5 ಲಕ್ಷ ಪರಿಹಾರ ಕೊಟ್ಟ ಯಶ್, ತಮ್ಮ ಅಭಿಮಾನಿಗಳ ಕುಟುಂಬಕ್ಕೆ ನೆರವು!
ನಟ ಯಶ್ ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನ ಗಳಿಸಿದ್ದಾರೆ. ಅದರಲ್ಲೂ ಈ ನಟ ಕನ್ನಡ ನಾಡಿನಿಂದ ಬೆಳೆದು ಹೋದವರು ಎನ್ನುವುದೇ ಕನ್ನಡಿಗರ ಹೆಮ್ಮೆ. ಹೀಗಿದ್ದಾಗ ಯಶ್ ಹುಟ್ಟುಹಬ್ಬದ ದಿನ, ನಡೆಯಬಾರದ ಘಟನೆ ನಡೆದು ಹೋಗಿತ್ತು. ಅಭಿಮಾನಿಗಳು ಯಶ್ ಅವರ ಬ್ಯಾನರ್ ಕಟ್ಟುವಾಗ ಕರೆಂಟ್ ಶಾಕ್‌ನಿಂದ ಮೃತಪಟ್ಟಿದ್ದರು. ಇದೀಗ ಅವರ ಕುಟುಂಬಕ್ಕೆ ಯಶ್ ನೆರವಾಗಿದ್ದಾರೆ.
ಹೌದು ಯಶ್ ಹುಟ್ಟು ಹಬ್ಬದ ದಿನ ಬ್ಯಾನರ್ ಕಟ್ಟಲು ಹೋಗಿ ವಿದ್ಯುತ್ ಆಘಾತಕ್ಕೆ ಬಲಿಯಾದ ಅಭಿಮಾನಿಗಳ ಕುಟುಂಬಕ್ಕೆ ರಾಕಿಭಾಯ್ ಯಶ್ ತಲಾ ಐದು ಲಕ್ಷ ರೂಪಾಯಿ ನೀಡಿದ್ದರೆ. ಈ ಮೂಲಕ ಮಾತು ಉಳಿಸಿಕೊಂಡಿದ್ದಾರೆ. ಈ ಘಟನೆ ನಡೆದು 11 ದಿನವಾಗಿದ್ದು, ಇಂದು ಅವರ ಕುಟುಂಬಕ್ಕೆ ಐದು ಲಕ್ಷ ರೂಪಾಯಿ ಚೆಕ್ ತಲುಪುವಂತೆ ಮಾಡಿದ್ದಾರೆ ಕೆಜಿಎಫ್ ಸ್ಟಾರ್ ರಾಕಿ ಭಾಯ್. ಇನ್ನು ಮತ್ತೊಂದು ಕಡೆ ತಮ್ಮ ಮಕ್ಕಳನ್ನು ಕಳೆದುಕೊಂಡ ನೋವಿನಲ್ಲಿ ಯಶ್ ಅವರ ಫ್ಯಾನ್ಸ್ ಕುಟುಂಬ ಸದಸ್ಯರು ಕಣ್ಣೀರು ಹಾಕಿದ್ದಾರೆ. ಯಶ್‌ಗೆ ಧನ್ಯವಾದ ತಿಳಿಸಿದ್ದಾರೆ ಮೃತ ಅಭಿಮಾನಿಗಳ ಕುಟುಂಬ ಸದಸ್ಯರು.

2 ಎಕರೆ ಜಮೀನು ನೀಡಲು ಆಗ್ರಹ
ಒಂದು ಕಡೆ ಯಶ್ ಪರಿಹಾರ ನೀಡಿದ್ದರೆ, ಮತ್ತೊಂದು ಕಡೆ ಅಭಿಮಾನಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸರ್ಕಾರದ ಕಡೆಯಿಂದ ಕೂಡ 2 ಲಕ್ಷ ರೂಪಾಯಿ ಪರಿಹಾರನ ಘೋಷಣೆ ಮಾಡಲಾಗಿದೆ. ಮೂವರ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡುವಂತೆ ಲಕ್ಷ್ಮೇಶ್ವರ ಸೂರಣಗಿ ಗ್ರಾಮಸ್ಥರು ಆಗ್ರಹ ಮಾಡಿದ್ದಾರೆ. ಅಲ್ಲದೇ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಡಿ 2 ಎಕರೆ ಜಮೀನು ನೀಡಬೇಕು. ಘಟನಾ ಸ್ಥಳದಲ್ಲಿ ಮೃತರ ಪುತ್ಥಳಿ ನಿರ್ಮಿಸಬೇಕು. ಮುಂದೆ ಇಂತಹ ಅವಘಡಗಳು ಸಂಭವಿಸಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು.
ದುರಂತ ನಡೆದಿದ್ದು ಹೇಗೆ ಗೊತ್ತೆ?
ಲಕ್ಷ್ಮೇಶ್ವರದ ಸೂರಣಗಿ ಗ್ರಾಮದಲ್ಲಿ ಯಶ್ ಅವರ ಹುಟ್ಟುಹಬ್ಬ ಹಿನ್ನೆಲೆ ಬೃಹತ್ ಕಟೌಟ್‌ನ ಕಟ್ಟಲು ಹೋಗಿ ಅಭಿಮಾನಿಗಳು ಮೃತಪಟ್ಟಿದ್ರು. ವಿದ್ಯುತ್ ಸ್ಪರ್ಶದ ಪರಿಣಾಮ ಹನುಮಂತ ಹರಿಜನ್, ಮುರಳಿ ನಡುವಿನಮನಿ ಹಾಗೂ ನವೀನ್ ಗಾಜಿ ಸಾವನ್ನಪ್ಪಿದ್ದರು. ಘಟನೆ ವೇಳೆ, ಮಂಜುನಾಥ್, ಪ್ರಕಾಶ್ & ಹನುಮಂತ ಕೂಡ ಗಂಭೀರವಾಗಿ ಗಾಯಗೊಂಡು ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುದ್ದಿ ತಿಳಿದ ತಕ್ಷಣ ವಿದೇಶದಲ್ಲಿ ಇದ್ದ ನಟ ಯಶ್ ಅವರು, ತಕ್ಷಣವೇ ತಮ್ಮ ಫ್ಯಾನ್ಸ್ ಮೃತಪಟ್ಟಿದ್ದ ಗ್ರಾಮಕ್ಕೆ ಬಂದಿದ್ದರು. ಇದೀಗ, ಅಭಿಮಾನಿಗಳ ಕುಟುಂಬಕ್ಕೆ ಪರಿಹಾರದ ವ್ಯವಸ್ಥೆ ಮಾಡಿದ್ದಾರೆ.

ಮಧ್ಯರಾತ್ರಿ ನಡೆದಿದ್ದು ಭೀಕರ ದುರಂತ
ಅಂದಹಾಗೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬ ಅಂತಾ ಯಶ್ ಅವರ ಅಭಿಮಾನಿ ಬಳಗ ಫುಲ್ ಖುಷ್ ಆಗಿತ್ತು. ಅದೇ ರೀತಿ ವಿದ್ಯುತ್ ಸ್ಪರ್ಶದ ಪರಿಣಾಮ ಮೃತಪಟ್ಟಿದ್ದ ಹನುಮಂತ ಹರಿಜನ್, ಮುರಳಿ ನಡುವಿನಮನಿ ಮತ್ತು ನವೀನ್ ಗಾಜಿ ಕೂಡ ಸಂಭ್ರಮದಲ್ಲಿ ಹುಟ್ಟುಹಬ್ಬ ಆಚರಣೆಗೆ ತಯಾರಿ ನಡೆಸಿದ್ದರು. ಹೀಗಿದ್ದಾಗಲೆ ದುರಂತವೊಂದು ನಡೆದು ಹೋಗಿತ್ತು. ಈ ದುರಂತ ನಡೆದಿದ್ದು ಮಧ್ಯರಾತ್ರಿ ಎಂಬುದೇ ಮತ್ತೊಂದು ಬೇಸರದ ಸಂಗತಿ.
ಮಧ್ಯರಾತ್ರಿ 1 ಗಂಟೆ ವೇಳೆಗೆ ಫ್ಯಾನ್ಸ್ ಕಟೌಟ್ ಕಟ್ಟುವ ವೇಳೆ ಈ ದುರ್ಘಟನೆ ನಡೆದಿತ್ತು. ಇನ್ನ ಮಧ್ಯ ರಾತ್ರಿಯಲ್ಲಿ ಹತ್ತಾರು ಯುವಕರು ಸೇರಿಕೊಂಡು ತಮ್ಮ ನೆಚ್ಚಿನ ನಟನ ಕಟೌಟ್ ಕಟ್ಟಲು ಮುಂದಾಗಿದ್ದರು. ಆದರೆ, ರಾತ್ರಿ ಆಗಿದ್ದರಿಂದ ವಿದ್ಯುತ್ ತಂತಿ ಯುವಕರ ಗಮನಕ್ಕೆ ಬಂದಿಲ್ಲ. ಇದರಿಂದ ದುರ್ಘಟನೆ ಸಂಭವಿಸಿತ್ತು. ವಿಷಯ ತಿಳಿಯುತಿದ್ದಂತೆ ಯಶ್ ತಮ್ಮ ಅಭಿಮಾನಿಗಳ ಊರಿಗೆ ಓಡೋಡಿ ಬಂದ್ರು. ಗ್ರಾಮಕ್ಕೆ ಭೇಟಿ ನೀಡಿ ಮೃತ ಅಭಿಮಾನಿಗಳ ಕುಟುಂಬಕ್ಕು ಧೈರ್ಯ ಹೇಳಿದರು. ಆಸ್ಪತ್ರೆಗೆ ತೆರಳಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದರು. ಈಗ ಪರಿಹಾರವನ್ನು ನೀಡಿ ಮೃತ ಅಭಿಮಾನಿಗಳ ಕುಟುಂಬಕ್ಕೆ ನೆರವಾಗಿದ್ದಾರೆ.












Click it and Unblock the Notifications