್ನ, ಟೈಗರ್, ರಾಂಬೋ 2, ವಿಕ್ಟರಿ 2 ಸಿನಿಮಾಗಳ ರೈಟರ್ ಕೂಡ ಆಗಿದ್ದಾರೆ.












Click it and Unblock the Notifications