ಇಬ್ಬರು ನಟಿಯರಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್; ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಜೈಲು ಹಾಗೂ ಇನ್ನಿತರೆ ಆರೋಪಿಗಳ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಕೆಯಾಗಿದೆ. ಈ ಚಾರ್ಜ್‌ಶೀಟ್‌ನಲ್ಲಿ ಅಚ್ಚರಿಯ ವಿಚಾರಗಳು ಒಂದೊಂದಾಗಿ ಹೊರಬರುತ್ತಿವೆ. ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದರು ಎನ್ನುವ ಕಾರಣಕ್ಕಾಗಿಯೇ ಇಷ್ಟೆಲ್ಲ ಅವಾಂತರ ನಡೆದಿದೆ ಎಂದು ಹೇಳಲಾಗಿದೆ. ಆದರೆ, ರೇಣುಕಾಸ್ವಾಮಿ ಅವರು ಕನ್ನಡದ ಖ್ಯಾತ ನಟಿಯರಿಗೂ ಅಶ್ಲೀಲ ಮೆಸೇಜ್ ಕಳಿಸಿದ್ದರು ಎಂದು ಹೇಳಲಾಗಿದೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಇನ್ನಿತರೆ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಈ ವಿಚಾರ ಹೊರಬಂದಿದೆಯಂತೆ. ರೇಣುಕಾಸ್ವಾಮಿ ತನ್ನ ನಕಲಿ ಅಕೌಂಟ್‌ನಿಂದ ಸ್ಯಾಂಡಲ್‌ವುಡ್‌ನ ಖ್ಯಾತ ನಟಿಯರಿಗೂ ಅಶ್ಲೀಲ ಮೆಸೇಜ್ ಮಾಡಿರುವುದನ್ನು ನೋಡಿದ್ದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ ಎನ್ನಲಾಗಿದೆ.

ರೇಣುಕಾಸ್ವಾಮಿ ಮೊಬೈಲ್ ಪಡೆದಿದ್ದ ಆರೋಪಿಗಳು ಈ ವೇಳೆ ಮೆಸೇಜ್‌ಗಳನ್ನು ನೋಡಿದ್ದರಂತೆ. ಇದರಲ್ಲಿ ಸ್ಯಾಂಡಲ್‌ವುಡ್ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೂ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದ ಎಂದು ಹೇಳಿಕೆ ನೀಡಿದ್ದಾರೆ.
ʼರೇಣುಕಾಸ್ವಾಮಿ ಮೊಬೈಲ್‌ನಲ್ಲಿ ನಾವು ನಟಿ ರಾಗಿಣಿ, ಶುಭಾ ಪೂಂಜಾ ಸೇರಿದಂತೆ ಅನೇಕ ನಟಿಯರಿಗೆ ಅಶ್ಲೀಲ ಮಸೇಜ್ ಕಳುಹಿಸಿರೋದನ್ನ ನೋಡಿದ್ದೇವೆʼ ಎಂದು ಆರೋಪಿಗಳು ಪೊಲೀಸರಿಗೆ ಮುಂದೆ ಹೇಳಿಕೆ ನೀಡಿದ್ದು, ಇದನ್ನೂ ಕೂಡ ಚಾರ್ಜ್‌ಶೀಟ್‌ನಲ್ಲೂ ದಾಖಲಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪವಿತ್ರಾಗೌಡ ಅವರಿಗೆ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದಲೇ ಆತನನ್ನು ದರ್ಶನ್ ಹಾಗೂ ಇನ್ನಿತರೆ ಆರೋಪಿಗಳು ಬೆಂಗಳೂರಿಗೆ ಕರೆ ತಂದು ಹಲ್ಲೆ ನಡೆಸಿ, ಕೊಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಈ ಅಶ್ಲೀಲ ಮೆಸೇಜ್‌ಗಳೇ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ.

ಇನ್ನು ಈ ಕೊಲೆ ಕೇಸ್‌ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿ ಎಲ್ಲಾ 17 ಆರೋಪಿಗಳಿಗೆ ಸೆಪ್ಟೆಂಬರ್ 12ರವರೆಗೆ ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆಯಾಗಿದೆ. ಇಂದು ನ್ಯಾಯಾಂಗ ಬಂಧನ ಅವಧಿ ಮುಕ್ತಾಯವಾದ ಕಾರಣ ಎಲ್ಲ 17 ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಎಲ್ಲ ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿ ನ್ಯಾಯಾಲಯ ಆದೇಶ ಹೊರಡಿಸಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ಎ2 ಆರೋಪಿ ನಟ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಉಳಿದ ಆರೋಪಿಗಳು ಮೈಸೂರು, ಬೆಳಗಾವಿಯ ಹಿಂಡಲಗಾ, ಶಿವಮೊಗ್ಗ ಮತ್ತು ತುಮಕೂರು ಜೈಲುಗಳಲ್ಲಿ ಪ್ರತ್ಯೇಕವಾಗಿದ್ದಾರೆ. ಇಂದು ಎಲ್ಲ ಆರೋಪಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದರು.
ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯಿತು. ಸರ್ಕಾರಿ ವಕೀಲ ಪ್ರಸನ್ನ ಕುಮಾರ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಥಮಿಕ ಸಾಕ್ಷ್ಯಾಧಾರಗಳನ್ನು ಸಲ್ಲಿಸಿದರು. ಪೆನ್‌ಡ್ರೈವ್, ಹಾರ್ಡ್ ಡಿಸ್ಕ್ ಸೇರಿದಂತೆ ಹಲವು ಸಾಕ್ಷಿಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದು, ನ್ಯಾಯಾಧೀಶರು ಈ ಸಾಕ್ಷಿಗಳನ್ನು ಪರಿಶೀಲನೆ ನಡೆಸಲಿದ್ದಾರೆ.












Click it and Unblock the Notifications