Radhika Kumaraswamy: ತನಗೂ ಕೆಟ್ಟ ಅನುಭವ ಆಗಿದೆ; ಕ್ಯಾಸ್ಟಿಂಗ್ ಕೌಚ್ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?
ನಟಿ ರಾಧಿಕಾ ಕುಮಾರಸ್ವಾಮಿ ಹಲವು ಮಹಿಳಾ ಪ್ರಧಾನ ಸಿನಿಮಾಗಳ ಜೊತೆಗೆ, ಬೋಲ್ಡ್ ಹುಡುಗಿ ಪಾತ್ರಗಳಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳದೇ ಇದ್ದರೂ, ಸ್ಯಾಂಡಲ್‌ವುಡ್ ಜತೆಗೆ ನಂಟು ಇದ್ದೇ ಇದೆ. ಸಿನಿಮಾ ರಂಗದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ ಬಗ್ಗೆ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಮಲಯಾಳಂ ಸಿನಿಮಾರಂಗದಲ್ಲಿ ಶುರುವಾದ ಈ ಕೂಗು ಇದೀಗ ಸ್ಯಾಂಡಲ್‌ವುಡ್‌ಗೆ ತಟ್ಟಿದ್ದು, ಇಲ್ಲೂ ಕೂಡ ಚಿತ್ರರಂಗದಲ್ಲಿ ಮಹಿಳೆಯರ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ವರದಿ ತಯಾರಿಸಲು ಸಮಿತಿ ರಚಿಸಬೇಕು ಎಂದು ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೂ ಮನವಿ ಮಾಡಲಾಗಿದೆ.
ನಟಿ ರಾಧಿಕಾ ಕುಮಾರಸ್ವಾಮಿ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಚಿತ್ರೀಕರಣದ ವೇಳೆ ತಮಗಾದ ಕೆಟ್ಟ ಅನುಭವವೊಂದನ್ನು ಕೂಡ ಹಂಚಿಕೊಂಡಿದ್ದಾರೆ. ಚಿತ್ರರಂಗಕ್ಕೆ ತಾವು ಕಾಲಿಟ್ಟ ಆರಂಭದ ದಿನಗಳಲ್ಲಿ ನಡೆದಿದ್ದ ಕೆಟ್ಟ ಘಟನೆ ಬಗ್ಗೆ ಅವರು ಮಾತನಾಡಿದ್ದಾರೆ. ಸಿನಿಮಾದ ಶೂಟಿಂಗ್ ವೇಳೆ ಕಾಲಿಗೆ ಹಾಕುವ ಸ್ಟಾಕಿಂಗ್ಸ್ (ತೆಳುವಾದ ಬಟ್ಟೆ) ಹರಿದು ಹೋಗಿತ್ತು, ಬೇರೆಯದು ಕೊಡಿ ಎಂದು ಕೇಳಿದ್ದಕ್ಕೆ, ನಿನ್ನ ಮುಖಕ್ಕೆ ಅದು ಬೇರೆ ಬೇಕಾ ಎಂದು ನಿರ್ದೇಶಕ ಕೇವಲವಾಗಿ ಮಾತನಾಡಿದ್ದರು ಎಂದು ಹೇಳಿದ್ದಾರೆ.

ಲೈಂಗಿಕ ಕಿರುಕುಳದ ಅನುಭವ ಆಗಿಲ್ಲ
ತಮಗೆ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳದಂತಹ ಅನುಭವ ಆಗಿಲ್ಲ, ಆದರೆ ಬಟ್ಟೆ ವಿಚಾರದಲ್ಲಿ ನಿರ್ದೇಶಕ ಮಾಡಿದ ಅವಮಾನ ಒಂದು ಕೆಟ್ಟ ಘಟನೆ. ಚಿತ್ರರಂಗಕ್ಕೆ ಬರುವಾಗ ಜೀವನದಲ್ಲಿ ಏನಾದರೂ ಸಾಧಿಸಬೇಕು, ಯಶಸ್ಸು ಪಡೆಯಬೇಕು, ಹೆಸರು ಮಾಡಬೇಕು ಎನ್ನುವ ಆಸೆ ಇಟ್ಟುಕೊಂಡು ಬರುತ್ತಾರೆ. ಸಾಕಷ್ಟು ಆಸೆ ಇಟ್ಟುಕೊಂಡು ಬರುವ ಹೊಸಬರಿಗೆ ಅನೇಕ ಕೆಟ್ಟ ಅನುಭವಗಳು ಮನಸಿಗೆ ಘಾಸಿ ಮಾಡಿಬಿಡುತ್ತವೆ, ಅಂತಹ ತಪ್ಪುಗಳು ಆಗಬಾರದು. ಸಿನಿಮಾ ರಂಗಕ್ಕೆ ನಾನು ಬಂದಾಗ ಲೈಂಗಿಕ ಕಿರುಕುಳದಂತಹ ಘಟನೆ ಆಗಿಲ್ಲ, ಆದರೆ ನಮ್ಮ ಚಿತ್ರರಂಗದಲ್ಲಿ ಅಂತಹ ಘಟನೆಗಳು ನಡೆಯುತ್ತಿದ್ದರೆ ಅದನ್ನು ಮಾಡುತ್ತಿರುವವರಿಗೆ ಸರಿಯಾದ ಶಿಕ್ಷೆ ಕೊಡಿಸಲು ನಾವೆಲ್ಲಾ ಒಗ್ಗಟ್ಟಾಗಿ ಹೋರಾಡಬೇಕು, ಎಲ್ಲಿ ತಪ್ಪು ನಡೆಯುತ್ತಿದೆ ಅದನ್ನು ಅಲ್ಲಿ ನಿಲ್ಲಿಸಬೇಕು, ಚಿತ್ರರಂಗದಲ್ಲಿ ಮಹಿಳೆಯರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ಕೇರಳ ಸಿನಿಮಾ ರಂಗದಲ್ಲಿ ಸಿನಿಮಾ ನಟಿಯರು, ಸಹ ಕಲಾವಿದೆಯರ ಮೇಲೆ ಲೈಂಗಿಕ ದೌರ್ಜನ್ಯ ಎನ್ನುವ ಆಘಾತಕಾರಿ ಮಾಹಿತಿಯನ್ನು ಹೇಮಾ ಕಮಿಟಿ ವರದಿ ಬಹಿರಂಗಪಡಿಸಿದೆ. ಕನ್ನಡ ಸಿನಿಮಾರಂಗದಲ್ಲಿ ಕೂಡ ಇದೇ ರೀತಿ ಕಾಸ್ಟಿಂಗ್ ಕೌಚ್ ನಡೆಯುತ್ತಿದ್ದು, ಸಮಿತಿ ರಚನೆ ಮಾಡಿ ತನಿಖೆ ನಡೆಸಬೇಕು ಎಂದು 150ಕ್ಕೂ ಹೆಚ್ಚು ನಟ, ನಟಿಯರು ಸಹಿ ಮಾಡಿ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ. ಚಿತ್ರರಂಗದ ಮನವಿಗೆ ಸಿಎಂ ಸಿದ್ದರಾಮಯ್ಯ ಕೂಡ ಸ್ಪಂದಿಸಿದ್ದು ತನಿಖೆ ನಡೆಸಲು ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ.












Click it and Unblock the Notifications