ಪ್ರೇಮಕ್ಕೆ ಯಾವುದೇ ಮಿತಿ ಇಲ್ಲ: ನನ್ನ ಲವರ್ ನಿತಿನ್ ಎಂದು ಪರಿಚಯಿಸಿದ ಸರಿಗಮಪ ಸುಹಾನಾ
ಸರಿಗಮಪ ಕನ್ನಡ ರಿಯಾಲಿಟಿ ಶೋ ಖ್ಯಾತಿಯ ಸುಹಾನಾ ಸೈಯದ್ (Suhaana Syed) ತಮ್ಮ ಭಾವಿ ಪತಿಯನ್ನು ಪರಿಚಯಿಸಿದ್ದಾರೆ. ಸುಹಾನಾ ಅವರು ಅಂತರ್‌ಧರ್ಮೀಯ ವಿವಾಹಕ್ಕೆ ಸಾಕ್ಷಿಯಾಗುತ್ತಿದ್ದು, ತಮ್ಮ ಹುಡುಗನ ಫೋಟೋ ಹಂಚಿಕೊಂಡು ಪ್ರೀತಿ ವಿಚಾರವನ್ನು ರಿವೀಲ್ ಮಾಡಿದ್ದಾರೆ. ತನ್ನ ಬಹುಕಾಲದ ಗೆಳೆಯ ನಿತಿನ್ ಶಿವಾಂಶ್ ಜೊತೆಗೆ ಮದುವೆಯಾಗಲು ನಿರ್ಧರಿಸಿರುವುದಾಗಿ ಸುಹಾನಾ ಪರಿಚಯ ಮಾಡಿಕೊಟ್ಟಿದ್ದಾರೆ. ಪ್ರೇಮಕ್ಕೆ ಯಾವ ಮಿತಿ ಇಲ್ಲ ಎಂಬುದಕ್ಕೆ ನಾವೇ ಸಾಕ್ಷಿ ಎಂದು ಸುಹಾನಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
́́́'ಪ್ರತಿ ಜೀವಿಯ ಅನ್ವೇಷಣೆ ಪ್ರೇಮಕ್ಕಾಗಿಯೇ, ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು ಎಂದು ತಮ್ಮ ಪ್ರೀತಿಯ ವಿಚಾರವನ್ನು ಸಾಲುಗಳಲ್ಲಿ ವ್ಯಕ್ತಪಡಿಸಿದ್ದಾರೆ. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ಇದು ಬರಿ ನಮ್ಮ ಗುಟ್ಟಲ್ಲ. ನಮ್ಮ ಈ ಹೊಸ ಅಧ್ಯಾಯಕ್ಕೆ ನಿಮ್ಮ ಆಶೀರ್ವಾದವಿರಲಿ' ಎಂದು ಬರೆದುಕೊಂಡಿದ್ದಾರೆ.

'ಲೋಕವು ಬದಿಗಳನ್ನು ಆರಿಸಿಕೊಳ್ಳಲು ಕೇಳಿದಾಗ ಇದು ಪರಸ್ಪರ ಆಯ್ಕೆ ಮಾಡಿಕೊಂಡ ಎರಡು ಆತ್ಮಗಳ ಕಥೆ. ಇಂದು, ಇದು ಇನ್ನು ಮುಂದೆ ನಮ್ಮ ರಹಸ್ಯವಲ್ಲ. ಇದು ಸ್ನೇಹ ಮತ್ತು ಪ್ರೇಮಕಥೆಯಾಗಿದ್ದು, ಅದನ್ನು ನೋಡಲು ಅರ್ಹವಾಗಿದೆ. ನಮ್ಮ ಹೃದಯಗಳು ಪದಗಳನ್ನು ಮೀರಿದ ಭಾಷೆಯನ್ನು ಮಾತನಾಡಿವೆ. ಭಿನ್ನಾಭಿಪ್ರಾಯಗಳು ಸಂಧಿಸುವ ಸ್ಥಳಗಳಲ್ಲಿ ಅರಳಿದ ಶಾಂತ ಪ್ರೀತಿ' ಎಂದಿದ್ದಾರೆ.
ಸಂಪ್ರದಾಯಕ್ಕಿಂತ ದೊಡ್ಡದು
'ಪ್ರತಿ ಸವಾಲು, ಪ್ರತಿ ಸಂದೇಹ ಮತ್ತು ಪ್ರತಿ ಪಿಸುಗುಟ್ಟಿದ ಭಯದ ಮೂಲಕ, ನಾವು ಹಿಡಿದಿಟ್ಟುಕೊಂಡೆವು. ಏಕೆಂದರೆ ನಾವು ಹಂಚಿಕೊಳ್ಳುವುದು ಸಂಪ್ರದಾಯಕ್ಕಿಂತ ದೊಡ್ಡದು, ನಂಬಿಕೆಗಳಿಗಿಂತ ಆಳವಾಗಿದೆ ಮತ್ತು ನಮ್ಮ ಪ್ರಪಂಚಗಳ ಮೊತ್ತಕ್ಕಿಂತ ಹೆಚ್ಚು ಸುಂದರವಾಗಿದೆ. ಎರಡು ಆತ್ಮಗಳು, ಎರಡು ನಂಬಿಕೆಗಳು, ಒಂದು ಪ್ರೀತಿ. ನಮ್ಮ ನಂಬಿಕೆಗಳನ್ನು ಪರಸ್ಪರ ಸೇರುವಂತೆ ನಾವು ಎಂದಿಗೂ ಬದಲಾಯಿಸಬೇಕಾಗಿಲ್ಲ' ಎಂದು ತಮ್ಮ ಪ್ರೇಮಕಥೆ ಬಿಚ್ಚಿಟ್ಟಿದ್ದಾರೆ.
'ನಾವು ಗೌರವ, ತಿಳುವಳಿಕೆ ಮತ್ತು ಪ್ರೀತಿಯನ್ನು ನಮ್ಮ ಸಾಮಾನ್ಯ ನೆಲೆಯಾಗಿ ಆರಿಸಿಕೊಂಡೆವು. 16 ಸುಂದರ ವರ್ಷಗಳ ಕಾಲ ಸ್ನೇಹಿತರಾಗಿರುವುದರಿಂದ ಜೀವನಕ್ಕಾಗಿ ಪರಸ್ಪರ ಆಯ್ಕೆ ಮಾಡಿಕೊಳ್ಳುವವರೆಗೆ ತಲುಪಿದೆ. ನಿಮ್ಮೆಲ್ಲರ ಆಶೀರ್ವಾದಗಳು ಬೇಕು' ಎಂದು ಸುಹಾನಾ ಬರೆದುಕೊಂಡಿದ್ದಾರೆ.
ವಿವಾದದಲ್ಲಿ ಸಿಲುಕಿದ್ದ ಸುಹಾನಾ
ಜೀ ಕನ್ನಡ ವಾಹಿನಿಯ 'ಸರಿಗಮಪ' ರಿಯಾಲಿಟಿ ಶೋನಲ್ಲಿ ಸುಹಾನಾ ಸೈಯದ್ ಅವರ ಗಾಯನಕ್ಕೆ ಜನ ಮನಸೋತಿದ್ದರು. ಸುಹಾನಾ ಮುಸ್ಲಿಂ ಸಮುದಾಯದವರಾಗಿ ಹಿಜಾಬ್ ಧರಿಸಿ ಹಿಂದೂ ದೇವರನಾಮವಾದ "ಶ್ರೀಕಾರನೇ ಶ್ರೀನಿವಾಸನೇ" ಹಾಡು ಹಾಡಿದಕ್ಕಾಗಿ ವಿವಾದ ಸೃಷ್ಟಿಯಾಗಿತ್ತು. ಇದೇ ವಿಚಾರವಾಗಿ ಅವರು ಟ್ರೋಲ್ ಕೂಡ ಆಗಿದ್ದರು. ಆದರೆ ಸುಹಾನಾ ಅವರ ಪ್ರತಿಭೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಧಾರ್ಮಿಕ ಸೌಹಾರ್ದತೆಯನ್ನು ಉತ್ತೇಜಿಸಿದಕ್ಕಾಗಿ ಹೊಗಳಿದ್ದರು.












Click it and Unblock the Notifications