'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಖ್ಯಾತಿಯ ಪದ್ದುಗೌಡ ವಿಧಿವಶ; 44ನೇ ವಯಸ್ಸಿಗೆ ಕಾಡಿತ್ತು ಆ ಗಂಭೀರ ಸಮಸ್ಯೆ
ಕನ್ನಡ ಕಿರುತೆರೆಯ ಇತಿಹಾಸದಲ್ಲೇ ಅತ್ಯಂತ ವಿಶಿಷ್ಟ ರಿಯಾಲಿಟಿ ಶೋ ಎನಿಸಿಕೊಂಡಿದ್ದ 'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಸೀಸನ್-2ರ ಮೂಲಕ ಕನ್ನಡಿಗರ ಹೃದಯ ಗೆದ್ದಿದ್ದ ಪದ್ಮನಾಭ ಕೆ.ಎಂ (ಪದ್ದುಗೌಡ) ಇನ್ನಿಲ್ಲ. ಕಳೆದ ಕೆಲವು ದಿನಗಳಿಂದ ಮೆದುಳಿನ ಗೆಡ್ಡಯ (Brain Tumor) ಸಮಸ್ಯೆಯಿಂದ ನರಳುತ್ತಿದ್ದ ಅವರು, ಚಿಕಿತ್ಸೆಗೆ ಸ್ಪಂದಿಸದೆ ಬೆಂಗಳೂರಿನ ಯಲಹಂಕದ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.
ಟಿವಿ ಪರದೆಯ ಮೇಲೆ ಕಠಿಣ ಸವಾಲುಗಳನ್ನು ಸಲೀಸಾಗಿ ಎದುರಿಸುತ್ತಿದ್ದ ಪದ್ದುಗೌಡ, ನಿಜ ಜೀವನದ ಆರೋಗ್ಯದ ಹೋರಾಟದಲ್ಲಿ ಸೋತು ಹೋಗಿದ್ದಾರೆ. ಇತ್ತೀಚೆಗಷ್ಟೇ ಅವರಿಗೆ ಬ್ರೈನ್ ಟ್ಯೂಮರ್ ಇರುವುದು ಪತ್ತೆಯಾಗಿತ್ತು. ವೈದ್ಯರು ಇವರ ಜೀವ ಉಳಿಸಲು ತೀವ್ರ ಪ್ರಯತ್ನ ನಡೆಸಿದರಾದರೂ, ವಿಧಿಯ ಆಟದ ಮುಂದೆ ಅದು ಸಾಧ್ಯವಾಗಲಿಲ್ಲ. ಕೇವಲ 44 ವರ್ಷಕ್ಕೆ ಈ ಪ್ರತಿಭೆ ಇಹಲೋಕ ತ್ಯಜಿಸಿರುವುದು ಕನ್ನಡ ಕಿರುತೆರೆ ಲೋಕಕ್ಕೆ ತುಂಬಲಾರದ ನಷ್ಟ ತಂದಿದೆ.

ಮಲ್ಟಿ-ಟ್ಯಾಲೆಂಟೆಡ್ ಸ್ಟಾರ್
'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಶೋನಲ್ಲಿ ತಮ್ಮ ಮುಗ್ಧತೆ ಹಾಗೂ ಸ್ಪರ್ಧಾತ್ಮಕ ಗುಣದಿಂದಲೇ ಗುರುತಿಸಿಕೊಂಡಿದ್ದ ಪದ್ದುಗೌಡ, ಕೇವಲ ಒಬ್ಬ ಸ್ಪರ್ಧಿಯಾಗಿ ಅಷ್ಟೇ ಉಳಿದಿರಲಿಲ್ಲ. ಗ್ಲಾಮರ್ ಜಗತ್ತಿನಲ್ಲಿ ಮಾಡೆಲ್ ಆಗಿ ಮಿಂಚಿದ್ದ ಅವರು, ವಾಹಿನಿಯೊಂದರಲ್ಲಿ ಆಂಕರ್ ಆಗಿ ಕೂಡ ಕೆಲಸ ಮಾಡಿದ್ದರು. ಚಿತ್ರರಂಗ ಹಾಗೂ ಟಿವಿ ರಂಗದ ಹಲವು ಗಣ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ತಮ್ಮ ಸ್ನೇಹಜೀವಿ ಸ್ವಭಾವದಿಂದಲೇ ಎಲ್ಲರಿಗೂ ಹತ್ತಿರವಾಗಿದ್ದರು.
ಅನಾಥವಾಯ್ತು ಹಸನ್ಮುಖಿ ಸಂಸಾರ
ಪದ್ದುಗೌಡ ಅವರ ಹಠಾತ್ ನಿಧನದಿಂದ ಅವರ ಪತ್ನಿ ಅಶ್ವಿನಿ ಮತ್ತು ಪುತ್ರಿ ರಿದ್ವಿನ ಒಂಟಿಯಾಗಿದ್ದಾರೆ. ಆಸರೆಯಾಗಿದ್ದ ಯಜಮಾನನನ್ನು ಕಳೆದುಕೊಂಡು ಇಡೀ ಕುಟುಂಬ ಕಣ್ಣೀರಿನಲ್ಲಿ ಮುಳುಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕಿರುತೆರೆಯ ನಟ-ನಟಿಯರು ಹಾಗೂ ಅವರ ಅಸಂಖ್ಯಾತ ಅಭಿಮಾನಿಗಳು ಪದ್ದುಗೌಡ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದ್ದಾರೆ.
'ಪ್ಯಾಟೆ ಮಂದಿ ಕಾಡಿಗೆ ಬಂದ್ರು' ಇದು ಕನ್ನಡ ಕಿರುತೆರೆಯಲ್ಲೇ ಅತ್ಯಂತ ಯಶಸ್ವಿಯಾದ ಸಾಹಸ ಆಧಾರಿತ ರಿಯಾಲಿಟಿ ಶೋ ಆಗಿತ್ತು. ನಗರದ ಐಷಾರಾಮಿ ಜೀವನಕ್ಕೆ ಒಗ್ಗಿಕೊಂಡಿರುವ ಹುಡುಗ-ಹುಡುಗಿಯರನ್ನು ಕಾಡಿಗೆ ಕರೆದೊಯ್ದು, ಅಲ್ಲಿ ಯಾವುದೇ ಆಧುನಿಕ ಸೌಲಭ್ಯಗಳಿಲ್ಲದೆ ಬದುಕುಳಿಯುವ ಸವಾಲನ್ನು ನೀಡಲಾಗುತ್ತಿತ್ತು. ಪದ್ದುಗೌಡ ಅವರು ಭಾಗವಹಿಸಿದ್ದ ಸೀಸನ್ 2 ಅತ್ಯಂತ ಜನಪ್ರಿಯತೆ ಗಳಿಸಿತ್ತು. ಕಾಡಿನ ಕಠಿಣ ಸನ್ನಿವೇಶಗಳಲ್ಲೂ ಪದ್ದುಗೌಡ ಅವರು ತೋರುತ್ತಿದ್ದ ತಾಳ್ಮೆ ಮತ್ತು ಹಸನ್ಮುಖಿ ನಡೆ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು.
ಕುಟುಂಬದ ಮೂಲಗಳ ಪ್ರಕಾರ, ಕೆಲವು ತಿಂಗಳುಗಳ ಹಿಂದೆ ಪದ್ದುಗೌಡ ಅವರಿಗೆ ತಪಾಸಣೆ ನಡೆಸಿದಾಗ ಅದು ಪ್ರಾಥಮಿಕ ಹಂತದ ಬ್ರೈನ್ ಟ್ಯೂಮರ್ ಎಂದು ತಿಳಿದುಬಂದಿತ್ತು. ಆರಂಭದಲ್ಲಿ ಧೈರ್ಯವಾಗಿ ಚಿಕಿತ್ಸೆ ಪಡೆದಿದ್ದರಾದರೂ, ಇತ್ತೀಚಿನ ದಿನಗಳಲ್ಲಿ ಅವರ ಆರೋಗ್ಯ ಸ್ಥಿತಿ ತೀವ್ರವಾಗಿ ಕ್ಷೀಣಿಸಿತ್ತು. ಯಲಹಂಕದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದ್ದರೂ, ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಳೆಯ ಶೋಗಳ ವಿಡಿಯೋ ಕ್ಲಿಪ್ಗಳನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳು ತಮ್ಮ ನೆಚ್ಚಿನ ಸ್ಪರ್ಧಿಗೆ ಭಾವಪೂರ್ಣ ವಿದಾಯ ಹೇಳುತ್ತಿದ್ದಾರೆ.













Click it and Unblock the Notifications