Darshan Thoogudeepa: ದರ್ಶನ್ ನೋಡಲು ಬಿಜಿಎಸ್ ಆಸ್ಪತ್ರೆಯತ್ತ ಓಡೋಡಿ ಬಂದ ಅಭಿಮಾನಿಗಳ ಸಾಗರ
ಬೆಂಗಳೂರು, ಡಿಸೆಂಬರ್ 13: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿದ್ದ ನಟ ದರ್ಶನ್‌ಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ದರ್ಶನ್‌ಗೆ ಜಾಮೀನು ಸಿಗುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದ್ದು, ದರ್ಶನ್ ನಿವಾಸ ಹಾಗೂ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯತ್ತ ಅಭಿಮಾನಿಗಳು ದೌಡಾಯಿಸುತ್ತಿದ್ದಾರೆ.
ಸದ್ಯ ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯತ್ತ ದರ್ಶನ್ ತೂಗುದೀಪ್ ನೋಡಲು ಅಭಿಮಾನಿಗಳ ಸಾಗರ ಹರಿದು ಬರುತ್ತಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗುತ್ತಿದೆ. ಇತ್ತ ಆರ್‌ಆರ್ ನಗರದ ದರ್ಶನ್ ನಿವಾಸದತ್ತ ಕೂಡ ಅಭಿಮಾನಿಗಳು ಬರುತ್ತಿದ್ದು, ದರ್ಶನ್ ಹೆಸರಿನ ಮನೆಯ ನಾಮಫಲಕಕ್ಕೆ ಹೂವಿನ ಹಾರ ಹಾಕಿ ಸಂಭ್ರಮಿಸುತ್ತಿದ್ದಾರೆ. ಅಲ್ಲದೇ ಸ್ಥಳೀಯರಿಗೆ ಸಿಹಿ ಹಂಚುವ ಮೂಲಕ ತಮ್ಮ ಖುಷಿ ಹಂಚಿಕೊಳ್ಳುತ್ತಿದ್ದಾರೆ.

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನವಾಗಿದ್ದ ದರ್ಶನ್, ಪವಿತ್ರಾ ಗೌಡ ಮಾತ್ರವಲ್ಲದೇ ದರ್ಶನ್ ಸಹಚರರಾದ ಪ್ರದೋಶ್, ನಾಗರಾಜ್, ಜಗದೀಶ್, ಅನುಕುಮಾರ್, ಹಾಗೂ ಲಕ್ಷ್ಮಣ್‌ಗೂ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಅಲ್ಲದೇ ಈ ಹಿಂದೆ ಕೂಡ ಪ್ರಕರಣ ಸಂಬಂಧ ಬಂಧನವಾಗಿದ್ದ ಕೆಲವು ಆರೋಪಿಗಳು ಜಾಮೀನು ಪಡೆದು ಹೊರಬಂದಿದ್ದು, ಇದೀಗ ಈ ಕೊಲೆ ಪ್ರಕರಣದಲ್ಲಿ ಸಿಲುಕಿದ್ದ ಎಲ್ಲಾ ಆರೋಪಿಗಳಿಗೂ ಜಾಮೀನು ಸಿಕ್ಕಂತಾಗಿದೆ.
ದರ್ಶನ್ ಬಿಜಿಎಸ್ ಆಸ್ಪತ್ರೆ ಸೇರಿದ್ಯಾಕೆ..?
ಬೆಂಗಳೂರಿನ ಪರಪ್ಪನ ಅಗ್ರಹಾರ ಹಾಗೂ ಬಳ್ಳಾರಿ ಜೈಲಿನಲ್ಲಿ ಕೆಲವು ತಿಂಗಳು ಕಳೆದ ದರ್ಶನ್‌ಗೆ ತೀವ್ರ ಆರೋಗ್ಯ ಸಮಸ್ಯೆಗೆ ಕಾಡಿದ್ದು, ಅನಾರೋಗ್ಯ ಕಾರಣದ ಮೇಲೆ ಕರ್ನಾಟಕ ಹೈಕೋರ್ಟ್ ಆರು ವಾರಗಳ ಮಧ್ಯಂತರ ಜಾಮೀನು ನೀಡಿತ್ತು. ಬೆನ್ನು ನೋವಿನಿಂದ ಬಳಲುತ್ತಿದ್ದ ದರ್ಶನ್ ಸದ್ಯ ಬೆಂಗಳೂರು ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ದರ್ಶನ್ ಜೈಲಿನಲ್ಲಿರುವಾಗ ಅತಿಯಾದ ಬೆನ್ನು ನೋವು ಕಾಡಿದ್ದು, ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನು ಕೂಡ ನೀಡಲಾಗಿತ್ತು. ಹೀಗಿರುವಾಗ ಮಧ್ಯಂತರ ಜಾಮೀನಿಗೆ ಕೋರ್ಟ್ ನೀಡಿರುವ ದಿನಗಳು ಕಳೆಯುತ್ತಿದ್ದರೂ, ಇನ್ನೂ ಶಸ್ತ್ರಚಿಕಿತ್ಸೆ ಯಾಕೆ ಮಾಡಿಲ್ಲ ಎನ್ನುವ ಪ್ರಶ್ನೆ ಎಲ್ಲರಲಿತ್ತು. ಅಧಿಕ ರಕ್ತದೊತ್ತಡ ಇರುವ ಕಾರಣ ದರ್ಶನ್‌ಗೆ ಇನ್ನೂ ಶಸ್ತ್ರಚಿಕಿತ್ಸೆ ಮಾಡಿಸಿಲ್ಲ ಎಂದು ವೈದ್ಯರು ವರದಿ ನೀಡಿದ್ದಾರೆ ಎನ್ನಲಾಗಿದೆ. ಸದ್ಯ ಬೆಂಗಳೂರು ಬಿಜಿಎಸ್ ಆಸ್ಪತ್ರೆಯಲ್ಲಿ ಬಿಗಿ ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದರ್ಶನ್ ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಸದ್ಯ ದರ್ಶನ್‌ಗೆ ಜಾಮೀನು ಸಿಕ್ಕಿದ್ದು, ಕೂಡಲೇ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎನ್ನುವ ತಲೆ ನೋವು ದೂರಾಗಿದೆ.












Click it and Unblock the Notifications