Puneeth Rajkumar: ಮಹಾಕುಂಭ ಮೇಳ ತ್ರಿವೇಣಿ ಸಂಗಮದಲ್ಲಿ ಅಪ್ಪು ಫೋಟೋದೊಂದಿಗೆ ಮಿಂದೆದ್ದ ಅಭಿಮಾನಿ
ಪವರ್‌ಸ್ಟಾರ್, ಚಂದನವನದ ಚಂದದ ವ್ಯಕ್ತಿ, ಅಭಿಮಾನಿಗಳ ಅಪ್ಪು, ದೊಡ್ಮನೆಯ ಮುದ್ದಿನ ಕುಡಿ ಪುನೀತ್ ರಾಜಕುಮಾರ್. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮೇರು ನಟ. ಲಕ್ಷಾಂತರ ಅಭಿಮಾನಿಗಳ ನೆಚ್ಚಿನ ನಟ ಅಪ್ಪು ಇಹಲೋಕ ತ್ಯಜಿಸಿ ನಾಲ್ಕು ವರ್ಷ ಕಳೆದು ಹೋಗಿವೆ. ಆದರೂ ಕೂಡ ಅಪ್ಪು ಅಭಿಮಾನಿಗಳ ಮನದಲ್ಲಿ ಅಜಾರಾಮರರಾಗಿದ್ದಾರೆ. ಅಪ್ಪು ಅವರ ಅಪ್ಪಿಗೆ, ಮುದ್ದಾದ ಮಾತು, ನಗು ಮುಖವನ್ನು ಅಭಿಮಾನಿಗಳು ಇಂದಿಗೂ ಮರೆತಿಲ್ಲ. ಅದಕ್ಕೆ ಸಾಕ್ಷಿಯಾಗಿದ್ದು ಮಹಾಕುಂಭ ಮೇಳ.
ಹೌದು... ಪುನೀತ್ ರಾಜಕುಮಾರ್ ಮಹಾಕುಂಭ ಮೇಳದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿದ್ದಾರೆ. ಮೂರು ನದಿಗಳು ಸೇರುವ ಪವಿತ್ರ ಸಂಗಮ ಕ್ಷೇತ್ರದಲ್ಲಿ ಅಪ್ಪು ಮಿಂದೆದ್ದಿದ್ದಾರೆ. ಈ ದೃಶ್ಯ ಕಂಡು ಇಡೀ ಕರುನಾಡ ಜನ ಕಂಬಿನಿ ಬಿಡಿದಿದ್ದಾರೆ. ಅಪ್ಪು ತಮ್ಮ ಅಭಿಮಾನಿಗಳನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ. ಅವರು ಅಭಿಮಾನಿಗಳ ಮನಸ್ಸಿನಲ್ಲಿ ಆಳವಾಗಿ ಬೇರೂರಿದ್ದಾರೆ ಎನ್ನೋದಕ್ಕೆ ಈ ಒಂದು ದೃಶ್ಯ ಸಾಕ್ಷಿಯಾಗಿದೆ.

ಉತ್ತರಪ್ರದೇಶದ ಪ್ರಯಾಗ್‌ರಾಜ್‌ನ ಮಹಾಕುಂಭ ಮೇಳದಲ್ಲಿ ಅಭಿಮಾನಿಯೊಬ್ಬರು ಪವರ್‌ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೋಟೋ ಹಿಡಿದು ತ್ರಿವೇಣಿ ಸಂಗಮದಲ್ಲಿ ಮಿಂದೆದ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಇದನ್ನು ಕಂಡು ಅಪ್ಪು ಅವರ ಲಕ್ಷಾಂತರ ಜನ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ನಿಜಕ್ಕೂ ಇದೊಂದು ಹೃದಯಸ್ಪರ್ಶಿ ಘಟನೆ ಅಂದರೆ ತಪ್ಪಾಗಲಾರದು.
ಅಪ್ಪು ಸಾವು ನಿಜಕ್ಕೂ ಅಘಾತ ಹಾಗೂ ಅಚ್ಚರಿ. ಇಡೀ ಕನ್ನಡಿಗರ ಹೃದಯ ಒಡೆದು ಹೋದ ಸಂದರ್ಭ. ಯಾರೂ ಕೂಡ ನಿರೀಕ್ಷೆ ಮಾಡಿರದ ಕರಾಳ ದಿನ. 29 ಅಕ್ಟೋಬರ್ 2021ರಂದು ನಟ ಪುನೀತ್ ರಾಜಕುಮಾರ್ ತಮ್ಮ 46ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದರು. ಕನ್ನಡದ ಅದ್ಭುತ ನಟ ಅಪ್ಪು ಅವರನ್ನು ಕಳೆದುಕೊಂಡು ಇಡೀ ಕರುನಾಡ ಜನ ಮನೆ ಮಗನನ್ನು ಕಳೆದುಕೊಂಡಷ್ಟು ನೋವನ್ನು ಅನುಭವಿಸಿದೆ.

ಕರ್ನಾಟಕ ಮಾತ್ರವಲ್ಲದೆ ದೇಶದ ಇತರ ರಾಜ್ಯಗಳಿಂದಲೂ ಸ್ಟಾರ್ ನಟ-ನಟಿಯರು, ಸಿನಿಮಾ ರಂಗದ ಗಣ್ಯವ್ಯಕ್ತಿಗಳು ಪುನೀತ್ ರಾಜಕುಮಾರ್ ಅವರ ಅಗಲಿಕೆಗೆ ಕಣ್ಣೀರು ಹಾಕಿದ್ದರು. ಅಪ್ಪು ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ರಾಜ್ಯಗಳ ಸಿನಿ ತಾರೆಯರೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು.
ಹೀಗೆ ಅಪ್ಪು ಸಿನಿಮಾದಲ್ಲಿ ಮಾತ್ರ ಅಲ್ಲ ನಿಜಜೀವನದಲ್ಲೂ ಇತರರಿಗೆ ಮಾದರಿಯಾಗಿದ್ದರು. ಅವರ ಜೀವನ ಶೈಲಿಯನ್ನು ಹಲವಾರು ಜನ ಅಭಿಮಾನಿಗಳು ಅನುಸರಿಸುತ್ತಿದ್ದರು. ಮತ್ತೊಂದು ವಿಚಾರ ಅಂದರೆ ತಾವಾಯ್ತು ತಮ್ಮ ಸಿನಿಮಾ ಆಯ್ತು ಅಂತ ಪುನೀತ್ ಇದ್ದವರೇ ಅಲ್ಲ. ತಮ್ಮ ಮುಂದೆ ಕಷ್ಟ ಅಂತ ಬಂದವರಿಗೆಲ್ಲಾ ಸಹಾಯ ಹಸ್ತಚಾಚಿದವರು. ತಮ್ಮ ಕೈಲಾದಷ್ಟು ಸಹಾಯ ಮಾಡಿಕೊಂಡು ಕಷ್ಟದ ಸಮಯದಲ್ಲಿ ಜನರಿಗೆ ಹತ್ತಿರವಾಗಿದ್ದರು ಅಪ್ಪು.
ಡಾ. ರಾಜ್‌ಕುಮಾರ್ ಅವರ ಮುದ್ದಿನ ಮಗ ಅಪ್ಪು ತಂದೆಯಂತೆ ಬಾಳಿ ಬದುಕಿದವರು. ಆದರೆ ಅವರು ಇಷ್ಟು ಬೇಗ ಅಗಲುತ್ತಾರೆ ಅನ್ನೋದನ್ನು ಯಾರೂ ಕೂಡ ಊಹಿಸಿರಲಿಲ್ಲ. ಅಪ್ಪು ಇಲ್ಲದನ್ನು ಯಾರೂ ಕೂಡ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅಪ್ಪು ಬದುಕಿದ್ದರೆ ಮಹಾಕುಂಭ ಮೇಳದ ಪವಿತ್ರ ನದಿಯಲ್ಲಿ ಸ್ನಾನ ಮಾಡುತ್ತಿದ್ದರೋ ಇಲ್ವೋ ಗೊತ್ತಿಲ್ಲ. ಆದರೆ ಅಪ್ಪು ಅವರನ್ನು ಹೃದಯದಲ್ಲಿ ಇಟ್ಟುಕೊಂಡು ಪೂಜಿಸುವ ಅಭಿಮಾನಿಯೊಬ್ಬರು ತ್ರಿವೇಣಿ ಸಂಗಮದಲ್ಲಿ ಅವರ ಫೋಟೋ ಹಿಡಿದು ಮಿಂದೆದ್ದಿದ್ದಾರೆ. ಈ ದೃಶ್ಯ ನಿಜಕ್ಕೂ ಅಭಿಮಾನಿಗಳ ಕಣ್ಣಲ್ಲಿ ನೀರು ತರಿಸಿದೆ.












Click it and Unblock the Notifications