ತೊಡೆತಟ್ಟಿದ ‘ಡಿ-ಬಾಸ್’ ದರ್ಶನ್ VS ಮೀಸೆ ತಿರುವಿದ ಉಮಾಪತಿ!
ಫ್ಯಾನ್ಸ್ ಪಾಲಿನ 'ಡಿ-ಬಾಸ್' ದರ್ಶನ್ ಅವರು ಇಂದು ಉಮಾಪತಿ ಶ್ರೀನಿವಾಸ್ ವಿರುದ್ಧದ ಹೇಳಿಕೆ ಮೂಲಕ ದೊಡ್ಡ ಸದ್ದು ಮಾಡುತ್ತಿದ್ದಾರೆ. 'ಕಾಟೇರ' ಸಿನಿಮಾ 50 ದಿನ ಪೂರೈಸಿದ ಹಿನ್ನೆಲೆ ನಡೆದ ಕಾರ್ಯಕ್ರಮದಲ್ಲಿ, ಉಮಾಪತಿ ಶ್ರೀನಿವಾಸ್ ಗೌಡ ಹೆಸರನ್ನು ಹೇಳದೆಯೇ ನಟ ದರ್ಶನ್ ಅವರು 'ತಗಡು' ಅಂತಾ ಪದ ಬಳಕೆಯನ್ನ ಮಾಡಿದ್ದರು. ದರ್ಶನ್ ಅವರ ಹೇಳಿಕೆಗೆ ಇದೀಗ ನಿರ್ಮಾಪಕ ಉಮಾಪತಿ ಗೌಡ ಖಡಕ್ ತಿರುಗೇಟು ನೀಡಿದ್ದಾರೆ. ಹೀಗಾಗಿ ಇವರಿಬ್ಬರ ಸಂಬಂಧವೂ ಮತ್ತಷ್ಟು ಹಳಸಿದ ಹಪ್ಪಳ ಆಗೋಗಿದೆ. ಹಾಗಾದರೆ ಉಮಾಪತಿ ಹೇಳಿದ್ದೇನು?
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ವಿರುದ್ಧ ಗರಂ ಆಗಿದ್ದ ನಟ ದರ್ಶನ್ ಅವರು ಇಂದು ನೇರ ವಾಗ್ದಾಳಿ ನಡೆಸಿದ್ದರು. 'ಅಯ್ಯೋ ತಗಡೇ ರಾಬರ್ಟ್ ಕಥೆ ನಿನಗೆ ಕೊಟ್ಟಿದ್ದು ನಾವು. ಹಾಗಾದರೆ ಇಂಥ ಒಳ್ಳೆ ಕಥೆ ಮತ್ತೆ ಯಾಕ್ ಬಿಟ್ಟೆ ನೀನು?' ಅಂತಾ ದರ್ಶನ್ ಗುಡುಗಿದ್ದರು. ಹೀಗೆ ಕಾಟೇರ ಕಥೆ ಬಿಟ್ಟು ಕೊಟ್ಟಿದ್ದು ಯಾಕೆ? ಅಂತಾನು ನಿರ್ಮಾಪಕ ಉಮಾಪತಿಗೆ ಪ್ರಶ್ನೆ ಮಾಡಿದ್ದಾರೆ ನಟ ದರ್ಶನ್. ತಮ್ಮ ಮಾತು ಮುಂದುವರಿಸಿದ್ದ ದರ್ಶನ್ 'ಕೊಟ್ಟಿದ್ದು ಮಾಡಿದ್ದನ್ನ ಹೇಳಬಾರದು ಒಂದ್ಸಲ ಆಗಿರೋ ಘಟನೆಯಿಂದ ಬುದ್ದಿ ಕಲಿತಿಲ್ಲ. ಇಂತಹ ಒಳ್ಳೆ ಕಥೆ ಯಾಕೆ ಬಿಟ್ಟೆ ನೀನು.? ನಿನ್ನ ಜಡ್ಜ್‌ಮೆಂಟ್ ಚೆನ್ನಾಗಿದೆ, ಬಟ್ ಯಾಕೆ ಈ ಕಥೆ ಬಿಟ್ಟಿದ್ದು? ಕಾಟೇರ ಟೈಟಲ್ ಕೊಟ್ಟಿದ್ದೇ ನಾನು' ಅಂತಾ ದರ್ಶನ್ ಹೇಳಿದ್ದರು. ಇದಕ್ಕೆ ಉಮಾಪತಿ ಉತ್ತರ ಹೇಗಿತ್ತು ಗೊತ್ತೆ?

ಇವರ ಮನೆ ಉದ್ಧಾರ ಮಾಡೋದಕ್ಕೆ...
ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಇದೀಗ ನಟ ದರ್ಶನ್ ವಿರುದ್ಧ ಸಿಕ್ಕಾಪಟ್ಟೆ ಸಿಟ್ಟು ಹೊರಹಾಕಿದ್ದಾರೆ. ಖಾಸಗಿ ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ನಿರ್ಮಾಪಕರಾದ ಉಮಾಪತಿ ಶ್ರೀನಿವಾಸ್ ಗೌಡ, ದರ್ಶನ್ ಅವರ ಮಾತುಗಳಿಗೆ ಉತ್ತರ ನೀಡಿದ್ದಾರೆ. ದರ್ಶನ್ ಅವರು ಯಾಕಪ್ಪಾ ನಮ್ಮ ಹತ್ತಿರ ಗುಮ್ಮಿಸಿಕೊಳ್ತೀಯಾ? ಅಂತಾ ಕೇಳಿದ್ದ ಪ್ರಶ್ನೆ ಉತ್ತರವನ್ನ ನೀಡಿರುವ ಉಮಾಪತಿ ಅವರು, ನಾನು ಕೂಡ ಟೈಂ ಬಂದಾಗ ಗುಮ್ಮಿದ್ದೀನಿ ಎಂದಿದ್ದಾರೆ. ಹಾಗೇ ತಮ್ಮ ಮಾತು ಮುಂದುವರಿಸಿ, ಇವರ ಮನೆ ಉದ್ಧಾರ ಮಾಡಲು ನಮ್ಮ ಮನೆಯ ಹಣ ಬೇಕಾ? ಅಂತಾ ಪ್ರಶ್ನೆ ಕೇಳಿದ್ದಾರೆ.
ಕಾಸು ಕೊಟ್ಟವರು ಯಾರು ಗೊತ್ತಾ?
ಇನ್ನು ಈ ಸಮಯದಲ್ಲಿ 'ಕಾಟೇರ' ಸಿನಿಮಾ ಕಥೆ ಬಗ್ಗೆಯೂ ಮಾತನಾಡಿದ ನಿರ್ಮಾಪಕ ಉಮಾಪತಿ ಅವರು, ಕಾಟೇರ ಕಥೆ ಬರೆಸಿದ್ದು ನಾನೇ. ಹಾಗೇ ಕಾಟೇರ ಕಥೆ ಬರೆಯೋದಕ್ಕೆ ಕಾಸು ಕೊಟ್ಟಿದ್ದೂ ನಾನೆ ಅಂತಾ ಹೇಳಿದ್ದಾರೆ. ಈ ಮೂಲಕ ಮತ್ತೊಮ್ಮೆ ಕಾಟೇರ ಚಿತ್ರದ ಮೇಲಿನ ತಮ್ಮ ಹಕ್ಕನ್ನು ಪ್ರತಿಪಾದಿಸಿದ್ದಾರೆ ನಿರ್ಮಾಪಕ ಉಮಾಪತಿ ಅವರು. ಇದೆಲ್ಲವೂ ಈಗ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಹಾಗೇ ದರ್ಶನ್ & ಉಮಾಪತಿ ನಡುವೆ ದೊಡ್ಡ ಜಗಳಕ್ಕೂ ದಾರಿ ಮಾಡಿಕೊಡುತ್ತಿದೆ. ದರ್ಶನ್ ಅವರು ಆಡಿದ ಮಾತುಗಳು ಇದೀಗ ಕಿಚ್ಚು ಹೊತ್ತಿಸಿವೆ.

ನಾನು ಅವರಷ್ಟು ದೊಡ್ಡವನಲ್ಲ..!
ನಿರ್ಮಾಪಕ ಉಮಾಪತಿ ನಟ ದರ್ಶನ್ ಅವರ ಹೇಳಿಕೆಯ ಬಗ್ಗೆ ಕನ್ನಡ ಖಾಸಗಿ ಸುದ್ದಿ ವಾಹಿನಿ ಒಂದಕ್ಕೆ ಬೆಳಗ್ಗೆ ಕೂಡ ಪ್ರತಿಕ್ರಿಯೆ ನೀಡಿದ್ದರು. ಆಗಲೂ ದರ್ಶನ್ ಅವರ ಹೇಳಿಕೆ ಬಗ್ಗೆ, ಗರಂ ಆಗಿ ಮಾತನಾಡಿದ್ದರು. ನಾನು ಅವರಷ್ಟು ದೊಡ್ಡ ನಟನಲ್ಲ, ಹಾಗೇ ಅವರಿಗೆ ನಾವು ಉತ್ತರ ಕೊಡುವಷ್ಟು ದೊಡ್ಡವರು ಕೂಡ ಅಲ್ಲ. ನಿಜ ಏನು ಅನ್ನೋದು ನನಗೆ ಗೊತ್ತು ಎಂದಿದ್ದರು. ಈಗ ನೋಡಿದರೆ ನೇರವಾಗಿ ನ್ಯೂಸ್ ಚಾನೆಲ್ ಲೈವ್‌ಗೆ ಬಂದು, ನಟ ದರ್ಶನ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ದೊಡ್ಡ ಕಿಚ್ಚು ಹೊತ್ತಿಸಿದೆ.












Click it and Unblock the Notifications