Yash Birthday: ನಟ ಯಶ್ ಹುಟ್ಟುಹಬ್ಬಕ್ಕೆ ‘ಟಾಕ್ಸಿಕ್’ ಟೀಸರ್, ಸರ್‌ಪ್ರೈಸ್ ಕೊಡ್ತೀವಿ ಎಂದ ಚಿತ್ರತಂಡ
ನಟ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಹೊಸ ವರ್ಷದ ಆರಂಭದಲ್ಲೇ ಭರ್ಜರಿ ಖುಷಿ ಸಿಗಲಿದೆ. ನಟ ಯಶ್ ಅವರ ಹುಟ್ಟುಹಬ್ಬದ ಅಂಗವಾಗಿ ಅವರ ಬಹುನಿರೀಕ್ಷಿತ ಸಿನಿಮಾ 'ಟಾಕ್ಸಿಕ್' ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂಬ ಸುದ್ದಿ ಸಿನಿಪ್ರೇಮಿಗಳಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟ್ ಹಂಚಿಕೊಂಡಿದ್ದು, ಗುರುವಾರ ಬೆಳಿಗ್ಗೆ 10:10ಕ್ಕೆ ಸರ್‌ಪ್ರೈಸ್ ರಿವೀಲ್ ಆಗಲಿದೆ ಎಂದು ಅಪ್‌ಡೇಟ್ ನೀಡಿದೆ.
ಜನವರಿ 8ರಂದು ಯಶ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದು, ಈ ವಿಶೇಷ ದಿನವನ್ನು ಇನ್ನಷ್ಟು ಸ್ಮರಣೀಯವಾಗಿಸಲು ಚಿತ್ರತಂಡ 'ಟಾಕ್ಸಿಕ್' ಟೀಸರ್ ಅನ್ನು ಬಿಡುಗಡೆ ಮಾಡುವುದಾಗಿ ನಿರ್ಧರಿಸಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಹಾಗೂ ಲುಕ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಟೀಸರ್ ಕುರಿತು ಅಭಿಮಾನಿಗಳ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

'ಟಾಕ್ಸಿಕ್' ಸಿನಿಮಾ ಯಶ್ ಅವರ ಕೆರಿಯರ್‌ನ ಮತ್ತೊಂದು ಮಹತ್ವದ ಪ್ರಾಜೆಕ್ಟ್ ಆಗಿದ್ದು, ವಿಭಿನ್ನ ಕಥಾಹಂದರ, ಹೊಸ ಅವತಾರದಲ್ಲಿ ಯಶ್ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ. ಈ ಸಿನಿಮಾವನ್ನು ಅಂತರರಾಷ್ಟ್ರೀಯ ಮಟ್ಟದ ಪ್ರಸ್ತುತಿಯೊಂದಿಗೆ ನಿರ್ಮಿಸಲಾಗುತ್ತಿದ್ದು, ಯಶ್ ಅಭಿಮಾನಿಗಳಿಗೆ ಹೊಸ ಅನುಭವ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ಹಲವು ಭಾಗಗಳಲ್ಲಿ ಯಶ್ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧರಾಗಿದ್ದಾರೆ. ಬ್ಯಾನರ್, ಕಟೌಟ್‌ಗಳು, ವಿಶೇಷ ಶುಭಾಶಯ ಪೋಸ್ಟರ್‌ಗಳ ಮೂಲಕ ಯಶ್‌ರನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಟೀಸರ್ ಬಿಡುಗಡೆಯ ದಿನವೇ ಸಾಮಾಜಿಕ ಜಾಲತಾಣಗಳಲ್ಲಿ 'ಟಾಕ್ಸಿಕ್' ಟ್ರೆಂಡ್ ಆಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ. ಯಶ್ ಅವರ ಹುಟ್ಟುಹಬ್ಬದ ದಿನ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಟೀಸರ್, ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಲಿದೆ. ಅಭಿಮಾನಿಗಳು ಮಾತ್ರವಲ್ಲದೆ, ಕನ್ನಡ ಸಿನಿ ಪ್ರೇಕ್ಷಕರೂ ಈ ಟೀಸರ್‌ಗಾಗಿ ಕಾತರದಿಂದ ಕಾಯುತ್ತಿದ್ದಾರೆ.

ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಣೆ?
ಯಶ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಸಂಭ್ರಮದಿಂದ ಆಚರಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಸುದ್ದಿ ಹರಡಿದ್ದು, ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಮೂಡಿಸಿದೆ. ಕಳೆದ ಮೂರು ವರ್ಷಗಳಿಂದಲೂ ಯಶ್ ತಮ್ಮ ಹುಟ್ಟುಹಬ್ಬವನ್ನು ಫ್ಯಾನ್ಸ್ ಜೊತೆ ಆಚರಿಸಿಕೊಳ್ಳಲಿಲ್ಲ. ಫ್ಯಾನ್ಸ್‌ಗಾಗಿ ಮೊದಲೇ ಸಂದೇಶ ಹಂಚಿಕೊಳ್ಳುತ್ತಿದ್ದ ಅವರು ಇಲ್ಲಿವರೆಗೆ ಯಾವುದೇ ಪೋಸ್ಟ್ ಹಾಕಿಲ್ಲ. ಹೀಗಾಗಿ ಈ ಬಾರಿ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮಕ್ಕೆ ಮುಂದಾಗಬಹುದು ಎಂಬ ಚರ್ಚೆ ಸಿನಿವಲಯದಲ್ಲಿ ಜೋರಾಗಿದೆ.
ಈಗಾಗಲೇ ರಾಜ್ಯದ ಹಲವು ಕಡೆಗಳಲ್ಲಿ ಯಶ್ ಅಭಿಮಾನಿಗಳು ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದ್ದಾರೆ. ಈ ನಡುವೆ ಯಶ್ ಅವರು ಅಭಿಮಾನಿಗಳನ್ನು ನೇರವಾಗಿ ಭೇಟಿ ಮಾಡಿ, ಅವರೊಂದಿಗೆ ಹುಟ್ಟುಹಬ್ಬ ಹಂಚಿಕೊಳ್ಳುವ ಸಾಧ್ಯತೆ ಇದೆ. ಇದರಿಂದ ಯಶ್ ಅಭಿಮಾನಿಗಳು ಈ ಬಾರಿ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿ ನಿರೀಕ್ಷಿಸುತ್ತಿದ್ದಾರೆ. ಯಶ್ ಸದಾ ತಮ್ಮ ಯಶಸ್ಸಿಗೆ ಅಭಿಮಾನಿಗಳ ಬೆಂಬಲವೇ ಮುಖ್ಯ ಕಾರಣ ಎಂದು ಹೇಳುತ್ತಾ ಬಂದಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅಭಿಮಾನಿಗಳ ಪ್ರೀತಿಗೆ ಪ್ರತಿಯಾಗಿ ಈ ಬಾರಿ ಅವರು ನೇರವಾಗಿ ಅವರೊಂದಿಗೆ ಸಂಭ್ರಮ ಹಂಚಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.
ಆದರೆ ಈ ಕುರಿತು ಯಶ್ ಅಥವಾ ಅವರ ತಂಡದಿಂದ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಸುರಕ್ಷತೆ ಹಾಗೂ ವ್ಯವಸ್ಥೆಗಳ ದೃಷ್ಟಿಯಿಂದ ಅಂತಿಮ ತೀರ್ಮಾನವನ್ನು ಕೊನೆಯ ಕ್ಷಣದಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಕಿಂಗ್ ಸ್ಟಾರ್ ಯಶ್ ಈ ಬಾರಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುವರೇ ಎಂಬ ಕುತೂಹಲ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಅಭಿಮಾನಿಗಳು ಅಧಿಕೃತ ಘೋಷಣೆಗೆ ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications