Dhruva Sarja: ವಿಮಾನ ದುರಂತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ನಟ ಧ್ರುವ ಸರ್ಜಾ & ತಂಡ
ಬೆಂಗಳೂರು, ಫೆಬ್ರವರಿ.20: ಇತ್ತೀಚೆಗೆ ನಟಿ ರಶ್ಮಿಕಾ ಮಂದಣ್ಣ ಅವರು ಪ್ರಯಾಣಿಸುತ್ತಿದ್ದ ವಿಮಾನ ಅನಾಹುತದ ವಿಷಯಕ್ಕೆ ಸುದ್ದಿಯಾಗಿ ನಟಿ ದುರಂತದಿಂದ ಪಾರಾಗಿದ್ದರು. ಅದು ಮಾಸುವ ಮುನ್ನವೇ ಮತ್ತೆ ಕನ್ನಡ ಚಿತ್ರಪ್ರೇಮಿಗಳಿಗೆ ಆತಂಕದ ಸುದ್ದಿಯೊಂದು ಸಿಕ್ಕಿದೆ. ನಟ ಧ್ರುವ ಸರ್ಜಾ ಮತ್ತು ಮಾರ್ಟಿನ್ ಸಿನಿಮಾ ತಂಡ ವಿಮಾನ ದುರಂತದಿಂದ ಕೂದಲೆಳೆ ಅಂತದಲ್ಲಿ ಪಾರಾಗಿದ್ದಾರೆ.
ಹೌದು... ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಹಾಗೂ ಅವರ ಮುಂಬರುವ ಬಹುನಿರೀಕ್ಷಿತ 'ಮಾರ್ಟಿನ್' ಸಿನಿಮಾ ತಂಡ ವಿಮಾನ ದುರಂತದಿಂದ ಪಾರಾಗಿದ್ದಾರೆ. ಮಾರ್ಟಿನ್ ಸಿನಿಮಾ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಹಾಡಿನ ಶೂಟಿಂಗ್‌ಗಾಗಿ ದೆಹಲಿಯಿಂದ ಶ್ರೀನಗರಕ್ಕೆ ಚಿತ್ರತಂಡವು ತೆರಳುತ್ತಿತ್ತು.

ಸೋಮವಾರ ಸಂಜೆ ನವದೆಹಲಿಯಿಂದ ಶ್ರೀನಗರಕ್ಕೆ ಹೊರಟಿದ್ದ '6E6125' ಇಂಡಿಗೋ ವಿಮಾನವು ಹವಾಮಾನ ಮತ್ತು ಚಂಡಮಾರುತದ ಪರಿಸ್ಥಿತಿಯಿಂದಾಗಿ ಪ್ರಕೃತಿ ವಿಕೋಪಕ್ಕೆ ಒಳಗಾಗಿತ್ತು. ಈ ವೇಳೆ ವಿಮಾನವನ್ನು ಸರಿಯಾಗಿ ಲ್ಯಾಂಡ್ ಮಾಡಲು ಆಗದೇ ಪೈಲಟ್ ಪರದಾಡಿದ್ದು, ಪ್ರಯಾಣಿಕರು ದೇವರ ಮೊರೆ ಹೋಗಿದ್ದಾರೆ. ಇದರಲ್ಲಿ ಧ್ರುವ ಸರ್ಜಾ ಮತ್ತು ಮಾರ್ಟಿನ್ ಟೀಂ ಕೂಡ ಇತ್ತು.
ಇನ್ನು, ತಮ್ಮ ಸಮಯ ಪ್ರಜ್ಞೆಯಿಂದ ಪೈಲಟ್ ವಿಮಾನವನ್ನು ಲ್ಯಾಂಡ್ ಮಾಡಿಸಿದ್ದು, ಕೂದಲೆಳೆ ಅಂತರದಲ್ಲಿ ದೊಡ್ಡ ಅನಾಹುತ ತಪ್ಪಿದೆ. ಈ ಬಗ್ಗೆ ನಟ ಧ್ರುವ ಸರ್ಜಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಇನ್ನು, ನಟ ಧ್ರುವ ಸರ್ಜಾ ಹಂಚಿಕೊಂಡಿರುವ ವಿಡಿಯೋದಲ್ಲಿ ಚಿತ್ರದ ನಿರ್ದೇಶಕ ಎ.ಪಿ ಅರ್ಜುನ್, ನಟಿ ಅನ್ವೇಶಿ ಜೈನ್, ನೃತ್ಯ ಸಂಯೋಜಕ ಇಮ್ರಾನ್ ಸರ್ಧಾರಿಯಾ ಸೇರಿದಂತೆ 15ಕ್ಕೂ ಹೆಚ್ಚು ಮಂದಿಯಿದ್ದಾರೆ. "ನನ್ನ ಜೀವಮಾನದಲ್ಲಿಯೇ ಮೊದಲ ಬಾರಿ ಅತ್ಯಂತ ಕೆಟ್ಟ ಅನುಭವವಾಯಿತು. ಸದ್ಯ ನಾವು ಸುರಕ್ಷಿತವಾಗಿದ್ದೇವೆ. ಥ್ಯಾಂಕ್ ಗಾಡ್, ಜೈ ಆಂಜನೇಯ" ಎಂದು ಧ್ರುವ ಸರ್ಜಾ ಹೇಳಿದ್ದಾರೆ.
ನಟ ಧ್ರುವ ಸರ್ಜಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ತಮ್ಮ ಅನುಭವವನ್ನು "ಮೊದಲ ಬಾರಿಗೆ ಸಾವನ್ನು ನೋಡಿ ಮತ್ತೆ ವಾಪಸ್ ಬಂದಿದ್ದೇನೆ. ಇದಕ್ಕೆ ನನ್ನ ತಂದೆ ತಾಯಿಯರ, ನನ್ನ ವಿಐಪಿಗಳ ಮತ್ತು ನನ್ನ ಏಂಜಲ್ ಚಿರು ಅವರ ಆಶೀರ್ವಾದ ಕಾರಣ. ಪ್ರತಿ ಪ್ರಯಾಣಿಕರು ತಮ್ಮ ಪ್ರಾಣಕ್ಕಾಗಿ ದೇವರಿಗೆ ಜೋರಾಗಿ ಪ್ರಾರ್ಥಿಸುವುದನ್ನು ಕೇಳುವುದು ನಿಜಕ್ಕೂ ಉಸಿರು ಬಿಗಿ ಹಿಡಿಯುವ ಅನುಭವವಾಗಿದೆ. ನಾವು ಸುರಕ್ಷಿತವಾಗಿ ಬಂದಿಳಿಯುತ್ತಿದ್ದಂತೆ, ನೆರೆದಿದ್ದ ಜನಸಮೂಹ, ಸಂತೋಷದ ಕಣ್ಣೀರು ಹಾಕಿದ್ದು, ಪ್ರತಿಯೊಬ್ಬ ಪ್ರಯಾಣಿಕರು ತಮ್ಮ ಪ್ರೀತಿಪಾತ್ರರಿಗೆ ಕರೆ ಮಾಡಿ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಜೀವನದಲ್ಲಿ ಉತ್ತಮವಾಗಿ ಬದುಕಲು ನಮಗೆಲ್ಲರಿಗೂ ಪುನರ್ಜನ್ಮವು ಒಂದು ಕಾರಣ. ಜೈ ಆಂಜನೇಯ - ಧ್ರುವ ಸರ್ಜಾ" ಎಂದು ಬರೆದುಕೊಂಡಿದ್ದಾರೆ.

ನಟ ಧ್ರುವ ಸರ್ಜಾ ನಟನೆಯ ಮಾರ್ಟಿನ್
ಉದಯ್ ಕೆ ಮೆಹ್ತಾ ನಿರ್ಮಾಣದ 'ಮಾರ್ಟಿನ್' ಸಿನಿಮಾ ಕಳೆದೆರಡು ವರ್ಷಗಳ ಹಿಂದೆ ಸೆಟ್ಟೇರಿದ್ದು, ಬಹಳ ಅದ್ಧೂರಿಯಾಗಿ ಮೂಡಿ ಬರುತ್ತಿದೆ. 5 ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಸಿನಿಮಾದಲ್ಲಿ ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ.












Click it and Unblock the Notifications