Puneeth Rajkumar: ಕಣ್ಣ ಮುಂದೆಯೇ ಹಾದು ಹೋಗಿದ್ದ ದೇವರು.. ಕಣ್ಣಿದ್ದೂ ಕುರುಡನಾದೆ!
ಪುನೀತ್ ರಾಜ್‌ಕುಮಾರ್ ಅನ್ನೋ ಹೆಸರು ಬರೀ ಕನ್ನಡಿಗರ ನೆಲದಲ್ಲಿ ಮಾತ್ರವಲ್ಲ, ಇಡೀ ಜಗತ್ತಿಗೇ ಹಬ್ಬಿಹೋಗಿದೆ. ಅದರಲ್ಲೂ ಕಳೆದ 2 ವರ್ಷದಲ್ಲಿ ಕನ್ನಡಿಗರ ಗುಣ & ಕೀರ್ತಿಯ ಸಿರಿಯನ್ನು ಜಗತ್ತಿಗೆ ಪಸರಿಸಲು ಪುನೀತ್ ರಾಜ್‌ಕುಮಾರ್ ಕೊಡುಗೆ ದೊಡ್ಡದಾಗಿದೆ. ತಮ್ಮ ಜೀವನದ ಹಾದಿ ಮುಗಿಸಿ ಹೋಗಿದ್ದರೂ, ಪುನೀತ್ ಕೋಟ್ಯಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಜರಾಮರ.
ನನಗೆ ಅಪ್ಪು ಸರ್ ಸಾವಿನ ಕುರಿತಾಗಿ ವೈಯಕ್ತಿಕವಾಗಿ ನೋವಿನ ಸಂಗತಿ ಒಂದಿದೆ. ನನ್ನ ಇಡೀ ಬದುಕಲ್ಲಿ ಮರೆಯಲಾಗದ ಸಂಗತಿ ಅದು. ಪುನೀತ್ ರಾಜ್‌ಕುಮಾರ್ ಅವರು ನಮ್ಮ & ನಿಮ್ಮನ್ನು ಬಿಟ್ಟು ಹೋಗುವ ಕೆಲವೇ ಗಂಟೆಗಳ ಹಿಂದೆ ನನ್ನ ಎದುರು ಇದ್ದರು! ಆದ್ರೆ ಆ ದೇವರ ಜೊತೆ ಒಮ್ಮೆಯಾದರೂ ಮಾತನಾಡುವ ಅವಕಾಶ ನನಗೆ ಸಿಗಲೇ ಇಲ್ಲ. ಇದು ನನ್ನ ಮನಸ್ಸಿಗೆ ಇಂದಿಗೂ ಇಂಚಿಂಚಾಗಿ ಕಾಡ್ತಿದೆ. ಹಾಗಾದರೆ ಅಪ್ಪು ಸರ್ ಕೊನೆಯುಸಿರು ಎಳೆದ ಹಿಂದಿನ ದಿನ ರಾತ್ರಿ ಏನಾಗಿತ್ತು ಗೊತ್ತಾ?

ಅದು 28 ಅಕ್ಟೋಬರ್, 2021ರ ರಾತ್ರಿ 8 ಗಂಟೆಯ ಸಮಯ, ನನ್ನ ಸ್ನೇಹಿತನೊಬ್ಬ ಕರೆ ಮಾಡಿ ಬೇಗ ಬಾ.. ಬೇಗ ಬಾ.. ಅಂತಿದ್ದ. ನಾನು ಹಿಂದೂ ಮುಂದೂ ನೋಡದೆ ಅಲ್ಲಿ ಹೋಗಿದ್ದೆ. ಅದು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ ಒಂದು. ಆ ಜಾಗದಲ್ಲಿ, ನಟ ಶಿವಣ್ಣ ಅಭಿನಯದ 'ಭಜರಂಗಿ-2' ಸಿನಿಮಾ ಬಿಡುಗಡೆಯ ಹಿಂದಿನ ದಿನವೇ ಪ್ರೀ-ರಿಲೀಸ್ ಇವೆಂಟ್ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ನಟ ಶಿವಣ್ಣ ಹಾಗೂ ಅವರ ಸಹೋದರ ಪುನೀತ್ ಇರಲಿದ್ದಾರೆ ಎಂಬ ಕಾರಣಕ್ಕೆ ನನ್ನ ಸ್ನೇಹಿತ ನನ್ನ ಕರೆದಿದ್ದ. ಹೀಗಾಗಿ ನಾನೂ ಖುಷಿಯಿಂದ ಓಡೋಡಿ ಹೋಗಿದ್ದೆ. ಆದರೆ ನನಗೆ ಗೊತ್ತಿರಲಿಲ್ಲ ಅಪ್ಪು ಮರುದಿನವೇ ಈ ಜಗತ್ತನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು.
ಅಪ್ಪು ಸಾವಿನ ಸಣ್ಣ ಸುಳಿವೂ ಇರಲಿಲ್ಲ
ಕನ್ನಡದ ನಂ. 1 ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ನನಗೆ ಇಂತಹ ಅವಕಾಶವು ಸಿಗುತ್ತಿರಲಿಲ್ಲ. ಯಾಕೆ ಅಂದ್ರೆ ನಾನು ಡೆಸ್ಕ್ ಅಂದ್ರೆ ಕಚೇರಿಯ ಕೆಲಸಕ್ಕೆ ಸೀಮಿತವಾಗಿದ್ದೆ. ಆದರೆ ಅದಕ್ಕೂ ಮೊದಲು ನಾನು ವರದಿಗಾರನಾಗಿ ಊರೂರು ಸುತ್ತುವಾಗ ಈ ರೀತಿಯಾಗಿ ಸೆಲೆಬ್ರಿಟಿ ಭೇಟಿ ಮಾಡುತ್ತಿದ್ದೆ. ಆ ಅವಕಾಶ ತಪ್ಪಿ 5 ವರ್ಷ ಆಗಿತ್ತು. ಹೀಗಿದ್ದಾಗ ಅಪ್ಪು ಸರ್ ನಮ್ಮನ್ನ ಬಿಟ್ಟು ಹೋಗುವ ಹಿಂದಿನ ದಿನ ನನಗೆ ಮತ್ತೆ ಸೆಲೆಬ್ರಿಟಿ ಭೇಟಿಗೆ ಅವಕಾಶ ಸಿಕ್ಕಿತ್ತು. ಹೀಗಾಗಿ ಓಡೋಡಿ ಹೋಗಿದ್ದೆ ನಾನು. ಆದರೆ ಅದೇ ಕೊನೆಯ ಬಾರಿಗೆ ನಾನು ಪುನೀತ್ ರಾಜ್‌ಕುಮಾರ್ ಅರ್ಥಾತ್ ನಮ್ಮೆಲ್ಲರಿಗೂ ದೇವರ ಸಮಾನರಾದ ಅಪ್ಪು ಅವರನ್ನ ಭೇಟಿ ಮಾಡುತ್ತಿದ್ದೇನೆ ಎಂಬ ಒಂದು ಸಣ್ಣ ಸುಳಿವು ಕೂಡ ಇರಲಿಲ್ಲ.
ಅಪ್ಪು ಸರ್ ಬಂದ್ರು.. ಅಪ್ಪು ಸರ್..
ನೋಡಿ ನಾವು ಪತ್ರಕರ್ತರೇ ಹೀಗೆ, ಕೆಲಸದ ಒತ್ತಡಗಳು ನಮ್ಮನ್ನು ವಾಸ್ತವ ಜಗತ್ತಿನಿಂದ ಕೆಲವು ಸಮಯ ದೂರ ಇಟ್ಟುಬಿಡುತ್ತವೆ. ಅದರಲ್ಲೂ ರಿಪೋರ್ಟರ್ ಆಗಿದ್ದ ನನ್ನಂತಹ ವ್ಯಕ್ತಿಯನ್ನು ಬರೋಬ್ಬರಿ 5 ವರ್ಷ ಕಾಲ ದಿಢೀರ್ ಕಚೇರಿ ಒಳಗೆ ಕೂಡಿ ಹಾಕಿದರೆ ಹೊರ ಪ್ರಪಂಚದಿಂದ ದೂರವಾಗಿ, ದಿಢೀರ್ ಮಂಕಾಗಿ ಬಿಡುತ್ತೇವೆ. ನನಗೂ ನ್ಯೂಸ್ ಚಾನೆಲ್ ಕೆಲಸ ಇದೇ ರೀತಿ ಆಗಿತ್ತು. ಆದರೆ ಅಲ್ಲಿಂದ ಹೊರ ಬರಲು ಅವಕಾಶ ಇರಲಿಲ್ಲ. ಹೀಗಾಗಿ ನಾನು ಅನಿವಾರ್ಯವಾಗಿ ಅಲ್ಲಿ ಕೆಲಸ ಮಾಡ್ತಿದ್ದೆ. ಹೀಗಿದ್ದಾಗ ಅಪ್ಪು ಸರ್ ಭಜರಂಗಿ-2 ಸಿನಿಮಾ ಪ್ರೀ-ರಿಲೀಸ್ ಇವೆಂಟ್ ಮುಗಿಸಿ ರಾತ್ರಿ ಸುಮಾರು 10 ಗಂಟೆಗೆ ಹೋಟೆಲ್ ಹೊರಗೆ ಬಂದರು. ಅದೇ ಸಮಯದಲ್ಲಿ ನಾನು ಹೊರಗಡೆ ಮಂಕಾಗಿ ನಿಂತಿದ್ದೆ.

ನಿಷ್ಕಲ್ಮಶ... ಮಗುವಿನಂತಹ ನಗು!
ನನ್ನ ಎದುರಿಗೆ ಬಂದ ಅಪ್ಪು ಸರ್, ಮೊದಲು ಮಾಡಿದ ಕೆಲಸ ಅವರ ಅಭಿಮಾನಿಗಳಿಗೆ ಸೆಲ್ಫಿ ಕೊಡುವುದು. ನೂರಾರು ಫ್ಯಾನ್ಸ್ ಅವರನ್ನ ತಕ್ಷಣ ಮುತ್ತಿಕೊಂಡರೂ, ಅಪ್ಪು ಸರ್ ಯಾರಿಗೂ ಬೇಸರ ಮಾಡಲಿಲ್ಲ. ತಮ್ಮ ಅಂಗರಕ್ಷಕರಿಗೆ ಸೂಚಿಸಿ ಅಲ್ಲೇ ನಿಂತು ಒಂದಷ್ಟು ಸಮಯ ಅಲ್ಲೇ ಇದ್ದು ಎಲ್ಲರಿಗೂ ಫೋಟೋ ಕೊಟ್ಟರು. ಆದ್ರೆ ಯಾವುದೋ ಬೇಸರದಲ್ಲಿ ಇದ್ದ ನನಗೆ ಅಪ್ಪು ಸರ್ ಜತೆ ಸೆಲ್ಫಿ ತೆಗೆಸಿಕೊಳ್ಳಬೇಕು ಅಂತಾ ಅನಿಸಲಿಲ್ಲ. ಅಲ್ಲಿ ಸುಮ್ನೆ ನಿಂತಿದ್ದ ನಾನು, ಪುನೀತ್ ಸರ್ ಅವರ ನಿಷ್ಕಲ್ಮಶ ಹಾಗೂ ಮಗುವಿನಂತಹ ನಗುವನ್ನು ನೋಡುತ್ತಾ ಇದ್ದೆ. ಹೀಗೆ ಸ್ವಲ್ಪ ಹೊತ್ತು ನಿಂತು ಅಲ್ಲಿಂದ ಹೊರಟರು ಅಪ್ಪು ಸರ್.
ಬೆಳಗ್ಗೆ ಎದ್ದಾಗ ನನಗೆ ಆಘಾತ!
ಅಂದು ಅಪ್ಪು ಸರ್ ಇವೆಂಟ್ ಮುಗಿಸಿ ಮನೆಗೆ ಹೋದರು, ನಂತರ ನಾವು ಅಲ್ಲಿಂದ ನೇರ ನಾನು ಆಗ ಕೆಲಸ ಮಾಡುತ್ತಿದ್ದ ಕನ್ನಡದ ನ್ಯೂಸ್ ಚಾನೆಲ್ ಒಂದಕ್ಕೆ ಹೋದೆ. ಆ ದಿನ ನನಗೆ ನೈಟ್ ಶಿಫ್ಟ್ ಇದ್ದ ಕಾರಣ, ಕೆಲಸ ಮುಗಿಸಿ ಬೆಳಗ್ಗೆ ಮನೆಗೆ ಬಂದು ಮಲಗಿದ್ದೆ. ಆ ಸಮಯದಲ್ಲೇ ನನ್ನ ಸ್ನೇಹಿತರೊಬ್ಬರು ಕರೆ ಮಾಡಿದ್ರು. ಆಗ ನಿದ್ದೆಗಣ್ಣಲ್ಲಿ ಕಾಲ್ ರಿಸೀವ್ ಮಾಡಿದ ನನಗೆ ನನ್ನ ಸ್ನೇಹಿತ ನನಗೆ ಕೇಳಿದ ಪ್ರಶ್ನೆ ಕೋಪ ತರಿಸಿತ್ತು. 'ಪುನೀತ್ ಅವರು ಸತ್ತೋದ್ರಂತೆ?' ಅಂತಾ ಪ್ರಶ್ನೆ ಕೇಳಿದ್ದ. ನಿದ್ದೆಗಣ್ಣಲ್ಲಿ ಇದ್ದ ನಾನು ಎದ್ದು ಕೂತು ಬೈದು ಫೋನ್ ಇಟ್ಟೆ. ಆದರೆ ಮತ್ತೆ ಆತ ಫೋನ್ ಮಾಡಿದ್ದ.
ಗುರೂ ನಿಂಗೆ ಯಾವನೋ ಸುಳ್ಳು ಹೇಳಿದ್ದಾನೆ!
ಹೌದು, ಮತ್ತೊಮ್ಮೆ ನನಗೆ ನನ್ನ ಸ್ನೇಹಿತ ಕರೆ ಮಾಡಿ ಅಪ್ಪು ಸರ್ ಸಾವಿನ ಬಗ್ಗೆ ಮತ್ತೆ ಮತ್ತೆ ಪ್ರಶ್ನೆ ಕೇಳುವಾಗ ಸರಿಯಾಗಿ ಕೋಪ ಬಂತು. ಆಗಲೇ ತುಂಬಾ ಕೋಪದಲ್ಲಿ, ನಮ್ಮ ಬೆಂಗಳೂರಿನ ಭಾಷೆ ಬಳಸಿ 'ಗುರೂ ನಿಂಗೆ ಯಾವನೋ ಸುಳ್ಳು ಹೇಳಿದ್ದಾನೆ.. ಸೈಲೆಂಟ್ ಆಗಿ ಫೋನ್ ಇಡು ಈಗ' ಅಂತಾ ಬೈದು ಫೋನ್ ಇಟ್ಟೆ. ಆದ್ರೆ ಅಲ್ಲಿ ನಿಜವಾಗೂ ಅಪ್ಪು ಸರ್ ನಮ್ಮನ್ನೆಲ್ಲ ಬಿಟ್ಟು ಹೋಗಿದ್ದರು. ಕೊನೆಗೆ ನನಗೆ ನಿದ್ದೆಯೇ ಬರಲಿಲ್ಲ, ಅನುಮಾನ ಬಂದು ಟಿವಿ ನೋಡಿದಾಗ ಗೊತ್ತಾಗಿದ್ದು ಪುನೀತ್ ರಾಜ್‌ಕುಮಾರ್ ಸರ್ ನಮ್ಮನ್ನು ಬಿಟ್ಟು ಹೋಗಿದ್ದಾರೆ ಎಂದು.

ನೈಟ್ ಶಿಫ್ಟ್ ಗುಂಗಿನಲ್ಲಿ ಬಿದ್ದ ಕೆಟ್ಟ ಕನಸು!
ಒಂದು ಕ್ಷಣ ಏನು ಮಾಡುವುದು ಗೊತ್ತಾಗಲೇ ಇಲ್ಲ, ರಾತ್ರಿ ತಾನೆ ನೋಡಿದ ವ್ಯಕ್ತಿ ಈಗ ಬದುಕಿಲ್ಲ. ಅದೂ ನಮ್ಮ ಬಾಲ್ಯಾದ ಕಾಲದಿಂದಲೂ ಹೀರೋ ಆಗಿ, ನಮಗೆಲ್ಲಾ ಆದರ್ಶ ವ್ಯಕ್ತಿಯಾಗಿದ್ದ ವ್ಯಕ್ತಿ ನಮ್ಮನ್ನು ಬಿಟ್ಟು ಹೋಗಿದ್ದಾರೆ. ನಾನು ಏನು ಮಾಡಲು ಸಾಧ್ಯ? ನೀವೆ ಹೇಳಿ. ಅತ್ತುಬಿಟ್ಟೆ, ಕಂಗಾಲಾಗಿ ಕುಳಿತೆ. ಯಾಕಂದ್ರೆ ಬರೀ ಹಾಲಿವುಡ್ ಸಿನಿಮಾಗಳ ಗುಂಗಲ್ಲಿ ಕಳೆದುಹೋಗುವ ನನಗೆ ಅಪ್ಪು ಅವರ 'ಬೆಟ್ಟದ ಹೂವು' ಅಂದ್ರೆ ಪ್ರಾಣ. ಇಡೀ ನನ್ನ ಬದುಕಿನಲ್ಲಿ 100ಕ್ಕೂ ಹೆಚ್ಚು ಬಾರಿ ಆ ಸಿನಿಮಾ ನೋಡಿದ್ದೆ. ಇಂಥ ಆದರ್ಶಪ್ರಾಯ ವ್ಯಕ್ತಿ ಸಾಯಲು ಹೇಗೆ ಸಾಧ್ಯ ದೇವರೇ? ಅದೂ ಇಷ್ಟು ಚಿಕ್ಕ ವಯಸ್ಸಿಗೆ? ಸಮಾಜಕ್ಕೆ ಈ ವ್ಯಕ್ತಿಯ ಅಗತ್ಯತೆ ತುಂಬಾ ಇದೆ, ನನಗೆ ನೈಟ್ ಶಿಫ್ಟ್ ಗುಂಗಿನಲ್ಲಿ ಬಿದ್ದ ಕೆಟ್ಟ ಕನಸು ಇದು ಅಂತಾ ನೀನೆ ಹೇಳು ಎನ್ನುತ್ತಾ ಮನಸ್ಸಿನಲ್ಲೇ ಒದ್ದಾಡದೊಡಗಿದೆ.
ಬಯಲಾಗಿತ್ತು ಅಪ್ಪು ಮಾಡಿದ್ದ ಸಮಾಜಮುಖಿ ಕಾರ್ಯ
ಸತ್ಯ ಹೇಳುತ್ತೇನೆ, ಕನ್ನಡ ಪತ್ರಕರ್ತನಾಗಿ ನನಗೆ 10 ವರ್ಷಗಳ ಅನುಭವ ಇದ್ದರೂ ಅಪ್ಪು ಮಾಡುತ್ತಿದ್ದ ಸಮಾಜಮುಖಿ ಕೆಲಸಗಳ ಬಗ್ಗೆ ಗೊತ್ತೇ ಇರಲಿಲ್ಲ. ಅಪ್ಪನಂತೆ ಮಗ ಕೂಡ ಎನ್ನುವ ಮಾತು ನಿಜವಾಗಿತ್ತು. ಡಾ. ರಾಜ್‌ಕುಮಾರ್ ಸಿನಿಮಾ ಕ್ಷೇತ್ರವನ್ನು ಬಿಟ್ಟು, ಈ ನಮ್ಮ ಕನ್ನಡ ನೆಲಕ್ಕಾಗಿ ಹೇಗೆಲ್ಲಾ ಹೋರಾಟ ನಡೆಸಿದ್ದರೋ. ಕನ್ನಡ ಶಾಲೆಗಳ ಉಳಿಸಿ, ಕನ್ನಡ ಮಕ್ಕಳ ಬೆಂಬಲಕ್ಕೆ ನಿಂತು, ಮತ್ತು ಕನ್ನಡಿಗರ ಮಕ್ಕಳ ವಿದ್ಯಾಭ್ಯಾಸಕ್ಕೆ ಹೇಗೆಲ್ಲಾ ನೆರವಾಗಿದ್ದರೋ. ಅದೇ ರೀತಿ ಅಪ್ಪು ಕೂಡ ಅಪ್ಪನ ಆದರ್ಶ ಪಾಲಿಸಿದ್ದರು.
ದೇವರ ಸ್ವರೂಪವಾದರು ಅಪ್ಪು ಸರ್..
ಅಪ್ಪು ಸರ್ ಎಷ್ಟು ಜನರಿಗೆ ಸಹಾಯ ಮಾಡಿದ್ದಾರೆ, ಈ ವ್ಯಕ್ತಿ ಅದೆಷ್ಟು ಮಕ್ಕಳ ಜೀವನ ರೂಪಿಸಿದ್ದಾರೆ. ತಾನು ದುಡಿದ ದುಡ್ಡನ್ನ ಹೇಗೆಲ್ಲ ಇಡೀ ಸಮಾಜಕ್ಕೆ ಕೊಟ್ಟಿದ್ದಾರೆ. ಜಾತಿ, ಧರ್ಮದ ಹಂಗು ಇಲ್ಲದೆ ಲೆಕ್ಕವಿಲ್ಲದಷ್ಟು ಹಣ ಹಂಚಿದ್ದಾರೆ ಎನ್ನುವುದು ಗೊತ್ತಾದ ಕ್ಷಣ ಆನಂದಬಾಷ್ಪ ನನ್ನ ಕಣ್ಣಲ್ಲಿ ಜಿನುಗಿತ್ತು. ಅಲ್ದೆ ಆ ಕ್ಷಣವೇ ಒಂದು ಹೆಮ್ಮೆ ಕೂಡ ನನ್ನ ಮನಸ್ಸಿನಲ್ಲಿ ಮೂಡಿತ್ತು. ಆ ಕ್ಷಣವೇ, ಅಪ್ಪು ಸರ್ ನನಗೆ ಹೀರೋ ಮಾತ್ರವಲ್ಲ ದೇವರ ಸ್ವರೂಪವಾದರು.

ಒಟ್ನಲ್ಲಿ ಅಪ್ಪು ಸರ್ ಇಂದು ನನ್ನ ಜೊತೆ ನಿಮ್ಮ ಜೊತೆ ಉಳಿದಿಲ್ಲ. ಆದ್ರೆ ಅವರು ಹಾಕಿ ಕೊಟ್ಟ ಆದರ್ಶ ಇಂದು ನಮಗೆಲ್ಲಾ ದಾರಿದೀಪ. ಸುಮಾರು 5 ವರ್ಷಗಳ ಕಾಲ ಒಂದೇ ಕಡೆ ನ್ಯೂಸ್ ಚಾನೆಲ್ ಮೂಲೆಯಲ್ಲಿ ಕೊಳೆಯುತ್ತಿದ್ದ ನನಗೆ ಅಪ್ಪು ಸರ್ ಅವರ ಅಕಾಲಿಕ ಮರಣದ ಬಳಿಕ ನೋವಿನ ಜೊತೆ ಅವರು ಮಾಡಿದ್ದ ಸಾಧನೆಗಳು ಸ್ಫೂರ್ತಿ ಕೊಟ್ಟಿದ್ದವು. ಹಾಗೇ ನನಗೆ ನಾನು ಮೊದಲಿನ ಮಾಲತೇಶನಾಗಿ ಮುನ್ನುಗ್ಗಲು ಬಲವನ್ನೂ ನೀಡಿತ್ತು.
ಕೊನೆಗೂ ನಾನು ಕೆಲಸ ಮಾಡುತ್ತಿದ್ದ ನ್ಯೂಸ್ ಚಾನೆಲ್ ಬಿಟ್ಟು ಹೊರಗೆ ಬಂದು ಸಿನಿಮಾ ಪತ್ರಕರ್ತನಾದೆ. ಅಂತಾರಾಷ್ಟ್ರೀಯ ಸುದ್ದಿ ವಿಭಾಗದಲ್ಲಿ ಪರಿಣಿತಿ ಇದ್ದ ನನಗೆ ಸಿನಿಮಾದ ವರದಿಗಾರನಾಗಿ ನೂರಾರು ಸಂದರ್ಶನ ನಡೆಸಲು ಇದೇ ಅಪ್ಪು ಸರ್ ಆದರ್ಶವಾಗಿದ್ದರು. ಹಾಗೇ ನಾನು ಸಂದರ್ಶನ ಮಾಡುವಾಗ, ಕನ್ನಡ, ತೆಲುಗು, ಹಿಂದಿಯ ನಟ-ನಟಿಯರ ಬಾಯಲ್ಲಿ ಅಪ್ಪು ಸರ್ ಸಮಾಜಮುಖಿ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಿದೆ. ಹೀಗೆ ಎಲ್ಲರೂ ನೀಡುತ್ತಿದ್ದ ಉತ್ತರ, ಒಬ್ಬೊಬ್ಬರ ಬಾಯಲ್ಲಿ ಅಪ್ಪು ಅವರ ಬಗ್ಗೆ ಮೂಡಿಬರುತ್ತಿದ್ದ ಆ ಅಭಿಪ್ರಾಯ ಕೇಳುವಾಗ ಮೈ ರೋಮಾಂಚನಾಗುತ್ತಿತ್ತು. ಹೀಗೆ ಅಪ್ಪು ಅವರು ದೇವರಾಗಿ ನಮ್ಮೆಲ್ಲರ ಎದೆ ಆಳದಲ್ಲಿ ಸಾವಿರಾರು ವರ್ಷ ಕಾಲ ಉಳಿಯಲಿದ್ದಾರೆ, ಹಾಗೇ ಮುಂದಿನ ಪೀಳಿಗೆಗೂ ಅಪ್ಪು ಆದರ್ಶವಾಗಲಿದ್ದಾರೆ. ಅಪ್ಪು ಸರ್.. ನೀವು ಅಜರಾಮರ..












Click it and Unblock the Notifications