Radhika Kumaraswamy: ಅಪ್ಪನ ಆಸೆಯನ್ನು ಮಗಳು ಈಡೇರಿಸುತ್ತಿದ್ದಾಳೆ!
ನಟಿ ರಾಧಿಕಾ ಕುಮಾರಸ್ವಾಮಿ ಚಿತ್ರರಂಗದಲ್ಲಿ ಮೊದಲಿನಂತೆ ಹೆಚ್ಚಾಗಿ ತೊಡಗಿಸಿಕೊಳ್ಳದೇ ಇದ್ದರೂ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಂತೂ ಆಗಿಲ್ಲ. ಸಿನಿಮಾ ನಂಟನ್ನು ಇಟ್ಟುಕೊಂಡೇ, ತಮ್ಮ ವೈಯಕ್ತಿತ ಬದುಕಿನ ಕಡೆಗೆ ಗಮನ ಕೊಡುತ್ತಿದ್ದಾರೆ. ಇತ್ತೀಚೆಗೆ ಟಿವಿ9 ಖಾಸಗಿ ವಾಹಿನಿಯಲ್ಲಿ ನಡೆದ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅವರು ಅನೇಕ ಆಸಕ್ತಿಕರ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಮಯ ಸಿಕ್ಕಾಗ ಏನು ಮಾಡುತ್ತಾರೆ ಎಂದು ಕೇಳಿದ ಪ್ರಶ್ನೆಗೆ ಉತ್ತರ ಕೊಟ್ಟಿರುವ ಅವರು, ಸಮಯ ಸಿಕ್ಕಾಗ ಕುಟುಂಬದ ಸದಸ್ಯರ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತೇನೆ ಎಂದು ಹೇಳಿದ್ದಾರೆ. ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯುತ್ತೇನೆ, ತಾಯಿ, ಮಗಳು, ಅಣ್ಣನ ಜೊತೆ ಇರಲು ಇಷ್ಟ. ಮಾಲ್ಡೀವ್ಸ್, ದುಬೈ ಸೇರಿದಂತೆ ಅನೇಕ ಕಡೆ ಪ್ರವಾಸ ಹೋಗುತ್ತೇವೆ ಎಂದಿದ್ದಾರೆ.

ಅಪ್ಪನ ಆಸೆ ಈಡೇರಿಸಲು ಮುಂದಾದ ಮಗಳು
ಮಗಳ ಕನಸಿನ ಬಗ್ಗೆ ಕೂಡ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ. ಅವಳ ಅಪ್ಪನಿಗೆ ಮಗಳನ್ನು ಟೆನಿಸ್ ಆಟಗಾರ್ತಿಯನ್ನಾಗಿ ಮಾಡುವ ಆಸೆ ಇತ್ತು, ಮಗಳು ಕೂಡ ಅಪ್ಪನ ಆಸೆಯನ್ನು ಈಡೇರಿಸಲು ಕೆಲಸ ಮಾಡುತ್ತಿದ್ದಾಳೆ. ಆಕೆ ಟೆನಿಸ್ ಅಭ್ಯಾಸ ಮಾಡುತ್ತಿದ್ದಾಳೆ, ನಾನು ಆಕೆ ಮೇಲೆ ಯಾವ ಒತ್ತಡ ಹೇರುತ್ತಿಲ್ಲ ಎಂದರು. ನನ್ನ ತಂದೆ ಕೂಡ ನನ್ನ ಮೇಲೆ ಎಂದಿಗೂ ಒತ್ತಡ ಹಾಕಿದವರಲ್ಲ, ನಾನು ಕೂಡ ನನ್ನಪ್ಪನ ಹಾಗೆ ಮಗಳ ಮೇಲೆ ಎಂದಿಗೂ ಯಾವ ವಿಚಾರಕ್ಕೂ ಒತ್ತಡ ಹಾಕುಬಾರದು ಎಂದು ತೀರ್ಮಾನಿಸಿದ್ದೇನೆ ಎಂದಿದ್ದಾರೆ.
ಇದನ್ನು ಹೊರತುಪಡಿಸಿ ಹಲವು ವಿಚಾರಗಳ ಬಗ್ಗೆ ಕೂಡ ರಾಧಿಕಾ ಕುಮಾರಸ್ವಾಮಿ ಮಾತನಾಡಿದ್ದಾರೆ. ನಟ ದರ್ಶನ್ ಬಂಧನ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರ ಜೊತೆ ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಎಲ್ಲರ ಜೊತೆ ಆತ್ಮೀಯವಾಗಿ ಮಾತನಾಡುವ ನಟ ಅವರು, ಅವರು ಹೀಗೆ ಮಾಡಿದ್ದಾರೆ ಎಂದು ಸುದ್ದಿ ಬಂದಾಗ ನಂಬಲು ಆಗಲಿಲ್ಲ. ಅವರ ವೈಯಕ್ತಿಕ ಬದುಕಿನಲ್ಲಿ ಏನಾಗಿರುತ್ತದೆ ಎನ್ನುವುದು ನಮಗೆ ಗೊತ್ತಿರುವುದಿಲ್ಲ, ಏನಾದರೂ ದರ್ಶನ್ ಕನ್ನಡ ಚಿತ್ರರಂಗಕ್ಕೆ ಬೇಕು ಎಂದಿದ್ದಾರೆ.
ಕ್ಯಾಸ್ಟಿಂಗ್ ವಿಚಾರದ ಬಗ್ಗೆ ಕೂಡ ಮಾತನಾಡಿ, ನನಗೆ ಎಂದಿಗೂ ಕ್ಯಾಸ್ಟಿಂಗ್ ಕೌಚ್‌ನ ಅನುಭವ ಆಗಿಲ್ಲ. ಯಾರು ಕೂಡ ನನ್ನ ಜೊತೆ ಹಾಗೆ ವರ್ತನೆ ಮಾಡಿಲ್ಲ. ಆದರೆ ಚಿತ್ರರಂಗಕ್ಕೆ ಬಂದ ಆರಂಭದ ದಿನದಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಕಾಲಿಗೆ ಹಾಕಿದ್ದ ಬಟ್ಟೆ ಹರಿದುಹೋದಾಗ ಬೇರೆಯದು ಕೊಡಿ ಎಂದಿದ್ದಕ್ಕೆ ನಿನ್ನ ಮುಖಕ್ಕೆ ಹೊಸದು ಬೇರೆ ಕೊಡಬೇಕಾ ಎಂದು ನಿರ್ದೇಶಕರು ಅವಮಾನ ಮಾಡಿದ್ದ ಘಟನೆಯನ್ನು ನೆನಪಿಸಿಕೊಂಡಿದ್ದಾರೆ.












Click it and Unblock the Notifications