ನಟಿ ರಾಗಿಣಿಗೆ ಇದೆಂಥಾ ಅವಮಾನ? ಸಂಜು ವೆಡ್ಸ್ ಗೀತಾ 2 ಚಿತ್ರತಂಡ ಹೀಗೆ ಮಾಡಿದ್ದೇಕೆ?
ಇತ್ತೀಚಿಗೆ ತೆರೆ ಕಂಡ ಶ್ರೀನಗರ ಕಿಟ್ಟಿ ಹಾಗೂ ರಚಿತಾ ರಾಮ್ ಅಭಿನಯದ ಸಂಜು ವೆಡ್ಸ್ ಗೀತಾ 2 ಚಿತ್ರತಂಡ ಕನ್ನಡದ ನಟಿ ರಾಗಿಣಿ ದ್ವಿವೇದಿಗೆ ಅವಮಾನ ಮಾಡಿದರಾ ಎನ್ನುವ ಪ್ರಶ್ನೆ ಉದ್ಭವವಾಗಿದೆ. ಸಂಜು ವೆಡ್ಸ್ ಗೀತಾ 2 ಚಿತ್ರದಲ್ಲಿ ನಟಿ ರಾಗಿಣಿ ದ್ವಿವೇದಿ ಇರುವ ದೃಶ್ಯಗಳನ್ನು ತೆಗೆದು ಹಾಕಲಾಗಿದೆ. ಇದು ಉದ್ದೇಶ ಪೂರಕನಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಈ ಬಗ್ಗೆ ಸ್ವತಃ ನಟಿ ರಾಗಿಣಿ ದ್ವಿವೇದಿ ಮಾತನಾಡಿದ್ದಾರೆ.
'ನಾನು ಇತ್ತೀಚಿಗೆ ಮಾಡಿದ ಪೂರ್ಣ ಪ್ರಮಾಣದ ಮೊದಲ ಸಿನಿಮಾ ಅಂದರೆ ಅದು ಸಂಜು ವೆಡ್ಸ್ ಗೀತಾ 2. ಆದರೆ ಯಾವುದೋ ಕಾರಣದಿಂದ ಸಿನಿಮಾದ ಕೆಲವು ದೃಶ್ಯಗಳನ್ನು ತೆಗೆದು ಹಾಕಲಾಗಿದೆ. ಕೆಲವು ದೃಶ್ಯಗಳು ಮಿಸ್ ಆಗಿದೆ. ಆ ಚಿತ್ರದಲ್ಲಿ ನನ್ನದು ಪ್ರಮುಖ ಪಾತ್ರ ಇತ್ತು. ಬರೀ ಒಂದು ಹಾಡಲ್ಲ, ನಾನು ನಟನೆ ಮಾಡಿದ ದೃಶ್ಯಗಳು ಇರಬೇಕಿತ್ತು. ನನಗೆ ನನ್ನ ದೃಶ್ಯ ತೆಗೆಯಲು ಕಾರಣ ಏನು ಅಂತಾ ಗೊತ್ತಿಲ್ಲ' ಎಂದರು.

'ಈ ವರ್ಷ ವಿವಿಧ ಭಾಷೆಯಲ್ಲಿ ನನ್ನ ಐದಾರು ಸಿನಿಮಾ ಬರುತ್ತಿದೆ. ನಿಮಗೆ ಯಾವುದಿಷ್ಟ ಅದನ್ನು ನೋಡಿ. ಕನ್ನಡ ಸಿನಿಮಾ ಮಾಡಲು ನನಗೆ ತುಂಬಾ ಇಷ್ಟ ಇದೆ. ಅದೇ ಉದ್ದೇಶದಿಂದ ನಾನು ಸಂಜು ವೆಡ್ಸ್ ಗೀತಾ 2 ಮಾಡಿದ್ದು, ತುಂಬಾ ಚೆನ್ನಾಗಿರುತ್ತದೆ ಅಂತಾ ಆ ಸಿನಿಮಾ ಒಪ್ಪಿಕೊಂಡು ಮಾಡಿದ್ದು. ಆದರೆ ಯಾರು ಮಾತು ಕೇಳಿದರೋ, ಏನು ಆಗಿದೆಯೋ ನನಗೆ ಗೊತ್ತಿಲ್ಲ. ನನಗೆ ಇದರಿಂದ ಬೇಸರ ಆಗಿದೆ' ಎಂದು ಹೇಳಿದರು.
'ಒಬ್ಬ ನಟಿಯಾಗಿ ಒಂದು ಸಿನಿಮಾಗೆ ಪ್ರೀತಿ ವಿಶ್ವಾಸದಿಂದ ಕೆಲಸ ಮಾಡಿರುತ್ತೇವೆ. ಆದರೆ ಆ ಪ್ರೀತಿ ವಿಶ್ವಾಸ ಉಳಿದಿಲ್ಲ ಅಂದರೆ ಆಗ ಖಂಡಿತಾ ಬೇಜಾರಾಗುತ್ತದೆ. ಆ ಚಿತ್ರದಿಂದ ನನ್ನ ತುಂಬಾ ದೃಶ್ಯಗಳನ್ನು ತೆಗೆದು ಹಾಕಲಾಗಿದೆ. ಬಹುಶಃ ರೀ-ರಿಲೀಸ್ ಮಾಡುತ್ತಿದ್ದಾರೆ ಅಂತಾ ಸುದ್ದಿ ಕೇಳಿದೆ. ಈಗ ಇಪ್ಪತ್ತು ನಿಮಿಷ ಸೇರಿಸುವುದಾರೆ, ಮೊದಲು ಇಪ್ಪತ್ತು ನಿಮಿಷ ಯಾಕೆ ತೆಗೆದು ಹಾಕಿದ್ರಿ' ಎಂದು ನಟಿ ರಾಗಿಣಿ ಸಂಜು ವೆಡ್ಸ್ ಗೀತಾ 2 ಚಿತ್ರತಂಡವನ್ನು ಪ್ರಶ್ನಿಸಿದ್ದಾರೆ.

'ಅದು ಒಂದು ಬಹುದೊಡ್ಡ ಪಾತ್ರವಾಗಿತ್ತು. ದೊಡ್ಡದಾಗಿ ಘೋಷಣೆ ಮಾಡಿ. ನಾನು ಸಿನಿಮಾದಲ್ಲಿ ಇದ್ದೀನಿ ಅಂತಾ ಹೇಳಿ. ನಾನಿಲ್ಲದಾಗ ಸಿನಿಮಾ ರಿಲೀಸ್ ಆಗಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತದೆ ಎನ್ನುವುದು ಸಹ ನನಗೆ ಗೊತ್ತಿರಲಿಲ್ಲ. ನನಗೆ ಸಿನಿಮಾ ತಂಡದ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ. ಪ್ರಮೋಷನ್‌ಗೂ ಕೂಡ ಕರೆದಿಲ್ಲ. ಇದು ಅನ್‌ಪ್ರೋಫೆಷನಲ್. ಎಲ್ಲದಕ್ಕಿಂತಾ ಹೆಚ್ಚಾಗಿ ಸಿನಿಮಾದ ಕಥೆ ಮುಖ್ಯ. ಅದನ್ನೇ ಅರ್ಥ ಮಾಡಿಕೊಂಡಿಲ್ಲ ಅಂದರೆ. ಈ ಕೆಟ್ಟ ಪ್ರಪಂಚದಲ್ಲಿ ನಾವೇ ಒಳ್ಳೆಯವರು ಅನಿಸಿಬಿಟ್ಟಿದೆ ನನಗೆ' ಎಂದು ಆರ್ ಕನ್ನಡ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಟಿ ರಾಗಿಣಿ ದ್ವಿವೇದಿ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications